ತುಮಕೂರು: ಹೈಕೋರ್ಟ್ ಆದೇಶದ ಬಗ್ಗೆ ಕ್ಷೇತ್ರದಲ್ಲಿ ಗೊಂದಲ ಹೆಚ್ಚುತ್ತಿದ್ದು, ಕಾರ್ಯಕರ್ತರು ಗೊಂದಲಕ್ಕೆ ಒಳಗಾಗುವುದು ಬೇಡ ಎಂದು ಶಾಸಕ ಡಿ.ಸಿ.ಗೌರಿಶಂಕರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೈಕೋರ್ಟ್ನಲ್ಲಿ ಅರ್ಜಿದಾರರು ಸಲ್ಲಿಸಿದ್ದ ಮನವಿಯನ್ನು ಭಾಗಶಃ ಪುರಸ್ಕರಿಸಿದೆ. ಗೌರಿಶಂಕರ್ ಚುನಾವಣೆಯಲ್ಲಿ ನಿಲ್ಲಬಾರದು ಎಂದು ಆದೇಶದಲ್ಲಿ ಇಲ್ಲ ಎಂದು ಹೇಳಿದರು.
ಹೈಕೋರ್ಟ್ ಆದೇಶದಲ್ಲಿ ನನ್ನ ಆಯ್ಕೆಯನ್ನು ಅಸಿಂಧುಗೊಳಿಸಿಲ್ಲ. ಯಾವುದೇ ಆದೇಶವಿಲ್ಲದೆ, ಹೈಕೋರ್ಟ್ ದಾಖಲೆಗಳಿಲ್ಲದೇ ಮಾಜಿ ಶಾಸಕರು ಪತ್ರಿಕಾಗೋಷ್ಠಿ ನಡೆಸುತ್ತಾರೆ. ಮಾಧ್ಯಮಗಳು ಅದನ್ನೇ ಬರೆಯುತ್ತಾರೆ ಎಂದರು.
ಕಮ್ಮಗೊಂಡನಹಳ್ಳಿ ಆಂಜನೇಯ ಟ್ರಸ್ಟ್ ನಲ್ಲಿ ಗೌರಿಶಂಕರ್ ಭಾಗಿಯಲ್ಲ ಎಂದು ಹೈಕೋರ್ಟ್ ಆದೇಶದಲ್ಲಿದೆ. ಅಕ್ರಮ ಮಾಡಿರುವ ಐದು ಮಂದಿ ಆರೋಪದ ಮೇಲೆ ಶಾಸಕರ ಆಯ್ಕೆಯನ್ನು ಅಸಿಂಧು ಮಾಡಲಾಗಿದೆ ಎಂದು ಹೇಳಿದರು.
ಆರೋಪಿತ ಐದು ಮಂದಿಯಲ್ಲಿ ಅರೇಹಳ್ಳಿ ಮಂಜುನಾಥ್ ಎಂಬುವನು ಯಾರು ಎನ್ನುವುದೇ ಗೊತ್ತಿಲ್ಲ. ಅವನ ಪರಿಚಯವೂ ಇಲ್ಲ, ನ್ಯಾಯಾಲಯ ನನಗೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಹೇಳಿಲ್ಲ. ಹಾಗಾಗಿ ಕಾರ್ಯಕರ್ತರು ಗೊಂದಲ, ಭಯಕ್ಕೆ ಒಳಗಾಗುವುದು ಬೇಡ ಎಂದರು.
ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣಕ್ಕೆ ಮೇಲ್ಮನವಿ ಸಲ್ಲಿಸಲಿದ್ದೇನೆ. ಮಾಜಿ ಮುಖ್ಯಮಂತ್ರಿ ಕುಮಾರಣ್ಣ ಅವರೊಂದಿಗೂ ಚರ್ಚಿಸಿದ್ದು, ಸುಪ್ರೀಂ ಕೋರ್ಟ್ ನಲ್ಲಿ ನನಗೆ ನ್ಯಾಯ ಸಿಗಲಿದೆ ಎಂಬ ವಿಶ್ವಾಸವಿದೆ. ಸುಪ್ರೀಂಕೋರ್ಟ್ನಲ್ಲಿ ಹೋರಾಟ ಮಾಡುವ ಜವಾಬ್ದಾರಿಯನ್ನು ಕುಮಾರಣ್ಣ ತೆಗೆದುಕೊಂಡಿದ್ದಾರೆ ಎಂದರು.
ಗ್ರಾಮಾಂತರ ಕ್ಷೇತ್ರದ ಮನೆ ಮಗನಾಗಿ ಕೆಲಸ ಮಾಡಿದ್ದೇನೆ. ದುರಂಹಕಾರದಿಂದ ವರ್ತಿಸಿಲ್ಲ, ಬೆಂಗಳೂರು ಯೂನಿವರ್ಸಿಟಿಯಲ್ಲಿ ನಕಲಿ ಅಂಕಪಟ್ಟಿ ನೀಡಿದ್ದು ಧರ್ಮನಾ? ಕಾಪಿ ಹೊಡೆದು ಕ್ಷಮಾಪಣೆ ಬರೆದುಕೊಟ್ಟಿದ್ದೀರಲ್ಲ ಅದು ಧರ್ಮನಾ? ಚುನಾವಣಾ ಪ್ರಚಾರದಲ್ಲಿ ಸೀರೆ, ಬಾಡೂಟ ಹಾಕಿಸಿದ್ದು ಧರ್ಮನಾ? ಚುನಾವಣೆ ಹೇಗೆ ನಡೆಯುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಟೀಕಿಸಿದರು.
