ಕಾಯಕ ಯೋಗಿಯ ಜನ್ಮ ಜಯಂತಿ ಆಚರಣೆ

ಹರಗುರು ಚರಮೂರ್ತಿಗಳಿಂದ ಪೂಜಾ ಕೈಂಕರ್ಯ- ಶ್ರೀಗಳ ಕಂಚಿನ ಪುತ್ಥಳಿ ಮೆರವಣಿಗೆ- ಗದ್ದುಗೆ ದರ್ಶನ ಪಡೆದ ಭಕ್ತ ಸಾಗರ

118

Get real time updates directly on you device, subscribe now.


ತುಮಕೂರು: ಲಕ್ಷಾಂತರ ಬಡ ಮಕ್ಕಳಿಗೆ ಅನ್ನ, ಆಶ್ರಯ ನೀಡಿ ಅವರ ಬದುಕಿಗೆ ಬೆಳಕಾಗಿದ್ದ ಕಾಯಕ ಯೋಗಿ, ತ್ರಿವಿಧ ದಾಸೋಹಿ, ನಡೆದಾಡುವ ದೇವರೆಂದೇ ನಾಡಿನ ಉದ್ದಗಲಕ್ಕೂ ಹೆಸರುವಾಸಿಯಾಗಿದ್ದ ಸಿದ್ದಗಂಗಾ ಮಠದ ಶಿವೈಕ್ಯ ಡಾ.ಶಿವಕುಮಾರ ಸ್ವಾಮೀಜಿಯವರ 116ನೇ ಜನ್ಮ ಜಯಂತಿ ಹಾಗೂ ಗುರುವಂದನಾ ಮಹೋತ್ಸವ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
12ನೇ ಶತಮಾನದ ಬಸವಣ್ಣನವರ ತತ್ವಾದರ್ಶಗಳನ್ನು ಚಾಚೂ ತಪ್ಪದೇ ಪಾಲನೆ ಮಾಡುತ್ತಾ ಸಮಾಜದ ಉದ್ಧಾರಕ್ಕೆ ಸದಾ ತುಡಿಯುತ್ತಿದ್ದ ಆಧುನಿಕ ಬಸವಣ್ಣ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಯವರ 116ನೇ ಜಯಂತಿಗೆ ವಿವಿಧ ಮಠಾಧೀಶರು, ಹರ ಗುರು ಚರಮೂರ್ತಿಗಳು, ಗಣ್ಯಾತಿ ಗಣ್ಯರು ಹಾಗೂ ಲಕ್ಷಾಂತರ ಭಕ್ತರು ಸಾಕ್ಷಿಯಾದರು.

ನಾಡಿನ ಭಕ್ತಾದಿಗಳ ಮನ ಮನೆಗಳ ದೈವೀ ಪ್ರಭೆಯಾಗಿದ್ದ ಲಿಂ.ಡಾ.ಶಿವಕುಮಾರ ಸ್ವಾಮೀಜಿಯವರು ಐಕ್ಯರಾಗಿರುವ ಶಿವಯೋಗಿ ಮಂದಿರದ ಗದ್ದುಗೆಯಲ್ಲಿ ಮುಂಜಾನೆಯಿಂದಲೇ ಧಾರ್ಮಿಕ ವಿಧಿ ವಿಧಾನ, ಅಭಿಷೇಕ, ಅಷ್ಟೋತ್ತರ, ಮಹಾ ಮಂಗಳಾರತಿ, ಭಜನಾ ಮಂತ್ರ ಘೋಷಗಳು ಮೊಳಗಿದವು.
ಶ್ರೀಗಳ 116ನೇ ಜಯಂತಿ ವಿಶೇಷವಾಗಿ ನಸುಕಿನಲ್ಲೇ ಶ್ರೀಕ್ಷೇತ್ರದ ಬೆಟ್ಟದ ಮೇಲೆ ಪುನರ್ ನಿರ್ಮಾಣಗೊಂಡಿರುವ ಸಿದ್ದಲಿಂಗೇಶ್ವರ ಸ್ವಾಮಿಯ ದೇವಸ್ಥಾನದ ವಿಮಾನ ಗೋಪುರದ ಮೇಲೆ ಕಳಸ ಸ್ಥಾಪನೆ ಮಾಡಲಾಯಿತು.
ಕಳಸ ಸ್ಥಾಪನೆ ಬಳಿಕ ಶ್ರೀಗಳ ಗದ್ದುಗೆಗೆ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಹರ ಗುರು ಚರಮೂರ್ತಿಗಳ ಸಮ್ಮುಖದಲ್ಲಿ ರುದ್ರಾಭಿಷೇಕ, 108 ಅಷ್ಟೋತ್ತರ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯ, ಮಹಾ ಮಂಗಳಾರತಿ ನೆರವೇರಿತು.
ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಯವರು ಪರಮಪೂಜ್ಯರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸುವ ಮೂಲಕ ಆಶೀರ್ವಾದ ಪಡೆದರು. ಮೈಸೂರಿನ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರು ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಿದ್ದ ಗದ್ದುಗೆಗೆ ಪುಷ್ಪ ನಮನ ಸಲ್ಲಿಸಿ ಭಕ್ತಿ ಸಮರ್ಪಿಸಿದರು.

