ಕುಣಿಗಲ್: ಬಿಜೆಪಿ ಪಕ್ಷದಿಂದ ಅಧಿಕೃತವಾಗಿ ಮುಖಂಡ ಡಿ.ಕೃಷ್ಣಕುಮಾರ್ ಅವರಿಗೆ ನಾಲ್ಕನೇ ಬಾರಿ ಟಿಕೆಟ್ ಘೋಷಣೆಯಾದ ಹಿನ್ನೆಲೆಯಲ್ಲಿ ಟಿಕೆಟ್ ಆಕಾಂಕ್ಷಿಗಳಾಗಿದ್ದ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇ ಗೌಡ, ಮುಖಂಡ ರಾಜೇಶ್ಗೌಡ ತೋಟದ ಮನೆಗಳಲ್ಲಿ ಇಬ್ಬರೂ ಮುಖಂಡರು ಪ್ರತ್ಯೇಕವಾಗಿ ಬೆಂಬಲಿಗರ, ಕಾರ್ಯಕರ್ತರ ಸಭೆ ನಡೆಸಿದರು.
2008ರಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದ ಡಿ.ಕೃಷ್ಣಕುಮಾರ್ ನಂತರ ನಡೆದ ಚುನಾವಣೆಯಲ್ಲಿ ಸೋಲುಂಡಿದ್ದು ಮೂರು ಬಾರಿ ಸೋತಿದ್ದಾರೆ. ಸೋತರು ಪಕ್ಷ ಬಿಡದೆ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದರು. ಮಂಗಳವಾರ ರಾತ್ರಿ ಬಿಜೆಪಿ ಟಿಕೆಟ್ ಅಧಿಕೃತವಾದ ಹಿನ್ನೆಲೆಯಲ್ಲೆ ಟಿಕೆಟ್ ಆಕಾಂಕ್ಷಿಯಾಗಿದ್ದ ಇಬ್ಬರು ಮುಖಂಡರ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲೆ ಅಸಮಾಧಾನ ಹೊರ ಹಾಕಿದರು.
ಬುಧವಾರ ಮಧ್ಯಾಹ್ನ ಅರಕೆರೆ ಗ್ರಾಮದ ತೋಟದಲ್ಲಿ ಮುಖಂಡ ರಾಜೇಶ್ಗೌಡ ಸಭೆ ನಡೆಸಿದರು, ಸಭೆಯಲ್ಲಿ ಅಭಿಮಾನಿಗಳಾದ ನಟರಾಜ್, ಶಿವಣ್ಣ, ರಾಜು ಇತರರು ಬಿಜೆಪಿ ತತ್ವ ಸಿದ್ಧಾಂತದ ಪಕ್ಷ ಎಂದುಕೊಂಡಿದ್ದೇವು. ಆದರೆ ಪಕ್ಷದಿಂದ ಮೂರು ಬಾರಿ ಟಿಕೆಟ್ ಪಡೆದರೂ ಸೋತ ವ್ಯಕ್ತಿಗೆ ನಾಲ್ಕನೆ ಬಾರಿಗೆ ಟಿಕೆಟ್ ನೀಡಿದ್ದಾರೆ, ಇದು ಸರಿಯಲ್ಲ. ಎಂಟು ವರ್ಷದಿಂದ ಪಕ್ಷಕ್ಕೆ ಶ್ರಮಿಸುತ್ತಿರುವ ರಾಜೇಶ್ ಗೌಡರಿಗೆ ಟಿಕೆಟ್ ನೀಡುತ್ತೇವೆ ಎಂದು ಹೇಳಿ ವಂಚನೆ ಮಾಡಿದ್ದಾರೆ. ಹೀಗಾಗಿ ರಾಜೇಶ್ ಗೌಡರು ಈ ಬಾರಿ ಸ್ಪರ್ಧೆ ಮಾಡಲೆಬೇಕು ಎಂದರೆ, ಉಮೇಶ್ಎಂಬುವರು ನಿಮ್ಮನ್ನು ಬೆಂಬಲಿಸುತ್ತೇವೆ ಎಂಬ ಒಂದೆ ಕಾರಣಕ್ಕೆ ನಮ್ಮ ಮನೆ ಮೇಲೆ ಹಲ್ಲೆ ಮಾಡುತ್ತೇವೆ, ನಮ್ಮನ್ನು ಪುಡಿ ಮಾಡುತ್ತೇವೆ ಎಂದು ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ ಏನು ಮಾಡೋದು ಎಂದರು. ಮತ್ತೊರ್ವ ಮುಖಂಡ ರಾಜು, ನೀವು ಚುನಾವಣೆ ನಿಲ್ಲಿ, ಬಿಡಿ ನಿಮ್ಮ ಅಭಿಮಾನಿಗಳು ನಾವು, ನಿಮ್ಮ ನಿರ್ಧಾರ ಶೀಘ್ರವಾಗಿ ತಿಳಿಸಿ, ಆದರೆ ಬಿಜೆಪಿಗೆ ಮತ ಹಾಕಿ ಎಂದು ಮಾತ್ರ ಹೇಳಬೇಡಿ ಎಂದರು.
