ಅಮೂಲ್ ವಿರುದ್ಧ ಕರವೇಯಿಂದ ಪ್ರತಿಭಟನೆ

ಅಮೂಲ್ ಉತ್ಪನ್ನ ತಿರಸ್ಕರಿಸಿ ನಂದಿನಿ ಉತ್ಪನ್ನ ಬಳಸಲು ಕರೆ

71

Get real time updates directly on you device, subscribe now.


ತುಮಕೂರು: ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಕರ್ನಾಟಕದ ಉತ್ಕೃಷ್ಟ ನಂದಿನಿ ಹಾಲಿನ ಉತ್ಪನ್ನಗಳನ್ನು ಗುಜರಾತ್ ಮೂಲದ ಅಮುಲ್ ಹಾಲಿನ ಉತ್ಪನ್ನಗಳ ಸಂಸ್ಥೆಯೊಂದಿಗೆ ನಂದಿನಿ ಹಾಲಿನ ಬ್ರಾಂಡ್ ಉತ್ಪನ್ನಗಳ ಜೊತೆಗೆ ವಿಲೀನ ಮಾಡಿ ಗ್ರಾಹಕರಿಗೆ ನೀಡುವ ಉನ್ನಾರ ನಡೆಯುತ್ತಿದ್ದು ಇದರ ವಿರುದ್ಧ ಸರ್ಕಾರದ ಯಾವುದೇ ವ್ಯಕ್ತಿಗಳು ಮಾತನಾಡುತ್ತಿಲ್ಲ. ಅಲ್ಲದೆ ಗುಜರಾತ್ ನ ಮಾರ್ವಾಡಿಗಳು ದಬ್ಬಾಳಿಕೆ ಮಾಡಿ ಅಮೂಲ್ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದರಿಂದ ನಂದಿನಿ ಹಾಲಿನ ಉತ್ಪನ್ನಗಳ ಬೆಲೆ ಗಣನೀಯವಾಗಿ ಕುಸಿದಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾ ಕೇಂದ್ರದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಮಂಜುನಾಥ್ ಗೌಡ ನೇತೃತ್ವದಲ್ಲಿ ಅಮೂಲ್ ಉತ್ಪನ್ನಗಳನ್ನು ರಸ್ತೆಗೆ ಸುರಿದು ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿಯ ಗುಂಚಿ ವೃತ್ತದಲ್ಲಿ ಕರವೇ ಕಾರ್ಯಕರ್ತರು ಅಮುಲ್ ಉತ್ಪನ್ನಗಳನ್ನು ರಸ್ತೆಗೆ ಸುರಿದು ನಂದಿನಿ ಹಾಲಿನ ಉತ್ಪನ್ನಗಳಾದ ಮಜ್ಜಿಗೆ ಕುಡಿಯುವ ಮೂಲಕ ಪ್ರತಿಭಟಿಸಿದರು.

ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಮಂಜುನಾಥ್ ಗೌಡ ಮಾತನಾಡಿ, ಹತ್ತಾರು ವರ್ಷಗಳಿಂದ ರೈತರು ಕಟ್ಟಿರುವ ನಂದಿನಿ ಹಾಲು ಉತ್ಪಾದಕ ಸಂಸ್ಥೆಯನ್ನು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಗುಜರಾತ್ ನ ಅಮೂಲ್ ಹಾಲು ಉತ್ಪಾದನಾ ಸಂಸ್ಥೆಯು ಅಮೂಲ್ ಹೆಸರಿನಲ್ಲಿ ನಂದಿನಿ ಉತ್ಪನ್ನಗಳನ್ನು ಮಾರಲು ಹೊರಟು ಹುನ್ನಾರ ನಡೆಸುತ್ತಿದ್ದು ಕನ್ನಡಿಗರಾದ ನಾವು ಇದನ್ನ ಸಹಿಸಲು ಆಗುವುದಿಲ್ಲ. ಹೀಗಾಗಿ ಕರವೇ ರಾಜ್ಯಾದ್ಯಂತ ಅಮೂಲ್ ಉತ್ಪನ್ನಗಳನ್ನು ಬೀದಿಗೆಸೆದು ಹೋರಾಟ ಮಾಡುತ್ತಿದ್ದು ಈ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಅಮೂಲ್ ವಿರುದ್ಧ ಪ್ರತಿಭಟಸಿದ್ದೇವೆ ಎಂದರು.

