ಪ್ರತಿಯೊಬ್ಬರು ತಪ್ಪದೆ ಮತದಾನ ಮಾಡಿ: ಡೀಸಿ

ವಿಶೇಷಚೇತನರು ಮತದಾನ ಮಾಡಲು ವಾಹನ ವ್ಯವಸ್ಥೆ

137

Get real time updates directly on you device, subscribe now.


ತುಮಕೂರು: ಜಿಲ್ಲೆಯಲ್ಲಿ ಸುಮಾರು 29,700 ವಿಶೇಷ ಚೇತನ ಮತದಾರರಿದ್ದು, ಇವರೆಲ್ಲರೂ ಮೇ 10ರ ಮತದಾನ ಹಬ್ಬದ ದಿನ ಮತದಾನ ಮಾಡಲು ಅನುಕೂಲವಾಗುವಂತೆ ಅಂದು ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ ವಾಹನ ಸೌಲಭ್ಯ ಕಲ್ಪಿಸಲಿದ್ದು, ಈ ಸೌಲಭ್ಯ ಬಳಸಿಕೊಂಡು ವಿಶೇಷಚೇತನರು ತಮ್ಮ ವ್ಯಾಪ್ತಿಯ ಮತಗಟ್ಟೆಗೆ ತೆರಳಿ ತಪ್ಪದೆ ಮತದಾನ ಮಾಡುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮನವಿ ಮಾಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸ್ವೀಪ್ ಸಮಿತಿ ವತಿಯಿಂದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ವಿಧಾನ ಸಭಾ ಚುನಾವಣೆ 2023ರ ವಿಕಲಚೇತನರ ಹಾಗೂ ತೃತೀಯ ಲಿಂಗಿ ಮತದಾರರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಕಲಚೇತನ ಮತದಾರರು ತಮ್ಮ ಹಕ್ಕನ್ನು ಚಲಾಯಿಸುವುದಕ್ಕಾಗಿ ಮತಗಟ್ಟೆಗಳಿಗೆ ತಲುಪಲು ಪ್ರತಿ ಗ್ರಾಮ ಪಂಚಾಯಿತಿ 6-8 ಕಿಲೋ ಮೀಟರ್ ವ್ಯಾಪ್ತಿಗೆ ಒಂದು ಆಟೋ ನೀಡಲಾಗುವುದು ಎಂದು ತಿಳಿಸಿದರು.
ಕಲೆ ಮತ್ತು ಸಂಗೀತಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅತ್ಯುತ್ತಮ ಕಲಾವಿದರನ್ನು ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ. ಅವರು ತಮ್ಮ ಸಂಗೀತ ಗಾಯನದ ಮೂಲಕ ಮತದಾರರಲ್ಲಿ ಅರಿವು ಮೂಡಿಸಬೇಕು. ತೃತೀಯ ಲಿಂಗಿ ಮತದಾರರು ತಮ್ಮ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸುವುದರ ಕುರಿತು ತೃತೀಯ ಲಿಂಗಿಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ಮತದಾನದ ದಿನವನ್ನು ಹಬ್ಬದ ರೀತಿಯಲ್ಲಿ ಆಚರಿಬೇಕು ಹಾಗೂ ಯಾವ ಮತದಾರ ಮತಗಟ್ಟೆಗೆ ಬರಲು ಸಾಧ್ಯವಿಲ್ಲವೋ ಅಂತಹ ಮತದಾರ ನಮೂನೆ 12ಡಿ ಪಡೆದು ಅಂಚೆಮತ ಚಲಾಯಿಸಬೇಕು. ಉಳಿದವರು ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ವಿಧಾನಸಭಾ ಚುನಾವಣೆಗೆ ಮೇ 10 ರಂದು ಮತದಾನ ನಡೆಯಲಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ.82ರಷ್ಟು ಮತದಾನ ಆಗಿರುತ್ತದೆ. ಈ ಬಾರಿ ಶೇ.100 ರಷ್ಟು ಮತದಾನ ಆಗಬೇಕಿದೆ. ನಗರ ಭಾಗದಲ್ಲಿ ಶೇಕಡಾ 65 ರಷ್ಟು ಮತದಾನ ಪ್ರಮಾಣ ಇದ್ದು, ಇದೂ ಸಹ ಶೇ.100ಕ್ಕೆ ಹೆಚ್ಚಳವಾಗಬೇಕಿದೆ ಎಂದು ಹೇಳಿದರು.

