ಗುಬ್ಬಿ: ನನ್ನ ಜೀವನದಲ್ಲಿ ಯಾವತ್ತೂ ಜಾತಿ ಭೇದ ಮಾಡಿಲ್ಲ. ಎಲ್ಲರೂ ಒಂದೇ ಎಂದೆ ಭಾವಿಸಿದ್ದೇನೆ ಎಂದು ಮಾಜಿ ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಗುಬ್ಬಿ ತಾಲೂಕಿನ ಮಣ್ಣಮ್ಮ ದೇವಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಕಾಂಗ್ರೆಸ್ ಪಕ್ಷದ ಪರವಾಗಿ ಮನೆ ಮನೆಗೆ ಮತ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿ, ನಾನು ಕಾಂಗ್ರೆಸ್ ಪಕ್ಷಕ್ಕೆ ಬಂದ ಮೇಲೆ ಯಾರೋ ಒಂದಿಬ್ಬರು ಮಾತ್ರ ನನ್ನಿಂದ ದೂರವಿದ್ದು ಎಲ್ಲರೂ ನನ್ನ ಜೊತೆಯಲ್ಲಿ ಬರುತ್ತಿರುವುದು ಆತ್ಮಸ್ಥೈರ್ಯ ತುಂಬಿದೆ. ಇದುವರೆಗೂ ಬೇರೆ ಪಕ್ಷದಲ್ಲಿ ಇದ್ದುಕೊಂಡು ಈಗ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದೇನೆ. ನಾನು ಎಂದಾದರೂ ತಮ್ಮಲ್ಲಿ ತಪ್ಪಾಗಿ ನಡೆದುಕೊಂಡಿದ್ದರೆ ಕ್ಷಮಿಸಿಬಿಡಿ. ಎಲ್ಲರೂ ಒಟ್ಟಾಗಿ ಸಾಗಿದಾಗ ಖಂಡಿತವಾಗಿ ಕಾಂಗ್ರೆಸ್ ಪಕ್ಷ ತಾಲೂಕಿನಲ್ಲಿ ಗೆಲುವು ಪಡೆಯುತ್ತದೆ ಎಂದರು.
ಕಳೆದ ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿಯಲ್ಲಿ ಮೈಮರೆತು ಸೋಲು ಅನುಭವಿಸಿದ್ದೆವು. ನಂತರದ ಎಪಿಎಂಸಿ ಚುನಾವಣೆಯಲ್ಲಿ ಗೆಲುವು ಪಡೆಯುವ ಮೂಲಕ ನಮ್ಮ ಕಾರ್ಯಕರ್ತರ ಶಕ್ತಿ ಏನೆಂಬುದು ಎಲ್ಲರಿಗೂ ತಿಳಿದಿತ್ತು. ಈ ಬಾರಿಯೂ ವಿಧಾನಸಭಾ ಚುನಾವಣೆಯಲ್ಲಿ ನಾವೆಲ್ಲರೂ ಕೂಡ ಒಟ್ಟಾಗಿ ಕೆಲಸ ಮಾಡೋಣ ಎಂದರು.
ನಾನೆಂದು ಜೆಡಿಎಸ್ ಪಕ್ಷ ಬಿಡುತ್ತೇನೆ ಎಂದು ಹೇಳಿರಲಿಲ್ಲ. ಆದರೆ ಕುಮಾರಸ್ವಾಮಿಯವರೇ ನನ್ನನ್ನು ದೂರವಿಟ್ಟು ನಾನು ಶಾಸಕನಾಗಿದ್ದಾಗಲೇ ಇನ್ನೊಬ್ಬ ವ್ಯಕ್ತಿಯನ್ನು ಅಭ್ಯರ್ಥಿ ಮಾಡಿದ ಮೇಲೆ ನನಗೆ ಒಗ್ಗುವಂತಹ ಪಕ್ಷಕ್ಕೆ ಸೇರ್ಪಡೆ ಆಗಲೇಬೇಕಾದ ಅನಿವಾರ್ಯತೆ ಇತ್ತು. ಹಾಗಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು ತಮ್ಮೆಲ್ಲರ ಸಹಕಾರ ಬೇಕಿದೆ ಎಂದರು.
ಸಂಸದ ಜಿ.ಎಸ್.ಬಸವರಾಜು ಅವರು ನನ್ನ ತಂದೆಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಿ ಎಂದಾಗ ಟಿಕೆಟ್ ನೀಡದೆ ನಿರಾಕರಿಸಿದ್ದರು, ಅಂದಿನಿಂದ ನಮ್ಮ ತಂದೆ ನೀನು ಕಾಂಗ್ರೆಸ್ ನಲ್ಲಿ ಗೆಲ್ಲಬೇಕು ಎಂಬ ಆಸೆ ಇಟ್ಟಿದ್ದರು. ಆದರೆ ನಾನು ಜೆಡಿಎಸ್ ಶಾಸಕನಾಗಿದ್ದಾಗ ಮನದಲ್ಲಿ ನೊಂದಿದ್ದ ಅವರು ಇತ್ತೀಚೆಗೆ ಕಾಂಗ್ರೆಸ್ ಸೇರುತ್ತೇನೆ ಎಂದಾಗ ಹರ್ಷದಾಯಕರಾಗಿದ್ದರು. ಆದರೆ ಅನಾರೋಗ್ಯ ಹಿನ್ನೆಲೆ ಅವರು ಮೃತಪಟ್ಟಿದ್ದು ತುಂಬಾ ನೋವು ಕೊಟ್ಟಿದೆ. ಆದರೆ ಅವರ ಆಸೆ ಈಡೇರಿಸುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ನರಸಿಂಹಯ್ಯ, ನಿಂಬೆ ಕಟ್ಟೆ ಜಯಣ್ಣ, ಕೆಪಿಸಿಸಿ ಸದಸ್ಯ ತಾತಯ್ಯ, ಶಂಕರಾನಂದ, ಭರತ್ ಗೌಡ ಸೇರಿದಂತೆ ಪಟ್ಟಣ ಪಂಚಾಯಿತಿ ಸದಸ್ಯರು, ಕಾಂಗ್ರೆಸ್ ಮುಖಂಡರು, ವಾಸಣ್ಣ ಅಭಿಮಾನಿಗಳು ಹಾಜರಿದ್ದರು.
Comments are closed.