ಅಮೂಲ್ ವಿಚಾರವಾಗಿ ಪ್ರಧಾನ ಮಂತ್ರಿಗಳು ಮಧ್ಯಸ್ಥಿಕೆ ವಹಿಸಿ ಯಾವ ರಾಜ್ಯಗಳಲ್ಲಿ ಹಾಲಿನ ಉತ್ಪನ್ನಗಳು ಯಥಾಸ್ಥಿತಿಯಲ್ಲಿ ನಡೆಯುತ್ತಿದೆಯೋ ಹಾಗೆಯೇ ಕರ್ನಾಟಕದಲ್ಲಿ ನಂದಿನಿ ಹಾಲಿನ ಉತ್ಪನ್ನಗಳು ನಡೆಯುವಂತೆ ಅಮೂಲ್ ಸಂಸ್ಥೆಗೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.
ಕರವೇ ನಗರ ಅಧ್ಯಕ್ಷ ಉಪ್ಪಾರಹಳ್ಳಿ ಕುಮಾರ್ ಮಾತನಾಡಿ, ಕನ್ನಡ ನಾಡಿನ ಜೀವ ನದಿ ಆಗಿರುವ ನಂದಿನಿ ಹಲವು ಜನರಿಗೆ ಬದುಕು ಕಟ್ಟಿಕೊಟ್ಟಿದೆ. ಗ್ರಾಮೀಣ ಭಾಗದ ಹೈನುಗಾರಿಕೆಯಿಂದ ಉನ್ನತವಾಗಿ ಬೆಳೆಯುತ್ತಿದ್ದು ಗುಜರಾತ್ ಮೂಲದ ಅಮುಲ್ ಸಂಸ್ಥೆಯು ಇದನ್ನು ಕಬ್ಜ ಮಾಡಲು ಹೊರಟಿದ್ದು ಇದಕ್ಕೆ ನಾವು ಬಿಡುವುದಿಲ್ಲ. ಕೂಡಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಧ್ಯಸ್ಥಿಕೆ ವಹಿಸಿ ನಮ್ಮ ರಾಜ್ಯದ ನಂದಿನಿ ಉಳಿಸಲು ಪ್ರಯತ್ನಿಸಬೇಕು. ಇಲ್ಲವಾದರೆ ಈಗ ಇರುವ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಾಗುವುದು ಎಂದರು.

ಜಿಲ್ಲಾ ಮಹಿಳಾ ಅಧ್ಯಕ್ಷೆ ಲೀಲಾವತಿ ಮಾತನಾಡಿ, ನಮ್ಮ ಕನ್ನಡ ನಾಡಿನ ಮಹಿಳೆಯರು ಉತ್ತಮವಾಗಿ ಆರ್ಥಿಕ ಅಭಿವೃದ್ಧಿ ಹೊಂದಿರುವುದು ಹೈನುಗಾರಿಕೆ ಹಾಲಿನಿಂದ ಇಂದೂ ಮಹಿಳೆಯರು ಹಾಕುವ ಹಾಲಿನಿಂದ ನಂದಿನಿ ಸಂಸ್ಥೆಯು ಉತ್ಕೃಷ್ಟವಾಗಿ ಬೆಳೆದಿದೆ. ಆದರೆ ಅಂತರಾಜ್ಯ ಮೂಲದ ಸಂಸ್ಥೆಯು ನಮ್ಮ ಕನ್ನಡ ನಾಡಿನ ಸಂಸ್ಕೃತಿ ಹಾಳು ಮಾಡಲು ಹೊರಟಿರುವುದು ಖಂಡನೀಯ, ಸರ್ಕಾರ ಕೂಡಲೇ ಕ್ರಮ ವಹಿಸದೆ ಹೋದರೆ ಮುಂದಿನ ದಿನಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಉಗ್ರವಾಗಿ ಹೋರಾಟ ಮಾಡಲಿದೆ ಎಂದರು.

ಪ್ರತಿಭಟನೆ ವೇಳೆ ರಸ್ತೆಗೆ ಅಮುಲ್ ಉತ್ಪನ್ನಗಳಾದ ಐಸ್ ಕ್ರೀಮ್, ಚಾಕ್ಲೇಟ್, ಹಾಲು ಮಜ್ಜಿಗೆ ಸುರಿದು ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ನಂದಿನಿ ಹಾಲಿನ ಉತ್ಪನ್ನವಾದ ಮಜ್ಜಿಗೆಯನ್ನು ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ನೀಡಿ ನಂದಿನಿ ಉಳಿಸಲು ಬದ್ಧರಾಗುವಂತೆ ಕರೆ ನೀಡಿದರು.
ಪ್ರತಿಭಟನೆಯಲ್ಲಿ ವಿವಿಧ ತಾಲೂಕಿನ ಕರವೇ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ನಂದನ್ ಗೌಡ, ಕಿಶೋರ್ ಕುಮಾರ್, ಅಶೋಕ್, ಕಿರಣ್ ಕುಮಾರ್ ಇತರ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!