ತುಮಕೂರು: ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಪಿಆರ್ಓ ಹಾಗೂ ಎಪಿಆರ್ಓಗಳಿಗಾಗಿ ಮಂಗಳವಾರ ಏರ್ಪಡಿಸಲಾಗಿದ್ದ ಚುನಾವಣಾ ತರಬೇತಿಗೆ ಗೈರು ಹಾಜರಾದವರ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆ 1951ರ ಕಲಂ 134 ಅನ್ವಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್. ಪಾಟೀಲ ಸೂಚನೆ ನೀಡಿದರು.
ನಗರದ ಎಂಪ್ರೆಸ್ ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ ಮಂಗಳವಾರ ಜರುಗಿದ ಪಿಆರ್ಓ ಹಾಗೂ ಎಪಿಆರ್ಓಗಳ ಚುನಾವಣಾ ತರಬೇತಿಯಲ್ಲಿ ಮಾತನಾಡಿ, ತರಬೇತಿಗೆ ನಿಯೋಜಿಸಲಾಗಿದ್ದ ಕೆಲವು ಸಿಬ್ಬಂದಿ ಕಾರಣ ರಹಿತವಾಗಿ ಗೈರು ಹಾಜರಾಗಿರುವುದು ಗಮನಕ್ಕೆ ಬಂದಿದೆ. ಗೈರು ಹಾಜರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಗೈರು ಹಾಜರಾದ ಅಧಿಕಾರಿ, ಸಿಬ್ಬಂದಿಗೆ ತಮ್ಮ ತಾಲ್ಲೂಕು, ಜಿಲ್ಲಾ ಮಟ್ಟದ ಮುಖ್ಯಸ್ಥರ ಮೂಲಕ ಸಕಾರಣ ನೀಡಲು 24 ಗಂಟೆಗಳ ಕಾಲಾವಕಾಶ ನೀಡಲಾಗಿದೆ. ಗೈರಾದ ಸಿಬ್ಬಂದಿ ಕಚೇರಿ ಮುಖ್ಯಸ್ಥರು ಖುದ್ದಾಗಿ ಹಾಜರಾಗಿ ಏಪ್ರಿಲ್ 12ರ ಸಂಜೆ 5 ಗಂಟೆಯೊಳಗಾಗಿ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸ್ಪಷ್ಟೀಕರಣ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದರು.
ದ್ವಿತೀಯ ಪಿಯುಸಿ ಮೌಲ್ಯಮಾಪನ ಕಾರ್ಯಕ್ಕೆ ತೆರಳಿದವರಿಗೆ ಈ ತರಬೇತಿಯಿಂದ ವಿನಾಯತಿ ನೀಡಲಾಗಿದ್ದು, ಅವರಿಗೆ ಪ್ರತ್ಯೇಕವಾಗಿ ಚುನಾವಣಾ ತರಬೇತಿ ನೀಡಲಾಗುವುದು ಎಂದರಲ್ಲದೆ, ಜಿಲ್ಲೆಯಲ್ಲಿ ನ್ಯಾಯ ಸಮ್ಮತವಾಗಿ ವಿಧಾನಸಭಾ ಚುನಾವಣೆ ನಡೆಸುವ ನಿಟ್ಟಿನಲ್ಲಿ 3451 ಪಿಆರ್ಓ ಹಾಗೂ 3466 ಎಪಿಆರ್ಓಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ನಂತರ ಸಂಪನ್ಮೂಲ ವ್ಯಕ್ತಿಗಳು ವಿದ್ಯುನ್ಮಾನ ಮತಯಂತ್ರ, ಮತದಾನದ ಅಂಕಿ ಅಂಶ, ಪಿಆರ್ಓ ದಿನಚರಿ, ನಮೂನೆ 17ಎ, 17ಸಿ ಮತ್ತಿತರ ಚುನಾವಣಾ ಮಾಹಿತಿ ಕುರಿತು ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ಹೆಚ್.ವಿ.ದರ್ಶನ್, ಕೌಶಲ್ಯಾಭಿವೃದ್ಧಿ ಅಧಿಕಾರಿ ಶ್ರೀನಿವಾಸ್, ಪಾಲಿಕೆ ಚುನಾವಣಾ ಶಾಖೆಯ ನಾಗಭೂಷಣ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಜರಿದ್ದರು.
Comments are closed.