ತುಮಕೂರು: ಕರ್ನಾಟಕ ವಿಧಾನಸಭಾ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾದ ದಿನ ಅಂದರೆ ಮಾರ್ಚ್ 29 ರಿಂದ ಏಪ್ರಿಲ್ 11ರ ವರೆಗೆ ಜಿಲ್ಲೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆಯಡಿ 81.33 ಲಕ್ಷ ರೂ. ನಗದನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಪಾರದರ್ಶಕ ಚುನಾವಣೆ ನಡೆಸುವ ನಿಟ್ಟಿನಲ್ಲಿ ಚುನಾವಣಾ ಅಕ್ರಮ ತಡೆಯಲು 156 ವಿಚಕ್ಷಣ ದಳ (ಎಫ್ಎಸ್ಟಿ-ಫ್ಲೈಯಿಂಗ್ ಸ್ವ್ಯಾಡ್) 135 ಸ್ಥಿರ ಕಣ್ಗಾವಲು ತಂಡ (ಎಸ್ಎಸ್ಟಿ- ಸ್ಟ್ಯಾಟಿಕ್ ಸರ್ವೇಲೆನ್ಸ್ ತಂಡ) ಹಾಗೂ 9 ಅಬಕಾರಿ ತಂಡ ರಚಿಸಿ ನಿಯೋಜಿಸಲಾಗಿದೆ.
ಜಿಲ್ಲಾದ್ಯಂತ ನಿಯೋಜಿತ ತಂಡಗಳು ಮಾರ್ಚ್ 29 ರಿಂದ ಏಪ್ರಿಲ್ 11ರ ವರೆಗೆ ಪೊಲೀಸರ ಸಹಕಾರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಎಸ್ಎಸ್ಟಿ ತಂಡದಿಂದ 5.08 ಲಕ್ಷ ರೂ. ಹಾಗೂ ಪೊಲೀಸ್ ಇಲಾಖೆಯಿಂದ 76.25 ಲಕ್ಷ ರೂ. ಸೇರಿ 81.33ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ದಾಖಲೆಯಿಲ್ಲದ 75 ಲಕ್ಷ ಹಣ ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ಸೂಕ್ತ ದಾಖಲೆ ಒದಗಿಸಿದವರಿಗೆ 3.70 ಲಕ್ಷ ರೂ. ಹಣ ಹಿಂದಿರುಗಿಸಲಾಗಿದೆ. ಉಳಿದ 2.63 ಲಕ್ಷ ರೂ. ಹಣವನ್ನು ಜಿಲ್ಲಾ ಖಜಾನೆಗೆ ಜಮೆ ಮಾಡಲಾಗಿದೆ. ಆದಾಯ ತೆರಿಗೆ ಇಲಾಖೆಯಲ್ಲಿ ಜಮೆಯಾಗಿರುವ 75 ಲಕ್ಷ ರೂ. ಹಣಕ್ಕೆ ಸಮರ್ಪಕ ದಾಖಲೆ ಒದಗಿಸಿದ ನಂತರ ಸಂಬಂಧಿಸಿದವರಿಗೆ ಹಿಂದಿರುಗಿಸಲಾಗುವುದು.
ಅದೇ ರೀತಿ ಮಾರ್ಚ್ 29 ರಿಂದ ಏಪ್ರಿಲ್ 11ರ ವರೆಗೆ ಅಬಕಾರಿ ಇಲಾಖೆ, ಫ್ಲೈಯಿಂಗ್ ಸ್ಕ್ವಾಡ್ ತಂಡ ಹಾಗೂ ಪೊಲೀಸ್ ತಂಡದಿಂದ ಜಿಲ್ಲೆಯಲ್ಲಿ 89,92,641 ರೂ. ಮೌಲ್ಯದ ದಾಖಲೆಯಿಲ್ಲದ 16804.53 ಲೀ. ಭಾರತೀಯ ತಯಾರಿಕಾ ಮದ್ಯ 16371.01 ಲೀ. ಬಿಯರ್ ಹಾಗೂ 50ಲೀ. ಸೇಂದಿ ವಶಪಡಿಸಿಕೊಳ್ಳಲಾಗಿದೆ.
ಚುನಾವಣಾ ಅಕ್ರಮಗಳಿಗಾಗಿ ಬಳಸಿಕೊಂಡಿದ್ದ 50 ದ್ವಿಚಕ್ರ ವಾಹನ, 2 ನಾಲ್ಕು ಚಕ್ರ ವಾಹನ, ಮತದಾರರಿಗೆ ಹಂಚಿಕೆ ಮಾಡಲು ಸಂಗ್ರಹಿಸಿಟ್ಟಿದ್ದ ವಸ್ತು, ದವಸ- ಧಾನ್ಯ, ಉಡುಪುಗಳನ್ನು ವಶಪಡಿಸಿಕೊಳ್ಳಲಾಗಿದ್ದು, 63,01,312 ರೂ. ಮೌಲ್ಯದ 720 ಎಲ್ಇಡಿ ಬಲ್ಬ್, 9 ಬ್ಯಾಗ್ನಲ್ಲಿದ್ದ 137 ಚೂಡಿದಾರ್ ಪೀಸ್, 2 ಬ್ಯಾಗ್ನಲ್ಲಿದ್ದ 13 ಲೆಹಂಗಾ ಪೀಸ್, 1 ಬ್ಯಾಗ್ನಲ್ಲಿದ್ದ 25 ಬುರ್ಖಾ ಪೀಸ್, 1 ಬ್ಯಾಗ್ ನಲ್ಲಿದ್ದ 16 ಲಾಂಗ್ ಫ್ರಾಕ್ಸ್, 54 ಬಾಕ್ಸ್ ಡಿನ್ನರ್ ಸೆಟ್, ತಲಾ 77 ಕೆ.ಜಿ. 400 ಭತ್ತದ ಚೀಲ, 2235 ಕೆಜಿ ಅಲ್ಯುಮಿನಿಯಂ ಮತ್ತು ಸ್ಟೀಲ್ ಪಾತ್ರೆ, 100 ನೈಟಿ, 2321 ಸೀರೆ, 301 ಚೂಡಿದಾರ್ ಟಾಪ್ಸ್, 68 ಲೆಗ್ಗಿನ್ಸ್, ತಲಾ 60 ಕೆಜಿ 20 ಜೋಳದ ಚೀಲ, ಕೆಎ-06- ಎಬಿ-5828 ಕ್ಯಾಂಟರ್ ಲಾರಿ, 257 ಚುನಾವಣಾ ಕರಪತ್ರ, ಮಂಜುನಾಥ ಸ್ವಾಮಿ ಭಾವಚಿತ್ರ ಮತ್ತು ಬಳೆಗಳ ಪೊಟ್ಟಣ, ತಲಾ 26 ಕೆ.ಜಿ.ಯ 90 ಚೀಲ ಅಕ್ಕಿ, 2500-3000 ಜೆ.ಡಿ.ಎಸ್. ಪಕ್ಷದ ಪಾಂಪ್ಲೇಟ್, 380 ಅಕ್ಕಿಯ ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ.
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಡಿ ದಾಖಲಾದ ಪ್ರಕರಣಗಳಲ್ಲಿ ಒಟ್ಟು 27 ಹಾಗೂ ಅಬಕಾರಿ ಕಾಯ್ದೆಯನ್ನು ಉಲ್ಲಂಸಿದ 249 ಪ್ರಕರಣಗಳಿಗೆ ಪ್ರಥಮ ವರ್ತಮಾನ ವರದಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
Comments are closed.