ತುಮಕೂರು: ಜಿಲ್ಲೆಯಲ್ಲಿ ಸುಮಾರು 13 ಲಕ್ಷ ಜನಸಂಖ್ಯೆ ಹೊಂದಿರುವ ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ವಿಫಲವಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಗುಬ್ಬಿ, ಚಿಕ್ಕನಾಯಕನ ಹಳ್ಳಿ, ಶಿರಾ ಮತ್ತು ತುಮಕೂರು ನಗರ ಕ್ಷೇತ್ರಗಳಲ್ಲಿ ಒಬಿಸಿ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವಂತೆ ತುಮಕೂರು ಜಿಲ್ಲಾ ಹಿಂದುಳಿದ ವರ್ಗಗಳ ರಾಜಕೀಯ ಪ್ರಾತಿನಿಧ್ಯಕ್ಕಾಗಿ ಹಕ್ಕೊತ್ತಾಯ ಸಮಿತಿಯ ಪುಟ್ಟರಾಜು ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ 11 ಕ್ಷೇತ್ರಗಳಲ್ಲಿ 2 ಕ್ಷೇತ್ರಗಳನ್ನು ಪರಿಶಿಷ್ಟ ಜಾತಿ ಗೆ ಮೀಸಲಿಡಲಾಗಿದೆ. ಉಳಿದ 9 ರಲ್ಲಿ ತುಮಕೂರು ನಗರ ಮತ್ತು ಚಿಕ್ಕನಾಯಕನ ಹಳ್ಳಿಯಲ್ಲಿ ಜೆಡಿಎಸ್ ಪಕ್ಷದಿಂದ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಟಿಕೇಟ್ ಘೋಷಣೆ ಮಾಡಲಾಗಿದೆ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಇದುವರೆಗೂ ಒಬಿಸಿಯವರಿಗೆ ಟಿಕೆಟ್ ನೀಡಿಲ್ಲ ಎಂದು ದೂರಿದರು.
ಬಿಜೆಪಿಯಿಂದ ತುಮಕೂರು ನಗರ ಕ್ಷೇತ್ರದಿಂದ ಡಾ.ಎಂ.ಆರ್.ಹುಲಿನಾಯ್ಕರ್, ಶಿರಾದಿಂದ ಬಿ.ಕೆ.ಮಂಜುನಾಥ್, ಗುಬ್ಬಿಯಿಂದ ಬೆಟ್ಟಸ್ವಾಮಿ ಅವರು ಟಿಕೆಟ್ ಆಕಾಂಕ್ಷಿಗಳಾಗಿದ್ದರೆ, ಕಾಂಗ್ರೆಸ್ನಿಂದ ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ರೇಣುಕಯ್ಯ ಉಪ್ಪಾರ, ವೈ.ಸಿ.ಸಿದ್ದರಾಮಯ್ಯ, ಶಿರಾದಿಂದ ಸಾಸಲು ಸತೀಶ್ ಅವರು ಆಕಾಂಕ್ಷಿಸಿಗಳಾಗಿದ್ದಾರೆ.
ಕಾಂಗ್ರೆಸ್ ಈಗಾಗಲೇ ಬಿಡುಗಡೆ ಮಾಡಿರುವ 124 ಕ್ಷೇತ್ರಗಳ ಪಟ್ಟಿಯಲ್ಲಿ ಶಿರಾ ಮತ್ತು ಚಿಕ್ಕನಾಯಕನ ಹಳ್ಳಿ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಕೂಡಲೆ ಪಟ್ಟಿ ಮರು ಪರಿಶೀಲನೆಗೆ ಒಳಪಡಿಸಿ ಚಿಕ್ಕನಾಯಕನಹಳ್ಳಿಯಿಂದ ರೇಣುಕಯ್ಯ ಉಪ್ಪಾರ್, ಇಲ್ಲವೇ ವೈ.ಸಿ.ಸಿದ್ದರಾಮಯ್ಯ ಅವರಿಗೆ, ಹಾಗೆಯೇ ಶಿರಾದಲ್ಲಿ ಸಾಸಲು ಸತೀಶ್ ಅವರಿಗೆ ಟಿಕೆಟ್ ನೀಡಬೇಕೆಂದು ಪುಟ್ಟರಾಜು ಆಗ್ರಹಿಸಿದರು.
ಕಳೆದ ಹತ್ತು ವರ್ಷಗಳಿಂದ ಡಾ.ಹುಲಿನಾಯ್ಕರ್ ಅವರು ಬಿಜೆಪಿ ಪಕ್ಷಕ್ಕಾಗಿ ತಮ್ಮ ತನು, ಮನ, ಧನ ಖರ್ಚು ಮಾಡಿ ಪಕ್ಷ ಕಟ್ಟಿದ್ದಾರೆ. ಇಂದಿಗೂ ಬಿಜೆಪಿಯ ಬಹುತೇಕ ಕಾರ್ಯಕ್ರಮಗಳು ಶ್ರೀದೇವಿ ಕಾಲೇಜಿನಲ್ಲಿ ನಡೆಯಲು ಅವಕಾಶ ಕಲ್ಪಿಸಿದ್ದಾರೆ. ಅವರ ಮಗಳು ಸಹ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ. ಶಿರಾ ಕ್ಷೇತ್ರದ ಆಕಾಂಕ್ಷಿ ಬಿ.ಕೆ.ಮಂಜುನಾಥ್ ಮಧುಗಿರಿ ಜಿಲ್ಲೆಯ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಗುಬ್ಬಿಯ ಬೆಟ್ಟಸ್ವಾಮಿ ಕಳೆದ ಎರಡು ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ್ದಾರೆ. ಹಾಗಾಗಿ ಬಿಜೆಪಿ ಪಕ್ಷದ ಮುಖಂಡತ್ವ ಈ ಮೂರು ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗಗಳಿಗೆ ಟಿಕೆಟ್ ನೀಡಬೇಕೆಂಬುದು ಒತ್ತಾಯವಾಗಿದೆ. ಒಂದುವೇಳೆ ಬಿಜೆಪಿ, ಕಾಂಗ್ರೆಸ್ ಒಬಿಸಿ ವರ್ಗಕ್ಕೆ ಟಿಕೆಟ್ ನೀಡಿದಿದ್ದರೆ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿಂದುಳಿದ ಸಮುದಾಯಕ್ಕೆ ಸೇರಿದ ಈರಣ್ಣ ಕೆಂಪನದೊಡ್ಡೇರಿ, ರೇಣುಕಯ್ಯ ಉಪ್ಪಾರ್, ಗರುಡಯ್ಯ, ಮಂಜುನಾಥ್, ರಾಜೇಶ್ ದೊಡ್ಮನೆ ಇತರರು ಇದ್ದರು.
Comments are closed.