ಗೌರಿಶಂಕರ್ ಸಾಯೋದು ಜನರು ಮನೆಗೆ ಬರದ ದಿನ, ಮಾಜಿ ಶಾಸಕರು 16,500 ನಕಲಿ ಬಾಂಡ್ ಹಂಚಿದ್ದನ್ನು ಸಾಬೀತು ಪಡಿಸಲಿ, ನಕಲಿ ಬಾಂಡ್ ಹಂಚಿದ್ದು ಕಂಡು ಬಂದಿಲ್ಲ ಎಂದು ಹೈ ಕೋರ್ಟ್ ಹೇಳಿದೆ, 10 ವರ್ಷ ಅಧಿಕಾರದಲ್ಲಿ ನೀವು ಏನು ಮಾಡಿಲ್ಲವೇ? ಸೋತಾಗಿನಿಂದಲೂ ಜೆಡಿಎಸ್ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಿರಂತರವಾಗಿ ನಡೆಯುತ್ತಿದೆ ಎಂದು ಆರೋಪಿಸಿದರು.
ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಲು ಬಿಡಲಿಲ್ಲ. ಸಾರ್ವಜನಿಕರ ಕೆಲಸ ಮಾಡಲು ಅವಕಾಶ ನೀಡಲಿಲ್ಲ. ಬೇರೆಯವರು ಯಾರು ಎಂಎಲ್ಎ ಆಗಬಾರದ? ಅಭಿವೃದ್ಧಿ ಕೆಲಸಗಳಿಗೆ ಅಡ್ಡಿ ಹಾಕಿದರು, ಕ್ಷೇತ್ರಕ್ಕೆ 4 ಕೋಟಿ ಅನುದಾನ ತಂದು ಗುಬ್ಬಿಯಲ್ಲಿ ಕೆಲಸ ಮಾಡಿಸಿದರು. ಇದು ಅವರಿಗೆ ಕ್ಷೇತ್ರದ ಬಗ್ಗೆ ಇರುವ ಕಾಳಜಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೈಕೋರ್ಟ್ ತೀರ್ಪು ಬರುವ ಮುಂಚೆಯೇ ಫಲಿತಾಂಶ ಹೀಗೆ ಬರಲಿದೆ ಎಂದು ಸ್ನೇಹಿತರೊಬ್ಬರು ಫೋನ್ ಮಾಡಿದ್ದರು, ಮಾಜಿ ಶಾಸಕರು ಯಾರ ಮೇಲೆ ಪ್ರಭಾವ ಬೀರಿದ್ದಾರೆ ಯಾರು ಇದರಲ್ಲಿ ಪಾಲ್ಗೊಂಡಿದ್ದಾರೆ ಎಂಬುದು ಎಲ್ಲ ಗೊತ್ತಿದೆ ಎಂದು ಹೇಳಿದರು.
ಕ್ಷೇತ್ರದಲ್ಲಿ ಗೌರಿಶಂಕರ್ ಮತ್ತೆ ಗೆಲ್ಲುತ್ತಾನೆ ಎಂಬ ದುರುದ್ದೇಶದಿಂದಲೇ ಷಡ್ಯಂತ್ರ ಮಾಡಿದ್ದಾರೆ. ರಾಹುಲ್ ಗಾಂಧಿಯನ್ನೇ ಬಿಡಲಿಲ್ಲ ನನ್ನು ಬಿಡುತ್ತಾರೆಯೇ, ನೂರಾರು ಪ್ರಕರಣಗಳು ಮಾಜಿ ಶಾಸಕರ ಮೇಲಿದ್ದರೂ ಸಹ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಬಗರ್ ಹುಕುಂ ಅಕ್ರಮ, ಲೋಕಾಯುಕ್ತ ಪ್ರಕರಣವೂ ಶೀಘ್ರ ಈಚೆಗೆ ಬರಲಿದೆ ಎಂದರು.
ಕಾರ್ಯಕರ್ತರು ಯಾವುದೇ ಆತಂಕಕ್ಕೆ ಒಳಗಾಗುವವ ಅವಶ್ಯಕತೆ ಇಲ್ಲ. ನಾನೇ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ಜನತಾ ನ್ಯಾಯಾಲಯದಲ್ಲಿ ಗೌರಿಶಂಕರ್ ಗೆಲ್ಲುತ್ತಾನೆ ಎಂದು ವಾಮಮಾರ್ಗ ಅನುಸರಿಸಿದ್ದಾರೆ. ಪ್ರಜಾಪ್ರತಿನಿಧಿ ಕಾಯ್ದೆಯಡಿ ಅರ್ಜಿಯನ್ನೇ ಸಲ್ಲಿಸಿಲ್ಲ. ಚುನಾವಣಾಧಿಕಾರಿಗೆ ದೂರು ಕೊಡದೇ ನ್ಯಾಯಾಲಯಕ್ಕೆ ಹೋಗಿದ್ದು ಏಕೆ? ಸೋಲುವ ಭೀತಿ ಎದುರಿಸುತ್ತಿರುವುದಕ್ಕೆ ಇಂತಹ ಮಾರ್ಗಗಳನ್ನು ಹಿಡಿಯುತ್ತಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹಾಲನೂರು ಅನಂತ್, ಬೆಳಗುಂಬ ವೆಂಕಟೇಶ್, ನರುಗನಹಳ್ಳಿ ಮಂಜುನಾಥ್, ಹಿರೇಹಳ್ಳಿ ಮಹೇಶ್, ಹೆತ್ತೇನಹಳ್ಳಿ ಮಂಜುನಾಥ್, ಟಿ.ಆರ್.ನಾಗರಾಜು, ದೀಪು, ವಿಷ್ಣುವರ್ಧನ್ ಇತರರಿದ್ದರು.
Comments are closed.