ತುಮಕೂರು: ಜಿಲ್ಲೆಯಲ್ಲಿ ಮೇ 10 ರಂದು ನಡೆಯಲಿರುವ ಮತದಾನಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಈವರೆಗೂ ಶೌಚಾಲಯ, ರ್ಯಾಂಪ್, ವಿದ್ಯುತ್ ಸಂಪರ್ಕ ಹಾಗೂ ಕುಡಿಯುವ ನೀರು ಸೇರಿದಂತೆ ಕನಿಷ್ಠ ಮೂಲಭೂತ ಸೌಕರ್ಯ ಕಲ್ಪಿಸದೆ ಇರುವ ಅಧಿಕಾರಿಗಳನ್ನು ಅಮಾನತು ಮಾಡಲು ಕ್ರಮ ವಹಿಸಲಾಗುವುದೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್.ಪಾಟೀಲ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಕೆಸ್ವಾನ್ ಸಭಾಂಗಣದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿ, ಮತಗಟ್ಟೆಗಳಲ್ಲಿ ಕನಿಷ್ಠ ಮೂಲಭೂತ ಸೌಕರ್ಯ ಕಲ್ಪಿಸದಿದ್ದಲ್ಲಿ ಆಯಾ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಹಾಗೂ ಗ್ರಾಮೀಣ ಪ್ರದೇಶಕ್ಕೆ ಸಂಬಂಧಿಸಿದಂತೆ ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿಗಳನ್ನು ಅಮಾನತು ಮಾಡಲು ಕ್ರಮ ವಹಿಸಲಾಗುವುದೆಂದು ಸೂಚನೆ ನೀಡಿದರು.
ಸಂಬಂಧಿಸಿದ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಮತಗಟ್ಟೆಗಳಿಗೆ ಖುದ್ದು ಭೇಟಿ ನೀಡಿ ಮೂಲ ಸೌಕರ್ಯ ಇರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಈವರೆಗೂ ಮೂಲಭೂತ ಸೌಲಭ್ಯ ಒದಗಿಸದೆ ಇದ್ದಲ್ಲಿ ಕೂಡಲೇ ಕ್ರಮ ಕೈಗೊಂಡು ವರದಿ ಸಲ್ಲಿಸಬೇಕೆಂದು ತಾಕೀತು ಮಾಡಿದರು.
ಕಳೆದ 2018ರ ವಿಧಾನ ಸಭಾ ಚುನಾವಣೆ ಹಾಗೂ 2019ರ ಲೋಕಸಭಾ ಚುನಾವಣೆ ಮತದಾನ ಪ್ರಮಾಣ ಅವಲೋಕಿಸಿದಾಗ ನಗರ ಪ್ರದೇಶಗಳ ಕೆಲವು ಮತಗಟ್ಟೆಗಳಲ್ಲಿ ಶೇ.70ಕ್ಕಿಂತ ಕಡಿಮೆ ಮತದಾನವಾಗಿದೆ. ಈ ನಿಟ್ಟಿನಲ್ಲಿ ಮೇ 10 ರಂದು ನಡೆಯಲಿರುವ ಚುನಾವಣೆಯ ಮತದಾನ ಪ್ರಮಾಣ ಶೇ.100 ರಷ್ಟಾಗುವಂತೆ ಎಲ್ಲಾ ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ ಪಂಚಾಯತಿಗಳಲ್ಲಿ ಸ್ವೀಪ್ ಚಟುವಟಿಕೆ ಚುರುಕುಗೊಳಿಸಬೇಕು ಎಂದು ತಿಳಿಸಿದರು.
