ತುಮಕೂರು: ಗುಬ್ಬಿ ಕ್ಷೇತ್ರದಿಂದ ನನ್ನ ಮಗ ಅರುಣ್ ಸೋಮಣ್ಣ ಅವರಿಗೆ ಟಿಕೆಟ್ ಕೇಳಿರುವುದು ನಿಜ, ಕೊಡುವುದು, ಬಿಡುವುದು ಪಕ್ಷದ ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದು ಬಿಜೆಪಿ ಹಿರಿಯ ಮುಖಂಡ ವಿ.ಸೋಮಣ್ಣ ತಿಳಿಸಿದ್ದಾರೆ.
ನಗರದ ಶ್ರೀಸಿದ್ದಗಂಗಾ ಮಠಕ್ಕೆ ತಮ್ಮ ಪತ್ನಿಯೊಂದಿಗೆ ಭೇಟಿ ನೀಡಿ ಹಿರಿಯ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದ ನಂತರ ಪೀಠ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಟಿಕೆಟ್ ಕೊಡುವುದು, ಬಿಡುವುದು ನಮ್ಮ ಕೈಯಲ್ಲಿ ಇಲ್ಲ, ಪಕ್ಷದ ಹೈಕಮಾಂಡ್ಗೆ ಬಿಟ್ಟ ವಿಚಾರ ಎಂದರು.
ನನ್ನ ಮಗ ಹಲವಾರು ವರ್ಷಗಳಿಂದ ಪಕ್ಷದಲ್ಲಿದ್ದು, ಪಕ್ಷಕ್ಕಾಗಿ ದುಡಿದಿದ್ದಾನೆ. ಅವನಿಗೆ ಟಿಕೆಟ್ ನೀಡಿದರೆ ಪಕ್ಷಕ್ಕಾಗಿ ಕೆಲಸ ಮಾಡುತ್ತಾನೆ. ಪಕ್ಷ ಟಿಕೆಟ್ ನೀಡಿದರೆ ಸಂತೋಷ ಎಂದ ವಿ.ಸೋಮಣ್ಣ, ಡಬಲ್ ಇಂಜಿನ್ ಸರಕಾರಕ್ಕೆ ಈ ಚುನಾವಣೆ ಪ್ರಮುಖ ಘಟ್ಟ, ಎರಡು ಸರಕಾರ ಒಟ್ಟಿಗೆ ಕೆಲಸ ಮಾಡಿವೆ. ಹಾಗಾಗಿ ಗೆಲುವ ಅಭ್ಯರ್ಥಿಗಳ ಕಡೆಗೆ ಹೆಚ್ಚಿನ ಗಮನ ಹರಿಸಿವೆ, ನನ್ನನ್ನು ವರುಣಾ ಕ್ಷೇತ್ರಕ್ಕೆ ಹೋಗು ಎಂದು ಯಾರು ಇದುವರೆಗೂ ಕೇಳಿಲ್ಲ, ಇದೆಲ್ಲಾ ಮಾಧ್ಯಮಗಳ ಊಹಾಪೋಹ. ಒಂದೊಂದು ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಇಲ್ಲದ ನ್ಯೂಸ್ ತುಮಕೂರಿಗೆ ಬಂದು ಬಿಡುತ್ತೆ, ಅದೇನು ಎಂದು ಗೊತ್ತಿಲ್ಲ, ಒಂದು ಕುಟುಂಬಕ್ಕೆ ಇಬ್ಬರಿಗೆ ಟಿಕೆಟ್ ನೀಡುವುದು ಎಷ್ಟು ಸರಿ ಎನ್ನುವ ಚರ್ಚೆ ಪಕ್ಷದಲ್ಲಿ ನಡೆಯುತ್ತಿದೆ.
ಹಾಗಾಗಿ ಬಿಎಸ್ವೈ ತಮ್ಮ ಸ್ಥಾನವನ್ನು ತಮ್ಮ ಮಗನಿಗೆ ಬಿಟ್ಟುಕೊಟ್ಟಿದ್ದಾರೆ. ಸುಮಾರು ಐದಾರು ಜನರು ಈ ರೀತಿಯ ಸ್ಥಿತಿ ಇದೆ, ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದ, ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದೇನೆ ಎಂದರು.
ತುಮಕೂರಿನ ಸಿದ್ದಗಂಗಾ ಮಠಕ್ಕೂ ನನಗೂ ಅವಿನಾಭಾವ ಸಂಬಂಧ, ಹತ್ತಾರು ಸಾವಿರ ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ನೀಡುವ ಮೂಲಕ ನಡೆದಾಡುವ ದೇವರಾಗಿರುವ ಸಿದ್ದಗಂಗಾ ಶ್ರೀಗಳ ಹುಟ್ಟು ಹಬ್ಬವಾದ ಏಪ್ರಿಲ್ 01 ರಂದು ನೀತಿ ಸಂಹಿತೆ ಕಾರಣ ಮತ್ತು ನನ್ನ ಕ್ಷೇತ್ರ ಗೋವಿಂದರಾಜ ನಗರದಲ್ಲಿಯೂ ಶ್ರೀಗಳ ಹುಟ್ಟು ಹಬ್ಬ ಕಾರ್ಯಕ್ರಮವಿದ್ದ ಕಾರಣ ಬರಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಈಗ ಬಂದು ಶ್ರೀಗಳ ಆಶೀರ್ವಾದ ಪಡೆದಿದ್ದೇನೆ ಎಂದರು.
ಈ ವೇಳೆ ಸಂಸದ ಜಿ.ಎಸ್.ಬಸವರಾಜು, ಶಾಸಕ ಜಿ.ಬಿ.ಜೋತಿಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿ ಹೆಬ್ಬಾಕ, ನಗರ ಮಂಡಳ ಅಧ್ಯಕ್ಷ ಹನುಮಂತ ರಾಜು, ಪಾಲಿಕೆ ಸದಸ್ಯರಾದ ಮಂಜುಳ ಆದರ್ಶ, ರಮೇಶ್ ಇತರರು ಇದ್ದರು.
Comments are closed.