ಮೀಸಲಾತಿ ಹಂಚಿಕೆ ಸಮಂಜಸವಾಗಿದೆ: ಡಾ.ಲಕ್ಷ್ಮಿಕಾಂತ್

78

Get real time updates directly on you device, subscribe now.


ತುಮಕೂರು: ರಾಜ್ಯ ಕಾನೂನು ಮಂತ್ರಿ ಜೆ.ಸಿ.ಮಾಧುಸ್ವಾಮಿ 2011ರ ಜನಗಣತಿ ಆಧಾರದಲ್ಲಿ ಶೇ.17 ರಷ್ಟು ಮೀಸಲಾತಿಯನ್ನು ಪರಿಶಿಷ್ಟ ಜಾತಿಯಲ್ಲಿ ಸ್ಪಷ್ಯ ಮತ್ತು ಅಸ್ಪಷ್ಯ ಜಾತಿಗಳಿಗೆ ಹಂಚಿಕೆ ಮಾಡಿರುವುದು ಸಮಂಜಸವಾಗಿದೆ. ವಿನಾಕಾರಣ ಇದರಲ್ಲಿ ಕೆಲವರು ತಪ್ಪು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿ ಹಾಗೂ ವೈದ್ಯ ಡಾ.ಲಕ್ಷ್ಮಿಕಾಂತ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ ಮೀಸಲಾತಿ ಎನ್ನುವುದು ಸಾಮಾಜಿಕ ನ್ಯಾಯದ ಭಾಗವಾಗಿದೆ. ಶ್ರೇಣಿಕೃತ ಜಾತಿ ವ್ಯವಸ್ಥೆಯಲ್ಲಿ ತುಳಿತಕ್ಕೆ ಒಳಗಾದ ಸಮುದಾಯಗಳನ್ನು ಇತರೆ ಸಮುದಾಯಗಳೊಂದಿಗೆ ಸ್ಪರ್ಧೆ ಮಾಡಲು ಅನುಕೂಲವಾಗುವಂತೆ ಮೀಸಲಾತಿಯನ್ನು ಸರಕಾರ ಕಲ್ಪಿಸಿದೆ. ಆದರೆ ಇದನ್ನು ಸರಿಯಾಗ ಅರ್ಥೈಸದ ಕೆಲ ಸ್ಪಷ್ಟ ಜಾತಿಗಳ ಜನರು ಇದರ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದು ವಿಷಾದ ಸಂಗತಿ ಎಂದರು.

ಪ್ರಸ್ತುತ ರಾಜ್ಯ ಸರಕಾರ ಮಾಡಿರುವ ಮೀಸಲಾತಿ ಹಂಚಿಕೆ ಮಾಡಿರುವುದು ಅತ್ಯಂತ ವೈಜ್ಞಾನಿಕವಾಗಿದೆ. ಇದರಿಂದ ಮೇಲ್ಜಾತಿಯ ಜನರು ಬೇಡ ಜಂಗಮ ಹೆಸರಿನಲ್ಲಿ ಪಡೆಯುತ್ತಿದ್ದ ಎಸ್ಸಿ ಮೀಸಲಾತಿ ಸೌಲಭ್ಯಕ್ಕೆ ಕಡಿವಾಣ ಬೀಳಲಿದೆ. ಇದುವರೆಗೂ ಪರಿಶಿಷ್ಟರಿಗೆ ಶೇ.17 ಮೀಸಲಾತಿ ಇದೆ ಎಂದು ಸಾವಿರಾರು ಜನರು ನಕಲಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದರು. ಆದರೆ ಈಗ ಶೇ.1ರ ಮೀಸಲಾತಿಯನ್ನು ಅಲೆಮಾರಿ ಸಮುದಾಯಕ್ಕೆ ಸೇರಿದ ಜಾತಿಗಳಿಗೆ ಮೀಸಲಿಟ್ಟಿರುವುದರಿಂದ ವಾಮಮಾರ್ಗದಿಂದ ಜಾತಿ ಪ್ರಮಾಣ ಪತ್ರ ಪಡೆದರೂ ಯಾವುದೇ ಪ್ರಯೋಜನವಾಗದು, ಸರಕಾರದ ಈ ಕ್ರಮದಿಂದ ಪರಿಶಿಷ್ಟರ ಮೀಸಲಾತಿ ಇನ್ನೊಬ್ಬರ ಪಾಲಾಗಲಿದೆ ಎಂಬ ಆತಂಕವೂ ದೂರವಾಗಲಿದೆ ಎಂದು ಡಾ.ಲಕ್ಷ್ಮಿಕಾಂತ್ ನುಡಿದರು.