ಸಭೆಯಲ್ಲಿ ಮುಖಂಡ ರಾಜೇಶ್ ಗೌಡ ಮಾತನಾಡಿ, ತಾವು ಯಾವುದೇ ವರ್ಗಾವಣೆ ದಂಧೆ ಮಾಡಿಲ್ಲ. ಗುತ್ತಿಗೆದಾರರಿಂದ ಕಮಿಷನ್ ಪಡೆದಿಲ್ಲ. ಅಕ್ರಮವಾಗಿ ಹಣ ಸಂಪಾದಸಿಲ್ಲ. ಯಾರಿಗೂ ಮೋಸ ಮಾಡಿಲ್ಲ. ನಾನು ಕಷ್ಟಪಟ್ಟು ಸಂಪಾದಿಸಿದ ದುಡ್ಡನ್ನು ತಂದು ಹಿಂದೂ ಧರ್ಮದ ಪರ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ತಾಲೂಕಿನಾದ್ಯಂತ ಕಳೆದ ಎಂಟು ವರ್ಷದಿಂದಲೂ ಮಾಡುತ್ತಿದ್ದೇನೆ ಮುಂದೆಯೂ ಮಾಡುತ್ತೇನೆ. ಸಂಘ, ಪರಿವಾರದ ಎಲ್ಲಾ ಕಾರ್ಯಕ್ರಮಗಳನ್ನು ಸಕ್ರೀಯವಾಗಿ ನಡೆಸಿದ್ದೇನೆ. ನನಗೆ ಟಿಕೆಟ್ ಯಾಕೆ ವಂಚಿಸಲಾಗಿದೆ ಎಂದು ಇದುವರೆಗೂ ಪಕ್ಷ ಹೇಳಿಲ್ಲ. ನನ್ನ ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ಯಾರೂ ಬೆದರಿಕೆ ಹಾಕಿದರೆ ಸರಿ ಇರೊಲ್ಲ. ಕುಣಿಗಲ್ ತಾಲೂಕನ್ನು ಯಾರು ಗುತ್ತಿಗೆ ಪಡೆದಿಲ್ಲ. ಇನ್ನು ಎರಡು ದಿನದೊಳಗೆ ನನ್ನ ಸ್ಪಷ್ಟ ಅಭಿಪ್ರಾಯ ತಿಳಿಸುತ್ತೇನೆ ಎಂದರು.
ಬುಧವಾರದಂದೆ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇ ಗೌಡರು ಹೆಬ್ಬೂರು ಸಮೀಪದ ತಮ್ಮ ತೋಟದ ಮನೆಯಲ್ಲಿ ಅಭಿಮಾನಿಗಳು, ಕಾರ್ಯಕರ್ತರ ಸಭೆ ನಡೆಸಿದರು. ಸಭೆಯಲ್ಲಿ ಪಕ್ಷ ತಮಗೆ ವಿಶ್ವಾಸ ನೀಡಿದ್ದರಿಂದ ಪಕ್ಷಕ್ಕೆ ಬಂದಿದ್ದೆ. ಆದರೆ ನಿರಾಕರಿಸುವ ಕಾರಣ ಏನೆಂದು ಗೊತ್ತಿಲ್ಲ, ಸೂಕ್ತ ಸಮಯ ಬಂದಾಗ ಎಲ್ಲವನ್ನು ಜನರ ಮುಂದಿಡುತ್ತೇನೆ. ಇದೀಗ ನನ್ನನ್ನು ನಂಬಿ ಬಂದ ಕಾರ್ಯರ್ಕರು, ಅಭಿಮಾನಿಗಳ ರಕ್ಷಣೆಗಾಗಿ ಚುನಾವಣೆ ಕಣದಲ್ಲಿ ಇರುತ್ತೇನೆ. ಈ ಬಗ್ಗೆ ಗೊಂದಲ ಬೇಡ, ಕುಣಿಗಲ್ ತಾಲೂಕಿನ ಸ್ವಾಭಿಮಾನ ರಕ್ಷಣೆ, ಹೊಂದಾಣಿಕೆ ರಾಜಕಾರಣ ಸೇರಿದಂತೆ ಹಲವು ಅಕ್ರಮಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ. ಈ ಬಗ್ಗೆ ಇನ್ನೆರಡು ದಿನದೊಳಗೆ ಅಂತಿಮ ಅಭಿಪ್ರಾಯ ವ್ಯಕ್ತಪಡಿಸುತ್ತೇನೆ. ತಾಲೂಕಿನ ರಾಜಕಾರಣದಲ್ಲಿ ದ್ವೇಷ, ದಬ್ಬಾಳಿಕೆ, ದೌರ್ಜನ್ಯ ರಾಜಕಾರಣ ನಡೆಯುತ್ತಿದೆ. ನಮ್ಮ ಕಾರ್ಯಕರ್ತರು, ಬೆಂಬಲಿಗರಿಗೆ ರಾಜಕಾರಣದ ಹಿನ್ನೆಲೆಯಲ್ಲಿ ತೊಂದರೆ ನೀಡಿದ್ದೆ ಆದಲ್ಲಿ ಯಾವುದೇ ಕಾರಣಕ್ಕೂ ಕ್ಷಮಿಸುವ ಪ್ರಶ್ನೆ ಇಲ್ಲ. ನಾನು ಸುಮ್ಮನಿದ್ದೇನೆ ಎಂಬ ಮಾತ್ರಕ್ಕೆ ಅಶಕ್ತನಲ್ಲ. ನನ್ನ ಒಂದು ಮುಖ ನೋಡಿದ್ದಾರೆ, ಕಾರ್ಯಕರ್ತರನ್ನು ಕೆಣಕಿದರೆ ಇನ್ನೊಂದು ಮುಖ ತೋರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ, ನಾನು ರಾಜಕಾರಣದಲ್ಲಿ ಇರಬೇಕೋ ಬೇಡವೋ ಎಂದು ನಿರ್ಧರಿಸುವುದು ಮತದಾರರು, ಜನತೆ, ಆದರೆ ಯಾವುದೇ ಪಕ್ಷವಲ್ಲ ಎಂದರು.
Comments are closed.