ತುಮಕೂರು: ಇನ್ನು ಮುಂದೆ ನಾನು ಬಿಜೆಪಿ ಕಚೇರಿಗೆ ಕಾಲಿಡುವುದಿಲ್ಲ, ಪಕ್ಷದ ಸದಸ್ಯತ್ವಕ್ಕೆ ರಾಜಿನಾಮೆ ನೀಡುತ್ತೇನೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದರು.
ನಗರದಲ್ಲಿ ಬೆಂಬಲಿಗರೊಂದಿಗೆ ಸಭೆ ನಡೆಸಿ ಮಾತನಾಡಿ, ನನ್ನ ಪಕ್ಷ ನನ್ನ ಕೈ ಹಿಡಿಯುತ್ತೆ ಎಂದು ಭಾವಿಸಿದ್ದೆ, ಕೈ ಬಿಟ್ಟಿದೆ. ಮನೆಯಲ್ಲಿರುವ ಪಕ್ಷದ ಬಾವುಟಗಳನ್ನು ಬೇರೆ ಕಡೆ ಸಾಗಿಸಿ ಗುರುವಾರ ರಾಜಿನಾಮೆ ಸಲ್ಲಿಸುತ್ತೇನೆ ಎಂದರು.
ಕಾಂಗ್ರೆಸ್ ಪಕ್ಷ ಕಟ್ಟಿದವರು ಇಂದು ಬಿಜೆಪಿ ಅರಮನೆಯಲ್ಲಿದ್ದಾರೆ. ಬಿಜೆಪಿ ಕಾರ್ಯಕರ್ತರನ್ನು ಜೈಲಿಗೆ ಹಾಕಿಸಿದವರನ್ನು ತಲೆ ಮೇಲೆ ಕುಳಿಸಿಕೊಂಡಿದ್ದೇವೆ. ಪಕ್ಷಕ್ಕಾಗಿ ಎಲ್ಲವನ್ನು ಸಹಿಸಿಕೊಂಡಿದ್ದೇನೆ. ಮುಂದಿನದು ಜನರ ನಿರ್ಧಾರಕ್ಕೆ ಬಿಟ್ಟದ್ದು ಎಂದರು.
ಅವರೆಕಾಯಿ ಮಾರುತ್ತಿದ್ದ ನನ್ನನ್ನು ಶಾಸಕನಾಗಿ, ಸಚಿವರನ್ನಾಗಿ ಮಾಡಿದ್ದೀರಿ, ಜನರನ್ನು ಬಿಟ್ಟರೆ ನನಗೆ ಬೇರೆ ಯಾರು ಇಲ್ಲ. ಕಾರ್ಯಕರ್ತರು ಬೆಂಬಲಿಗರು ಹೇಳಿದಂತೆ ಚುನಾವಣೆಗೆ ಸ್ಪರ್ಧಿಸುವುದು ಸತ್ಯ, ನಾನು ಕಬ್ಬಡಿ ಆಟಗಾರ, ಎಲ್ಲವನ್ನು ಸ್ಪೂರ್ತಿಯಿಂದ ತೆಗೆದುಕೊಳ್ಳುತ್ತೇನೆ. ಆಟದ ಕಿಚ್ಚನ್ನು ಬಿಟ್ಟಿಲ್ಲ, ತೊಡೆ ತಟ್ಟುವುದನ್ನು ಮರೆತಿಲ್ಲ ಎಂದು ಟಾಂಗ್ ನೀಡಿದರು.
ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಿದಾಗ ನಮ್ಮನ್ನು ಜೈಲಿಗೆ ಹಾಕಿಸಿದವನು ನಮ್ಮ ಮೇಲೆ ಕುಳಿತಿದ್ದಾನೆ. 2013ರಲ್ಲಿ 1200 ಕೋಟಿ ಅನುದಾನ ತಂದರೆ ಲೋಕಾಯುಕ್ತಕ್ಕೆ ಹಾಕಿಸಿದ ಪಾಪಿ, ನಂತರ ಅದೇ ಹಣದಲ್ಲಿ ನಗರದ ಅಭಿವೃದ್ಧಿ ಮಾಡಲಾಯಿತು. ಅದೇ ಅಭಿವೃದ್ಧಿಯಿಂದ ಮೋದಿ ಅವರು ಸ್ಮಾರ್ಟ್ ಸಿಟಿ ಬಂತು, ಆದರಲ್ಲಿಯು ನಿರೀಕ್ಷಿತ ಅಭಿವೃದ್ಧಿಯಾಗಿಲ್ಲ ಎಂದರು.
ತುಮಕೂರಲ್ಲಿ ಮೂಗ್ಬಟ್ಟು, ಕುಕ್ಕರ್, ಎಣ್ಣೆ ಹೆಂಡದ ರಾಜಕೀಯ ಹೆಚ್ಚುತ್ತಿದೆ. ಧರ್ಮ ಹಾಳು ಮಾಡುವುದರೊಂದಿಗೆ ಪ್ರಜಾಪ್ರಭುತ್ವ ಹಾಳಾಗುತ್ತದೆ. ಟಿಕೆಟ್ ಕೊಡಿ ಅಂತ ಕೇಳಿದೆ ಕೊಡಲಿಲ್ಲ. ನನ್ನ ಜನರು ಹೇಳುವುದನ್ನು ಕೇಳುತ್ತೇನೆ. ಕ್ಷೇತ್ರದ ವಿದ್ಯಾವಂತರು ಜೊತೆಯಲ್ಲಿದ್ದಾರೆ, ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದರು.
ಸಮಾಜಕ್ಕಾಗಿ ಸೇವೆ ಮಾಡುವವನಿಗೆ ಟಿಕೆಟ್ ನಿರಾಕರಿಸಲಾಗಿದೆ, ಚುನಾವಣೆಗೆ ಸ್ಪರ್ಧಿಸುವುದು ಸ್ಪಷ್ಟ, ನೀವೆ ತೀರ್ಮಾನ ಮಾಡ್ತೀರೋ, ನಾನೇ ತೀರ್ಮಾನ ಮಾಡ್ಬೇಕೋ ಹೇಳಿ, ಪಕ್ಷನೋ, ಪಕ್ಷೇತರನೋ ಯಾವುದದಾರೂ ಸರಿಯೇ? ಸಮಯ ತೆಗೆದುಕೊಂಡು ತೀರ್ಮಾನ ಮಾಡೋಣ ಅವಕಾಶ ಕೊಡಿ ಎಂದು ಮನವಿ ಮಾಡಿದರು.
ನಾನು ರಾಜೀನಾಮೆ ಕೊಡ್ಬೇಕು, ಕೊಡ್ತೀನಿ, ಮೋದಿ ಹೇಳಿದಂತೆ ಎಲ್ಲರೂ ಒಂದೇ ತಾಯಿ ಮಕ್ಕಳಂತೆ ಬದುಕೋಣ, ನೀವು ತೋರಿಸಿರುವ ದಾರಿಯಲ್ಲಿ ಸಾಗುತ್ತೀನಿ, ನಾನು ರಾಜೀನಾಮೆ ನೀಡುವುದು ಸತ್ಯ ಎಂದರು.
ಇದೇ ವೇಳೆ ಬೆಂಬಲಿಗರು ಶಿವಣ್ಣ ಅವರ ಕಾಲು ಹಿಡಿದುಕೊಂಡು ಕಣ್ಣೀರು ಹಾಕಿ ಚುನಾವಣೆಯಲ್ಲಿ ನೀವು ಸ್ಪರ್ಧೆ ಮಾಡಲೇಬೇಕು ಎಂದು ಆಗ್ರಹಿಸಿದರು.
Comments are closed.