ರಾಜ್ಯದಲ್ಲಿ ಮೀಸಲಾತಿ ವರ್ಗೀಕರಣಕ್ಕೆ ಕಾಂಗ್ರೆಸ್ ಮೊದಲು ಹಿಂದೇಟು ಹಾಕಿದರೂ ಬಿಜೆಪಿ ಪಕ್ಷ ಪರಿಶಿಷ್ಟರಿಗೆ ಮೀಸಲಾತಿ ಹಂಚಿಕೆ ಮಾಡಲು ಮುಂದಾದಾಗ ಸಹಮತ ವ್ಯಕ್ತಪಡಿಸಿದೆ. ಹಾಗಾಗಿ ಸಾಮಾಜಿಕ ನ್ಯಾಯದ ಅನ್ವಯ, ಸಂವಿಧಾನದ 9ನೇ ಅನುಚ್ಛೇಧಕ್ಕೆ ಸೇರಿಸಲು ಇದ್ದ ಎಲ್ಲಾ ಅಡ್ಡಿಗಳನ್ನು ನಿವಾರಿಸಿ ಅಸ್ಪಷ್ಯ ಜಾತಿಯ ಎಡಗೈ, ಬಲಗೈ, ಸ್ಪಷ್ಯ ಹಾಗೂ ಅಲೆಮಾರಿ ಸಮುದಾಯಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚಿಕೆ ಮಾಡಿದೆ. ಇದರಲ್ಲಿ ಯಾರಿಗೂ ಮೋಸವಾಗಿಲ್ಲ ಎಂದು ಡಾ.ಲಕ್ಷ್ಮಿಕಾಂತ್ ಸ್ಪಷ್ಟಪಡಿಸಿದರು.

ಪರಿಶಿಷ್ಟ ಜಾತಿಯ 101 ಜಾತಿ ಸೇರಿ 2011ರ ಜನಗಣತಿ ಅನ್ವಯ ಸುಮಾರು 1.04 ಕೋಟಿ ಜನಸಂಖ್ಯೆಯಿದೆ. ಇಷ್ಟು ಜನಸಂಖ್ಯೆಗೆ ಶೇ.17ರ ಮೀಸಲಾತಿ ಹಂಚಿಕೆ ಮಾಡಿದರೆ 6.10 ಲಕ್ಷ ಜನರಿಗೆ ಶೇ.1 ಮೀಸಲಾತಿ ಹಂಚಿಕೆಯಾಗಲಿದೆ. ಇದರ ಪ್ರಕಾರ ರಾಜ್ಯದಲ್ಲಿ 32.60 ಲಕ್ಷ ಜನಸಂಖ್ಯೆ ಹೊಂದಿರುವ ಮಾದಿಗರಿಗೆ ಶೇ.6, ಪರಿಶಿಷ್ಟರಲ್ಲಿ 32.57 ಲಕ್ಷ ಜನಸಂಖ್ಯೆ ಇರುವ ಹೊಲೆಯರಿಗೆ ಶೇ.5.5, 11ಲಕ್ಷ ಭೋವಿ, 12 ಲಕ್ಷ ಲಂಬಾಣಿ, 2.50 ಕೊರಚ, 60 ಸಾವಿರ ಕೊರಮ ಸೇರಿ ಒಟ್ಟು 26.51 ಜನಸಂಖ್ಯೆ ಹೊಂದಿರುವ ಸ್ಪರ್ಶ ಜಾತಿಗಳಿಗೆ ಶೇ.4.5 ನೀಡಿದರೆ, ಉಳಿದಂತೆ 10 ಸಾವಿರಕ್ಕಿಂತಲೂ ಕಡಿಮೆ ಜನಸಂಖ್ಯೆ ಹೊಂದಿರುವ 89 ಸಣ್ಣ ಜಾತಿಗಳಿಗೆ ಶೇ.1ರ ಮೀಸಲಾತಿ ಕಲ್ಪಿಸಲಾಗಿದೆ. ಹೀಗಾಗಿ ಮಾಧುಸ್ವಾಮಿ ನೇತೃತ್ವದ ಸಮಿತಿ ಹಂಚಿಕೆ ಮಾಡಿರುವ ಮೀಸಲಾತಿ ಹಂಚಿಕೆಯಲ್ಲಿ ಯಾವುದೇ ಅನ್ಯಾಯವಾಗಿಲ್ಲ. ಆದರೆ ನ್ಯಾ.ಸದಾಶಿವ ವರದಿಯಲ್ಲಿ ಜಾತಿ ಪ್ರಮಾಣ ಪತ್ರದ ಗೊಂದಲದಿಂದಾಗಿ 10.20 ಲಕ್ಷ ಮಾದಿಗರನ್ನು ಬಲಗೈಗೂ, 5.70 ಲಕ್ಷ ಹೊಲೆಯರನ್ನು ಎಡಗೈಗೂ ಸೇರಿಸಲಾಗಿದೆ.

ಇದನ್ನು ಸರಿಪಡಿಸಿದರೆ ಮೈಸೂರು ಕರ್ನಾಟಕ ಮತ್ತು ಮಧ್ಯ ಕರ್ನಾಟಕ ಜಿಲ್ಲೆಗಳಲ್ಲಿನ ಜಾತಿ ಪ್ರಮಾಣದ ಗೊಂದಲ ಬಗೆಹರಿಯಲಿದೆ. ಈ ನಿಟ್ಟಿನಲ್ಲಿ ಮುಂದಿನ ಸರಕಾರ ಕ್ರಮ ಕೈಗೊಂಡರೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾದಿಗ ದಂಡೋರದ ಆಟೋ ಶಿವಕುಮಾರ್, ಮಾಜಿ ಶಾಸಕ ಗಂಗಹನುಮಯ್ಯ, ಜಗದೀಶ್, ರಂಗಧಾಮಯ್ಯ, ನಿವೃತ್ತ ತಹಶೀಲ್ದಾರ್ ದಾಸಪ್ಪ, ಹನುಮಂತಪ್ಪ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!