ಕುಣಿಗಲ್: ಮೇ 10 ರಂದು ನಡೆಯಲಿರುವ ರಾಜ್ಯದ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಪ್ರಜಾ ಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಬೇಕೆಂದು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಜೋಸೆಫ್ ಹೇಳಿದರು.
ಬುಧವಾರ ಕುಣಿಗಲ್ ಪಟ್ಟಣದ ಸಂತೆಯಲ್ಲಿ ಕಡ್ಡಾಯ ಮತದಾನದ ಕುರಿತು ಸ್ವೀಪ್ ಸಮಿತಿ ವತಿಯಿಂದ ಮತದಾನ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಅತ್ಯಂತ ಮಹತ್ವದ್ದಾಗಿದೆ. ಪ್ರತಿಯೊಬ್ಬ ಮತದಾರರು ಮತದಾನದ ದಿನದಂದು ತಮ್ಮ ಸಮೀಪದ ಮತಗಟ್ಟೆಗೆ ತೆರಳಿ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಪ್ರಜಾತಂತ್ರ ವ್ಯವಸ್ಥೆ ಗಟ್ಟಿಗೊಳಿಸಲು ತಮ್ಮ ಕೊಡುಗೆ ನೀಡಬೇಕೆಂದು ಮನವಿ ಮಾಡಿದರು.
ಮತದಾನದಲ್ಲಿ ಬಳಸಲಾಗುವ ಎಲೆಕ್ಟ್ರಾನಿಕ್ ಮತ ಯಂತ್ರಗಳ ನಿಖರತೆ, ಸ್ಪಷ್ಟತೆ, ಸಮರ್ಪಕವಾಗಿದ್ದು ಮತದಾರರು ಇವುಗಳ ಬಗ್ಗೆ ಮಾಹಿತಿ ಸಹ ಪಡೆಯಬಹುದಾಗಿದೆ. ಯಾವುದೇ ಆಮಿಷಗಳಿಗೆ ಬಲಿಯಾಗದೆ ಪಾರದರ್ಶಕ ಮತದಾನ ವ್ಯವಸ್ಥೆಯಲ್ಲಿ ಪಾಲ್ಗೊಂಡು ಮತದಾನ ಮಾಡುವಂತೆ ಮನವಿ ಮಾಡಿದರು.
ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕಿ ಭಾಗ್ಯಲಕ್ಷ್ಮಿ ಮಾತನಾಡಿ, ಚುನಾವಣಾ ಆಯೋಗದಿಂದ ವಯಸ್ಸಾದ ಮತದಾರರಿಗೆ ಮನೆಯಲ್ಲೇ ಮತ ಚಲಾಯಿಸುವ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಮತಗಟ್ಟೆ ಅಧಿಕಾರಿಗಳ ಬಳಿ ನೋಂದಾಯಿಸಿಕೊಳ್ಳುವಂತೆ, ವಿಶೇಷ ಚೇತನರಿಗೂ ತಾವಿದ್ದ ಸ್ಥಳದಲ್ಲಿ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದ್ದು ಎಲ್ಲರೂ ಸಹ ಮತದಾನ ಮಾಡುವ ಮೂಲಕ ಜವಾಬ್ದಾರಿ ಮೆರೆಯಬೇಕೆಂದರು.
ಸ್ವೀಪ್ ಸಮಿತಿ ವತಿಯಿಂದ ಪಟ್ಟಣದ ಸಂತೆ ಮೈದಾನ ಸೇರಿದಂತೆ ಸುತ್ತಮುತ್ತಲ ಕಡೆಗಳಲ್ಲಿ ಮತದಾನ ಅರಿವು ಮೂಡಿಸಲು ಜಾಗೃತಿ ಜಾಥಾ ನಡೆಸಲಾಯಿತು. ಈ ವೇಳೆ ಪ್ರಮುಖರಾದ ಅಂಜನಿ, ಶಿವಕುಮಾರ್, ರವೀಂದ್ರ, ರಾಮಚಂದ್ರ ಇತರರು ಹಾಜರಿದ್ದರು.
Comments are closed.