ಗೋ ಸಾಗಣೆ ತಡೆ ನೆಪದಲ್ಲಿ ವ್ಯಕ್ತಿ ಮೇಲೆ ಹಲ್ಲೆಗೆ ಖಂಡನೆ

74

Get real time updates directly on you device, subscribe now.


ಕುಣಿಗಲ್: ಗೋ ಸಾಗಣೆ ತಡೆ ನೆಪದಲ್ಲಿ ಮುಸ್ಲಿಂ ವ್ಯಕ್ತಿಯನ್ನು ಹತ್ಯೆ ಮಾಡಿದ್ದನ್ನು ಖಂಡಿಸಿ ಮುಸ್ಲಿಂ ಮುಖಂಡರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸೋಮವಾರ ಪುರಸಭೆ ಮಾಜಿ ಉಪಾಧ್ಯಕ್ಷ ಅಬ್ದುಲ್ ಹಮೀದ್ ನೇತೃತ್ವದಲ್ಲಿ ಸಂಘಟನೆಗೊಂಡ ನೂರಾರು ಮುಸ್ಲಿಂ ಬಾಂಧವರು ತಾಲೂಕು ಕಚೇರಿ ವರೆಗೂ ಮೌನ ಮೆರವಣಿಗೆ ನಡೆಸಿ ತಾಲೂಕು ಕಚೇರಿ ಆವಣದಲ್ಲಿ ಪ್ರತಿಭಟನಾ ಸಭೆ ನಡೆಸಿದರು.

ಸಭೆಯಲ್ಲಿ ಮಾತನಾಡಿದ ಅಬ್ದುಲ್ ಹಮೀದ್, ಗೋ ರಕ್ಷಕರೆಂದು ಬಿಂಬಿಸಿಕೊಳ್ಳುವ ಕೆಲವರು ನೈತಿಕ ಪೊಲೀಸ್ ಗಿರಿ ನೆಪದಲ್ಲಿ ಒಂದು ಕೋಮಿನ ಯುವಕರು, ವ್ಯಕ್ತಿಗಳನ್ನು ಗುರಿಯಾಗಿಸಿ ಗೋ ಸಂರಕ್ಷಿಸುವ ನೆಪದಲ್ಲಿ ಮನಬಂದಂತೆ ಹಲ್ಲೆ ಮಾಡುತ್ತಿರುವುದು ಖಂಡನೀಯ, ಮುಸ್ಲಿಂರ ಪವಿತ್ರ ಹಬ್ಬ ರಂಜಾನ್ ಆಚರಣೆ ವೇಳೆಯಲ್ಲಿ ಕನಕಪುರ ತಾಲೂಕಿನ ವ್ಯಾಪ್ತಿಯಲ್ಲಿ ಇದ್ರಿಷ್ ಪಾಷಾ ಎಂಬ ವ್ಯಕ್ತಿಯನ್ನು ಗೋ ರಕ್ಷಕರೆಂದು ಹೇಳಿಕೊಳ್ಳುವ ಕೆಲವರು ಮನಬಂದಂತೆ ಹಲ್ಲೆ ನಡೆಸಿ ಅಮಾನವೀಯವಾಗಿ ಚಿತ್ರ ಹಿಂಸೆ ನೀಡಿ ಕೊಲೆಗೈದಿರುವುದು ಖಂಡನೀಯವಾಗಿದೆ. ಇವರಿಗೆ ಅಷ್ಟು ಶಕ್ತಿ ಇದ್ದರೆ ದೇಶದಿಂದ ರಫ್ತಾಗುತ್ತಿರುವ ಗೋ ಮಾಂಸ ತಡೆಯಲಿ. ಅದು ಬಿಟ್ಟು ಅಮಾಯಕ ಮುಸ್ಲಿಮರನ್ನು ಪೂರ್ವಗ್ರಹ ಪೀಡಿತರಾಗಿ ಗುರಿ ಮಾಡಿ ಹತ್ಯೆ ಮಾಡುವುದು, ಹಲ್ಲೆ ನಡೆಸುವುದು, ಸಾಮಾಜಿಕ ಶಾಂತಿ ಮತ್ತು ಸೌಹಾರ್ದ ಕದಡುವುದೇ ಕೆಲಸವಾಗಿದೆ. ಇದನ್ನು ನಿಯಂತ್ರಿಸಬೇಕಾದ ಪೊಲೀಸರು, ಆಡಳಿತ ಕಂಡು ಕಾಣದಂತೆ ಇದ್ದಾರೆ.

ಹತ್ಯೆಗೊಳಗಾದ ಇದ್ರೀಸ್ ಪಾಷನ ಕುಟುಂಬಕ್ಕೆ ರಕ್ಷಣೆ ನೀಡುವವರು ಯಾರು? ಆತನ ಕುಟುಂಬಕ್ಕೆ ಮತ್ತು ಆತನ ಮಕ್ಕಳಿಗೆ ಯಾರು ದಿಕ್ಕು ಎಂಬ ಪ್ರಶ್ನೆ ಕಾಡುತ್ತಿದೆ. ಇನ್ನಾದರೂ ಸಮಾಜದಲ್ಲಿ ಇಂಥ ಘಟನೆಗಳು ನಡೆಯದ ರೀತಿಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಸ್ಲಿಂ ಸಂಘಟನೆಗಳ ವತಿಯಿಂದ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದರು.
ಪ್ರತಿಭಟನಾ ಸಭೆಯಲ್ಲಿ ಮುಖಂಡರಾದ ಸದಾಕತ್ ಸನಾವುಲ್ಲ, ಇಮ್ರಾನ್, ತೇಜಾಸ್ ಇತರರು ಇದ್ದರು, ತಹಶೀಲ್ದಾರ್ ಮಹಾಬಲೇಶ್ವರ ಮೂಲಕ ಸರ್ಕಾರಕ್ಕೆ ಮನವಿ ಅರ್ಪಿಸಿದರು.

Get real time updates directly on you device, subscribe now.

Comments are closed.

error: Content is protected !!