ಮತದಾನ ಪ್ರಮಾಣ ಹೆಚ್ಚಳಕ್ಕೆ ಅರಿವು ಮೂಡಿಸಿ

ಶೇ.100 ರಷ್ಟು ಮತದಾನವಾಗಲು ಶ್ರಮಿಸಿ: ವೈ.ಎಸ್.ಪಾಟೀಲ್

91

Get real time updates directly on you device, subscribe now.


ತುಮಕೂರು: ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಪಾಲಿಕೆ ವ್ಯಾಪ್ತಿಯಲ್ಲಿ ಶೇ.100 ರಷ್ಟು ಮತದಾನವಾಗಬೇಕು. ಈ ಹಿನ್ನೆಲೆಯಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸಲು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್.ಪಾಟೀಲ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಾಲಿಕೆ ಸಭಾಂಗಣದಲ್ಲಿ ಜರುಗಿದ ಸ್ವೀಪ್ ಸಮಿತಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಪಾಲಿಕೆ ವ್ಯಾಪ್ತಿಯ ವಾರ್ಡ್ಗಳಲ್ಲಿ ತಪ್ಪದೆ ಮತದಾನ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಏರ್ಪಡಿಸಬೇಕು. ಹಿಂದಿನ ಚುನಾವಣೆಯಲ್ಲಿ ಮತದಾನ ಪ್ರಮಾಣ ಕಡಿಮೆ ಆಗಿರುವ ವಾರ್ಡ್ಗಳಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಅಧಿಕಾರಿಗಳು ಹಿಂದಿನ ಚುನಾವಣೆಯಲ್ಲಿ ಮತದಾನ ಕಡಿಮೆಯಾಗಲು ಕಾರಣ ಕಂಡುಕೊಳ್ಳಬೇಕು. ಮತದಾನ ಮಾಡುವ ಮತಗಟ್ಟೆಯ ಮಾಹಿತಿ ಕೊರತೆಯಿಂದ ಅಥವಾ ಮತಗಟ್ಟೆ ದೂರವಿದೆ ಎಂದು ಕೆಲವು ಮತದಾರರು ಮತದಾನದಿಂದ ತಪ್ಪಿ ಹೋಗುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಪ್ರತಿ ಮನೆಗಳಿಗೆ ಭೇಟಿ ನೀಡಿ ಮತದಾರರ ಚೀಟಿ ವಿತರಿಸಿ ಮತಗಟ್ಟೆಗಳ ಮಾಹಿತಿಯನ್ನು ಮತದಾರರಿಗೆ ನೀಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬೆಂಗಳೂರು ಮತ್ತಿತರ ಪ್ರದೇಶಗಳಿಗೆ ಉದ್ಯೋಗ, ವ್ಯಾಸಂಗಕ್ಕಾಗಿ ತೆರಳಿರುವ 18 ವರ್ಷ ಮೇಲ್ಪಟ್ಟ ಕುಟುಂಬ ಸದಸ್ಯರನ್ನು ಮತದಾನ ದಿನದಂದು ಸ್ವಗ್ರಾಮಕ್ಕೆ ಬಂದು ಮತ ಚಲಾಯಿಸುವ ಬಗ್ಗೆ ಸ್ಥಳೀಯ ಮತದಾರರಿಗೆ ತಿಳಿ ಹೇಳಬೇಕು ಎಂದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ಪ್ರತಿ ದಿನ ಬೆಳಗ್ಗೆ ಕಸದ ವಾಹನಗಳಲ್ಲಿ ಜಾಗೃತಿ ಗೀತೆಗಳ ಮೂಲಕ ಮತದಾನ ಮಾಡುವ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸಬೇಕು. ಅಲ್ಲದೆ ಮತದಾನ ಜಾಗೃತಿ ಮೂಡಿಸುವ ಬಗ್ಗೆ ಬೀದಿ ನಾಟಕ, ಸಂಗೀತ ಕಾರ್ಯಕ್ರಮಗಳ ಮೂಲಕ ಮತದಾರರನ್ನು ಸೆಳೆಯಬೇಕು ಎಂದು ಸಲಹೆ ನೀಡಿದರು.

ಪಾಲಿಕೆ ಆಯುಕ್ತ ಹೆಚ್.ವಿ.ದರ್ಶನ್ ಮಾತನಾಡಿ, 18 ವರ್ಷ ಮೇಲ್ಪಟ್ಟ ಯುವ ಮತದಾರರಿಂದ ಮತದಾನ ಜಾಗೃತಿ ಸಂದೇಶವನ್ನು ವೀಡಿಯೋ ಚಿತ್ರೀಕರಣ ಮಾಡಿ ವೀಡಿಯೋ ತುಣುಕನ್ನು ಹಂಚಿಕೊಳ್ಳುವುದರಿಂದ ಯುವ ಮತದಾರರನ್ನು ಮತದಾನ ಮಾಡುವತ್ತ ಸೆಳೆಯಬಹುದು ಎಂದು ಸಲಹೆ ನೀಡಿದರು.
ಪಾಲಿಕೆ ಉಪ ಆಯುಕ್ತೆ ಸುಮತಿ, ಕೌಶಲ್ಯಾಭಿವೃದ್ಧಿ ಅಧಿಕಾರಿ ಶ್ರೀನಿವಾಸ್, ತೋಟಗಾರಿಕೆ ಉಪ ನಿರ್ದೇಶಕ ರಘು, ರೇಷ್ಮೆ ಇಲಾಖೆ ಉಪ ನಿರ್ದೇಶಕ ಬಾಲಕೃಷ್ಣಪ್ಪ, ಡಾ.ರಕ್ಷಿತ್, ಪಾಲಿಕೆ ಚುನಾವಣಾ ಶಾಖೆಯ ನಾಗಭೂಷಣ್, ಜಿಲ್ಲಾ ಪಂಚಾಯತಿ ಇಂಜಿನಿಯರ್ ಶ್ರೀನಿವಾಸ್ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!