ಗದ್ದುಗೆ ಮಂದಿರದ ಮುಂಭಾಗದಿಂದ ಆರಂಭವಾದ ಶ್ರೀಗಳ ಕಂಚಿನ ಪುತ್ಥಳಿ ಹೊತ್ತ ರುದ್ರಾಕ್ಷಿ ಮಂಟಪದ ಮೆರವಣಿಗೆಗೆ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಚಾಲನೆ ನೀಡಿದರು. ಮೆರವಣಿಗೆಯುದ್ಧಕ್ಕೂ ನಂದಿಧ್ವಜ ಕುಣಿತ, ಕರಡಿ ವಾದ್ಯ, ಡೋಲು ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳ ಪ್ರದರ್ಶನ ನೋಡುಗರ ಗಮನ ಸೆಳೆದವು. ಶ್ರೀಮಠದ ಆವರಣದಲ್ಲಿ ಮೆರವಣಿಗೆಯುದ್ದಕ್ಕೂ ಪೂರ್ಣಕುಂಭ ಕಳಸ ಹೊತ್ತ ಸುಮಂಗಲಿಯರು ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

116 ಮಕ್ಕಳಿಗೆ ನಾಮಕರಣ
ಡಾ.ಶಿವಕುಮಾರ ಮಹಾ ಸ್ವಾಮೀಜಿ ಅನ್ನದಾನ ಸೇವಾ ಟ್ರಸ್ಟ್ ವತಿಯಿಂದ ನಡೆದಾಡುವ ದೇವರು, ತ್ರಿವಿಧ ದಾಸೋಹ ಮೂರ್ತಿ, ಪದ್ಮಭೂಷಣ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಯವರ 116ನೇ ಜಯಂತ್ಯೋತ್ಸವದ ಅಂಗವಾಗಿ 116 ಮಕ್ಕಳಿಗೆ ಶಿ ಅಕ್ಷರದಿಂದ ಪ್ರಾರಂಭವಾಗುವ ಹೆಸರುಗಳನ್ನು ನಾಮಕರಣ ಮಾಡಲಾಯಿತು.
ಉಚಿತ ನಾಮಕರಣ ಮಹೋತ್ಸವದಲ್ಲಿ ಪಾಲ್ಗೊಂಡಿದ್ದವರಿಗೆ ಹೊಸ ತೊಟ್ಟಿಲು, ತೊಟ್ಟಿಲ ಹಾಸಿಗೆ, ತೊಟ್ಟಿಲ ದಿಂಬು ಹಾಗೂ ಶ್ರೀಗಳ ಭಾವಚಿತ್ರ ಉಚಿತವಾಗಿ ನೀಡಲಾಯಿತು.
ಶ್ರೀಮಠದ ಆವರಣದಲ್ಲಿ ಭಕ್ತರೊಬ್ಬರು ಬಗೆ ಬಗೆಯ ಹೂವುಗಳಿಂದ ನಿರ್ಮಿಸಿದ್ದ ಶಿವಲಿಂಗ ಶ್ರೀಗಳ 116ನೇ ಜಯಂತ್ಯೋತ್ಸವದ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.
ರಾಜ್ಯದ ವಿವಿಧೆಡೆಗಳಿಂದ ಶ್ರೀಮಠಕ್ಕೆ ಆಗಮಿಸಿದ್ದ ಲಕ್ಷಾಂತರ ಮಂದಿ ಭಕ್ತಾದಿಗಳಿಗೆ ವಸ್ತುಪ್ರದರ್ಶನ ಆವರಣ, ಪ್ರಾರ್ಥನಾ ಮಂದಿರ, ಹಳೆಯ ಮತ್ತು ಹೊಸ ಪ್ರಸಾದ ನಿಲಯ, ಸಾದರ ಕೊಪ್ಪಲು ಸೇರಿದಂತೆ 5 ಕಡೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.
ಸಂಸದ ಜಿ.ಎಸ್. ಬಸವರಾಜು, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಹಾಗೂ ವಿವಿಧ ಮಠಾಧೀಶರುಗಳು ಶ್ರೀಗಳ ಗದ್ದುಗೆ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು.
ಈ ಬಾರಿ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಶ್ರೀಮಠಕ್ಕೆ ಯಾವುದೇ ರಾಜಕಾರಣಿಗಳು, ಸಚಿವರು ಭೇಟಿ ನೀಡಿಲ್ಲ. ಹಾಗಾಗಿ ಶ್ರೀಮಠಕ್ಕೆ ಆಗಮಿಸುತ್ತಿರುವ ಭಕ್ತರಿಗೆ ಪೊಲೀಸರಿಂದ ಯಾವುದೇ ರೀತಿಯ ಕಿರಿಕಿರಿ ಇಲ್ಲದೆ ನಿರಾಯಾಸದಾಯಕವಾಗಿ ಭಕ್ತರು ಮಠಕ್ಕೆ ಬಂದು ಗದ್ದುಗೆ ದರ್ಶನ ಪಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿದ್ದವು.
ಶ್ರೀಗಳ 116ನೇ ಜಯಂತಿ ಪ್ರಯುಕ್ತ ತುಮಕೂರು ನಗರದಾದ್ಯಂತ ಭಕ್ತವೃಂದ ಪೆಂಡಾಲ್ಗಳನ್ನು ಹಾಕಿ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅನ್ನದಾಸೋಹ ಏರ್ಪಡಿಸುವ ಮೂಲಕ ಭಕ್ತಿ ಸಮರ್ಪಿಸಿದರು.

Get real time updates directly on you device, subscribe now.

Comments are closed.

error: Content is protected !!