ತುರುವೇಕೆರೆ: ತಾಲೂಕಿನ ಪುರದ ಪಾಳ್ಯದಲ್ಲಿ ಹೇಮಾವತಿ ಇಲಾಖಾ ವತಿಯಿಂದ ನಿರ್ಮಾಣ ಮಾಡಲಾಗುತ್ತಿರುವ ಸಂಪರ್ಕ ರಸ್ತೆ ಅತ್ಯಂತ ಕಳೆಯಿಂದ ಕೂಡಿದೆ ಎಂದು ಪುರ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಯುವ ಮುಖಂಡ ಜಗದೀಶ್ ಮಾತನಾಡಿ, ತಾಲೂಕಿನ ಕಲ್ಲೂರು- ತುರುವೇಕೆರೆ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ಪುರ ಪಾಳ್ಯದ ರಸ್ತೆ ನಿರ್ಮಾಣ ಕಾಮಗಾರಿ ವೇಳೆ ಗುತ್ತಿಗೆದಾರರು ಗುಣಮಟ್ಟ ಕಾಯ್ದುಕೊಂಡಿಲ್ಲ. ಗುತ್ತಿಗೆದಾರನ ಜೇಬು ತುಂಬಿಸಿಕೊಳ್ಳುವ ತರಾತುರಿಯಲ್ಲಿ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ. ಗ್ರಾಮದ ಅಲ್ಲಲ್ಲಿ ನಿರ್ಮಾಣ ಮಾಡಲಾಗಿರುವ ಸಿ.ಸಿ.ರಸ್ತೆ ಅಗಲದಲ್ಲಿ ವ್ಯತ್ಯಾಸ ಮಾಡಲಾಗಿದೆ. ಗುಣಮಟ್ಟದ ಬಗ್ಗೆ ಪ್ರಶ್ನಿಸಿದರೆ ಗುತ್ತಿಗೆದಾರ ನಾನು ಮಾಡುವುದೆ ಹೀಗೆ ಎಂದು ಉದ್ಧಟತನದ ಉತ್ತರ ನೀಡುತ್ತಾರೆ. ಮೇಲ್ವಿಚಾರಣೆ ಜವಾಬ್ದಾರಿ ಹೊತ್ತ ಇಂಜಿನಿಯರ್ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿಲ್ಲ. ಗುಣಮಟ್ಟದ ರಸ್ತೆ ನಿರ್ಮಾಣ ಮಾಡಬೇಕೆಂಬುದು ನಮ್ಮ ಆಗ್ರಹವಾಗಿದ್ದು ಸಂಬಂಧಪಟ್ಟವರು ಇತ್ತ ಗಮನ ಹರಿಸಬೇಕೆಂದು ಒತ್ತಾಯಿಸಿದರು.
ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ನಾಗೇಂದ್ರ ಮಾತನಾಡಿ ಪುರದ ಪಾಳ್ಯಕ್ಕೆ ರಸ್ತೆ ನಿರ್ಮಿಸುವ ನೆಪದಲ್ಲಿ ಗುತ್ತಿಗೆದಾರ ಜೇಬು ತುಂಬಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಗುಣಮಟ್ಟವನ್ನು ಗಾಳಿಗೆ ತೂರಿದ್ದರು ಇಲಾಖಾ ಇಂಜಿನಿಯರ್ ಗುತ್ತಿಗೆದಾರನಿಗೆ ಸೂಚನೆ ನೀಡದಿರುವುದು ಅನುಮಾನಕ್ಕೆಡೆ ಮಾಡಿದೆ. ಗುಣಮಟ್ಟ ಕಾಯ್ದುಕೊಳ್ಳದೆ ರಸ್ತೆ ನಿರ್ಮಾಣ ಮಾಡುವ ಮೂಲಕ ಸಾರ್ವಜನಿಕ ಹಣ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಶೀಘ್ರ ಸಂಬಂದಪಟ್ಟವರು ಗುಣಮಟ್ಟದ ರಸ್ತೆ ನಿರ್ಮಿಸಲಿ, ಇಲ್ಲವಾದಲ್ಲಿ ರೈತರೊಡಗೂಡಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಧರ್ಮಪಾಲ್, ಭಾನುಪ್ರಕಾಶ್, ಚಂದ್ರು, ಆಕಾಶ್, ವೆಂಕಟೇಶ್, ಮಧು, ಪವನ್ ಇತರರು ಇದ್ದರು.
Comments are closed.