ಶಿರಾ: ನಾನೇನು ಜೆಡಿಎಸ್ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಯಾಗಿರಲಿಲ್ಲ. ಕುಮಾರಸ್ವಾಮಿಯವರ ಜನಪರ ಕಾರ್ಯಕ್ರಮಗಳನ್ನು ಕಾರ್ಯರೂಪಕ್ಕೆ ತರುವ ಸಮರ್ಥ್ಯ ವ್ಯಕ್ತಿಗೆ ಟಿಕೆಟ್ ನೀಡಿ ಎಂದು ನಾವುಗಳು ತಿಳಿಸಿದ್ದೆವು, ಆದರೆ ಅದು ಈಡೇರಲಿಲ್ಲ. ಅದರ ಜೊತೆಯಲ್ಲಿ ನಮ್ಮ ಆತ್ಮ ಸಾಕ್ಷಿಗೆ ವಿರುದ್ಧ ಹಾಗೂ ಸ್ವಾಭಿಮಾನಕ್ಕೆ ಧಕ್ಕೆ ಉಂಟು ಮಾಡುವ ಘಟನೆಗಳು ನಡೆದಿದ್ದರಿಂದ ಜೆಡಿಎಸ್ ತ್ಯಜಿಸಿ ಕಾಂಗ್ರೆಸ್ ಪಕ್ಷ ಸೇರುವ ತೀರ್ಮಾನ ಮಾಡಿದ್ದೇನೆ ಎಂದು ಸಮಾಜ ಸೇವಕ ಶಿವರಾಮೇಗೌಡ ತಿಳಿಸಿದರು.
ಸೋಮವಾರದಂದು ಶಿರಾ ನಗರದ ಖಾಸಗಿ ಹೋಟೆಲಿನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಜೆಡಿಎಸ್ ತೊರೆದು ಸಮರ್ಥ ನಾಯಕನ ಅಡಿ ಕಾರ್ಯ ನಿರ್ವಹಿಸಲು ನಾವು ನಿರ್ಧರಿಸಿದಾಗ ನಮಗೆ ಮೊದಲು ತೋಚಿದ್ದು ಶಿರಾ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ಅನುಭವಿ ರಾಜಕಾರಣಿ ಟಿ.ಬಿ. ಜಯಚಂದ್ರ. ಈ ಬಗ್ಗೆ ನಾನು ಮತ್ತು ನನ್ನ ಅಭಿಮಾನಿಗಳು ಒಟ್ಟಾಗಿ ಚರ್ಚಿಸಿ, ತೀರ್ಮಾನಿಸಿದ್ದು ಎಲ್ಲರ ಅಭಿಪ್ರಾಯದಂತೆ ಮಾಜಿ ಸಚಿವ ಟಿ.ಬಿ.ಜಯಚಂದ್ರ ರವರನ್ನು ಬೆಂಬಲಿಸಲು ನಿರ್ಧರಿಸಿದ್ದೇನೆ. ಮುಂಬರುವ ದಿನಗಳಲ್ಲಿ ನಾನು ಮತ್ತು ನನ್ನ ಬೆಂಬಲಿಗರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರಲಿದ್ದೇವೆ ಎಂದು ತಿಳಿಸಿದರು.
ನಾನು ಎಲ್ಲಿಯೂ ಟಿಕೆಟ್ ಆಕಾಂಕ್ಷಿಯಲ್ಲ. ಜನ ಪರ ಸೇವೆಗೋಸ್ಕರ ರಾಜಕೀಯಕ್ಕೆ ಪ್ರವೇಶ ಮಾಡಿದ್ದೇನೆ ವಿನಹ ಅಧಿಕಾರಕ್ಕಾಗಿ ಅಲ್ಲ. ಈ ಬಗ್ಗೆ ನಾವು ಸೇರುವ ಪಕ್ಷದಲ್ಲೂ ಕೂಡ ಯಾವುದೇ ಗೊಂದಲ ಬೇಡ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಸುಧಾಕರ್ ಗೌಡ, ಸಿಗರಹಳ್ಳಿ ವೀರೇಂದ್ರ, ಹೊಸಹಳ್ಳಿ ರಾಮಚಂದ್ರಪ್ಪ, ಮುದ್ದುಕೃಷ್ಣ, ಶಿವಕುಮಾರ್ ಮುಂತಾದ ಮುಖಂಡರು ಹಾಜರಿದ್ದರು.
Comments are closed.