ಹಿಂದಿನ ಚುನಾವಣೆಗಳಲ್ಲಿ ನಗರ ಪ್ರದೇಶದಲ್ಲಿಯೇ ಮತದಾನ ಪ್ರಮಾಣ ಕಡಿಮೆ ಆಗಿರುವುದರಿಂದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪರಿಸರ ಅಭಿಯಂತರರು, ಕಂದಾಯಾಧಿಕಾರಿ, ಕಂದಾಯ ನಿರೀಕ್ಷಕರು, ಕರ ವಸೂಲಿದಾರರು, ಆರೋಗ್ಯ ನಿರೀಕ್ಷಕರು, ಪೌರ ಕಾರ್ಮಿಕರು, ನೀರು ಸರಬರಾಜು ಸಿಬ್ಬಂದಿಯನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡು ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದು ನಿರ್ದೇಶನ ನೀಡಿದರು.
ನಗರಗಳಲ್ಲಿರುವ ಕೊಳಚೆ ಪ್ರದೇಶ ವಾಸಿಗಳು ಮತದಾನದಿಂದ ವಂಚಿತರಾಗದಂತೆ ಅರಿವು ಮೂಡಿಸಿ ಮತಗಟ್ಟೆ ಮಟ್ಟದ ಅಧಿಕಾರಿಗಳ ಮೂಲಕ ಎಲ್ಲಾ ಮತದಾರರಿಗೂ ಮತಗಟ್ಟೆ ಸಂಖ್ಯೆ ಹಾಗೂ ಕ್ರಮ ಸಂಖ್ಯೆ ಹೊಂದಿರುವ ಮತದಾರರ ಚೀಟಿಯನ್ನು ಮನೆ ಮನೆಗೆ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ಕಳೆದ ಚುನಾವಣೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಶೇ.90 ರಷ್ಟು, ನಗರ ಪ್ರದೇಶಗಳಲ್ಲಿ ಶೇ.70 ರಷ್ಟು ಮತದಾನವಾಗಿದ್ದು, ಮತದಾರರಲ್ಲಿ ಮತದಾನದ ಮಹತ್ವದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಸ್ವೀಪ್ ಚಟುವಟಿಕೆಗಳನ್ನು ಏರ್ಪಡಿಸಬೇಕು. ಬೀದಿನಾಟಕ, ವಿವಿಧ ಸ್ಪರ್ಧೆ, ಸಹಿ ಅಭಿಯಾನ, ಪೋಸ್ಟ್ ಕಾರ್ಡ್ ಅಭಿಯಾನ, ಕ್ಯಾಂಡಲ್ ಲೈಟ್ ಸೇರಿದಂತೆ ವಿವಿಧ ಮತದಾನ ಜಾಗೃತಿ ಕಾರ್ಯಕ್ರಮ ಹೆಚ್ಚಿಸಬೇಕು. ನಾನು ಮತದಾನ ಮಾಡುತ್ತೇನೆ, ನೀವು ಮತದಾನ ಮಾಡಿ ಎಂಬ ಘೋಷ ವಾಕ್ಯದ ಮೂಲಕ ಜನರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಜಿಲ್ಲೆಯ 330 ಗ್ರಾಮ ಪಂಚಾಯತಿಗಳಲ್ಲಿ ಅಧಿಕಾರಿಗಳು ಸ್ವಇಚ್ಛೆಯಿಂದ ಸೃಜನಶೀಲವಾಗಿ ಸ್ವೀಪ್ ಚಟುವಟಿಕೆ ಆಯೋಜಿಸಬೇಕು ಎಂದು ತಿಳಿಸಿದರಲ್ಲದೆ, ತುರುವೇಕೆರೆ ಕ್ಷೇತ್ರದ ಮತಗಟ್ಟೆಯೊಂದನ್ನು ಪರಿಶೀಲಿಸಲಾಗಿ ಶೌಚಾಲಯ ವ್ಯವಸ್ಥೆ ಇಲ್ಲದಿರುವುದು ಕಂಡು ಬಂದಿದೆ. ಕೂಡಲೇ ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ಚುನಾವಣಾ ಅಕ್ರಮಗಳ ಬಗ್ಗೆ ದೂರು ದಾಖಲಿಸಲು ಸಿ- ವಿಜಿಲ್ ಮೊಬೈಲ್ ಆಪ್ ಕಾರ್ಯಾರಂಭವಾಗಿದ್ದು, ಚುನಾವಣಾ ಕರ್ತವ್ಯ ನಿರ್ವಹಿಸುತ್ತಿರುವ ಎಸ್ಎಸ್ಟಿ, ವಿಚಕ್ಷಣಾ ದಳದವರು ಹೆಚ್ಚಿನ ಸಂಖ್ಯೆಯಲ್ಲಿ ಸಿ-ವಿಜಿಲ್ ಆಪ್ ಮೂಲಕ ದೂರು ದಾಖಲಿಸಬೇಕು ಎಂದು ತಿಳಿಸಿದರಲ್ಲದೆ, ಚೆಕ್ಪೋಸ್ಟ್ಗಳಲ್ಲಿ ವಾಹನ ತಪಾಸಣೆ ನಡೆಸುವ ಸಂದರ್ಭದಲ್ಲಿ ವಾಹನ ಸವಾರರ ವೇಗದ ಚಾಲನೆ ನಿಯಂತ್ರಿಸಲು ಜಿಗ್-ಜ್ಯಾಗ್ ರೀತಿಯ ಬ್ಯಾರಿಕೇಡ್ಗಳನ್ನು ಇಡಬೇಕು ಎಂದು ತಿಳಿಸಿದರು.
ಚುನಾವಣಾ ಆಯೋಗದ ನಿರ್ದೇಶನದಂತೆ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಆಯ್ದ ಮತಗಟ್ಟೆಗಳನ್ನು ವಿಷಯಾಧಾರಿತ ಮತಗಟ್ಟೆಗಳನ್ನಾಗಿ ನಿರ್ಮಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಪ್ರಸಿದ್ಧಿ ಪಡೆದಿರುವ ಏಕಶಿಲಾ ಬೆಟ್ಟ, ಸೋಲಾರ್ ಪಾರ್ಕ್, ಕಲ್ಲೂರು ಸೀರೆ, ಸೋಮನ ಕುಣಿತ, ಕೋಲಾಟ ಸೇರಿದಂತೆ ವಿವಿಧ ವಿಷಯಾಧಾರಿತ ಮತಗಟ್ಟೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆಯಲ್ಲದೆ ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಕಥಾಕೀರ್ತನಕಾರ ಡಾ.ಲಕ್ಷ್ಮಣ್ದಾಸ್, ಗಾಯಕರಾದ ಕಂಬದರಂಗಯ್ಯ, ಮೋಹನ್ ಕುಮಾರ್ ಹಾಗೂ ಮಂಜಮ್ಮ ಮತ್ತು ರತ್ನಮ್ಮ ಸಹೋದರಿಯರು, ಸಮಾಜ ಸೇವಕಿ ಲಿಲ್ಲಿ ಅವರನ್ನು ಜಿಲ್ಲೆಯ ಚುನಾವಣಾ ರಾಯಭಾರಿಗಳನ್ನಾಗಿ ಆಯ್ಕೆ ಮಾಡಿ ಇವರೆಲ್ಲರ ಮತದಾನ ಜಾಗೃತಿ ಸಂದೇಶ ಕುರಿತ ವಿಡಿಯೋ ಚಿತ್ರದ ತುಣುಕನ್ನು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚುರಪಡಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಪಾಲಿಕೆ ಆಯುಕ್ತ ಹೆಚ್.ವಿ. ದರ್ಶನ್, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಮಧುಗಿರಿ ಉಪ ವಿಭಾಗಾಧಿಕಾರಿ ರಿಷಿ ಆನಂದ್, ತುಮಕೂರು ಉಪ ವಿಭಾಗಾಧಿಕಾರಿ ಹೆಚ್.ಶಿವಪ್ಪ, ತಹಶೀಲ್ದಾರ್ ಸಿದ್ದೇಶ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಂಜಿನಪ್ಪ ಮತ್ತಿತರ ಅಧಿಕಾರಿಗಳು ಹಾಜರಿದ್ದರು.
Comments are closed.