ಶಿರಾ: ನ್ಯಾಯಮೂರ್ತಿ ಎಂ.ಜೆ.ಸದಾಶಿವ ಆಯೋಗದ ವರದಿ ಅವೈಜ್ಞಾನಿಕವಾಗಿದ್ದು ಒಳ ಮೀಸಲಾತಿಯನ್ನು ರಾಜ್ಯ ಸರ್ಕಾರ ಜಾರಿ ಮಾಡುವುದಿಲ್ಲ ಎಂದಿದ್ದ ರಾಜ್ಯ ಸರ್ಕಾರವೇ ಚುನಾವಣೆ ಹೊಸ್ತಿಲಿನಲ್ಲಿ ಪರಿಶಿಷ್ಟ ಜಾತಿಯ ಸೋದರ ಐಕ್ಯತೆಯನ್ನು ಛಿದ್ರಗೊಳಿಸುವ ಒಳ ಮೀಸಲಾತಿ ವರ್ಗೀಕರಣಕ್ಕೆ ಕೈ ಹಾಕಿದೆ ಎಂದು ತಾಲ್ಲೂಕು ಲಂಬಾಣಿ ಶಯೋಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎನ್. ಶೇಷಾನಾಯ್ಕ ಆಪಾದಿಸಿದರು.
ಇಲ್ಲಿನ ತಾಲೂಕು ಕಚೇರಿ ಮುಂಭಾಗದಲ್ಲಿ ಬುಧವಾರ ಶಿರಾ ತಾಲ್ಲೂಕು ಒಳ ಮೀಸಲಾತಿ ಸಂರಕ್ಷಣ ಒಕ್ಕೂಟದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಒಳ ಮೀಸಲಾತಿ ವಿರುದ್ಧ ಒಳ ಮೀಸಲಾತಿ ಸಂರಕ್ಷಣಾ ಒಕ್ಕೂಟ ಬೆಂಗಳೂರಿನ ಸ್ವತಂತ್ರ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ಮಾಡುತ್ತಿರುವಾಗ, ಸರ್ಕಾರದ ಪ್ರತಿನಿಧಿಯಾಗಿ ಬಂದಿದ್ದ ಕಂದಾಯ ಸಚಿವ ಅಶೋಕ್, ಒಳ ಮೀಸಲಾತಿ ವರದಿ ಅವೈಜ್ಞಾನಿಕವಾಗಿದ್ದು ರಾಜ್ಯ ಸರ್ಕಾರ ಅದನ್ನು ಜಾರಿ ಮಾಡುತ್ತಿಲ್ಲ ಎಂದಿದ್ದರು. ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಯಾರದು ಒತ್ತಡಕ್ಕೆ ಸಿಲುಕಿರುವಂತೆ ಕಂಡ ರಾಜ್ಯ ಸರ್ಕಾರ ಪರಿಶಿಷ್ಟ ಸಮುದಾಯಗಳನ್ನು ಒಡೆದು ಸ್ಪರ್ಶರು, ಅಸ್ಪಶ್ಯರು, ಎಡಗೈ, ಬಲಗೈ, ಎಲ್ಲಾ ಸೌಲಭ್ಯ ಪಡೆದವರು, ಮುಂದುವರೆದವರು, ಅಭಿವೃದ್ಧಿ ಆಗಿರುವವರು ಎಂದು ವರ್ಗೀಕರಿಸಿ ಭಾರತದ ಸಂವಿಧಾನದಲ್ಲಿ ಅವಕಾಶವಿಲ್ಲದ ಹಾಗೂ ಸುಪ್ರೀಂ ಕೋರ್ಟ್ ಆಶಯಕ್ಕೆ ವಿರುದ್ಧವಾದ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದು ಕಾನೂನು ಬಾಹಿರವಾಗಿರುತ್ತದೆ. ಇದನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸುತ್ತೇವೆ ಮತ್ತು ಲಂಬಾಣಿ, ಭೋವಿ, ಕೊರಚ ಮತ್ತು ಪರಮ ಸಮುದಾಯಗಳನ್ನು ಪರಿಶಿಷ್ಟ ಜಾತಿಯ ಪಟ್ಟಿಯಿಂದ ಕೈಬಿಡುವ ಸೇರಿಸುವ ಯಾವುದೇ ಅಧಿಕಾರ ರಾಜ್ಯ ಸರ್ಕಾರಕ್ಕೆ ಇರುವುದಿಲ್ಲ ಎಂದು ಎಚ್ಚರಿಸಿದರು.
ಇದಕ್ಕೂ ಮುನ್ನ ಇಲ್ಲಿನ ಬುಕ್ಕಾಪಟ್ಟಣ ರಸ್ತೆಯಲ್ಲಿನ ಸಂತ ಸೇವಾಲಾಲ್ ಉದ್ಯಾನವನದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಮೆರವಣಿಗೆ ಮೂಲಕ ತಾಲೂಕು ಕಚೇರಿ ಆವರಣ ತಲುಪಿದರು. ಪ್ರತಿಭಟನೆ ವೇಳೆ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಹೋಗಲಾಯಿತು. ನಂತರ ತಹಸೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಬಂಜಾರ ಸಮಾಜದ ಮುಖಂಡರಾದ ಕೆ.ಎಸ್.ಬಾಬು ನಾಯ್ಕ, ಕೆ.ಜಿ.ಚಂದ್ರ ನಾಯ್ಕ, ನಾರಾಯಣ ನಾಯ್ಕ, ಚಂದ್ಯ ನಾಯ್ಕ, ಲಾಲ್ಯಾ ನಾಯ್ಕ, ಮೂರ್ತಿ ನಾಯ್ಕ, ಮಿಠ್ಯಾ ನಾಯ್ಕ, ಚಂಪಕಮಾಲ, ಮಂಜುಳಾಬಾಯಿ, ವೆಂಕಟ ನಾಯ್ಕ, ನಾಗ ನಾಯ್ಕ, ಶ್ರೀನಿವಾಸ ನಾಯ್ಕ, ತಿಪ್ಪನಾಯ್ಕ, ಆನಂದ ಕುಮಾರ್, ಸತೀಶ್, ರಾಜಮ್ಮ ಬಾಯಿ, ಭೋವಿ ಸಮಾಜದ ರಾಮಣ್ಣ, ವೆಂಕಟೇಶ, ಗುಂಡಪ್ಪ ಮೊದಲಾದವರು ಇದ್ದರು.
Comments are closed.