ಯುವ ಮತದಾರರು ಮತಗಟ್ಟೆಗಳಿಗೆ ಬಂದು ಮತ ಚಲಾವಣೆ ಮಾಡದೆ ಮತದಾನದಿಂದ ಹೊರಗೆ ಉಳಿಯುತ್ತಿದ್ದಾರೆ. ಆದ್ದರಿಂದ ಯುವ ಮತದಾರರು ಮತ ಚಲಾವಣೆ ಮಾಡುವ ಹಾಗೇ ಅವರಲ್ಲಿ ಮತದಾನದ ಪ್ರಾಮುಖ್ಯತೆ ಬಗ್ಗೆ ತಿಳಿಸಬೇಕು. ತೃತೀಯ ಲಿಂಗಿಗಳು ಮತಗಟ್ಟೆಗಳಿಗೆ ಬರಲು ಹಿಂದೇಟು ಹಾಕುವ ಮೂಲಕ ಮತದಾನದಿಂದ ದೂರ ಉಳಿಯುತ್ತಿದ್ದಾರೆ ಎಂದರು.
ವಿಕಲಚೇತನರು ನಗರದ ಜ್ಯೂನಿಯರ್ ಕಾಲೇಜು ಮೈದಾನದಿಂದ ಜಿಲ್ಲಾ ಪಂಚಾಯತ್ ಆವರಣದವರೆಗೆ ಮೂರು ಚಕ್ರದ ಬೈಕ್ ಹಾಗೂ ಸೈಕಲ್ ಮೂಲಕ ಮತದಾನದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಜಾಥಾ ನಡೆಸಿದರು.
ಭಾರತದ ಸಂವಿಧಾನದಲ್ಲಿ ಎಲ್ಲರಿಗೂ ಮತ ಚಲಾಯಿಸುವ ಹಕ್ಕು ಇದೆ. ಜಿಲ್ಲೆಯ ಎಲ್ಲಾ ಮತದಾರರು ತಮ್ಮ ಹಕ್ಕನ್ನು ಚಲಾಯಿಸುವುದರ ಮೂಲಕ ಜಿಲ್ಲೆಯ ಮತದಾನದ ಪ್ರಮಾಣ ಶೇಕಡಾ ನೂರರಷ್ಟು ಆಗಬೇಕು ಎಂದರಲ್ಲದೆ ಮತದಾನದ ಮಹತ್ವವನ್ನು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸವನ್ನು ಸ್ವೀಪ್ ಸಮಿತಿಯಿಂದ ಹಲವಾರು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.

ಜಿಲ್ಲಾ ಚುನಾವಣಾ ರಾಯಭಾರಿ ಕಥಾಕೀರ್ತನ ಗಾಯಕ ಲಕ್ಷ್ಮಣ್ ದಾಸ್ ಮಾತನಾಡಿ, ಚುನಾವಣಾ ಆಯೋಗವು ರಾಯಭಾರಿಗಳಿಗೆ ನೀಡಿದ ಜವಾಬ್ದಾರಿ ಪ್ರಾಮಾಣಿಕತೆಯಿಂದ ನಿರ್ವಹಿಸುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಚುನಾವಣಾ ರಾಯಭಾರಿಗಳಾದ ಗಾಯಕ ಕಂಬದ ರಂಗಯ್ಯ, ಬುಡಕಟ್ಟು ಹಾಡುಗಾರ ಮೋಹನ್ ಕುಮಾರ್, ಸಮಾಜ ಸೇವಕಿ ಲಿಲ್ಲಿ, ಹಾಡುಗಾರರಾದ ಮಂಜಮ್ಮ ಹಾಗೂ ರತ್ನಮ್ಮ ಮಾತನಾಡಿ, ಮತದಾನ ಮಾಡುವಂತೆ ಕೋರುತ್ತಾ, ತಮ್ಮ ಕಲಾ ಪ್ರಕಾರಗಳನ್ನು ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಚುನಾವಣಾ ರಾಯಭಾರಿಗಳನ್ನು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಡಾ.ಕೆ.ವಿದ್ಯಾಕುಮಾರಿ ಅವರು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪೂರ್ ವಾಡ್ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!