ಕೆ.ಎನ್.ರಾಜಣ್ಣ ಸೋಲಿಸಲು ಹುನ್ನಾರ ನಡೀತ್ತಿದೆ

ನಾಯಕ ಸಮುದಾಯ ಜಾಗೃತಿಯಿಂದ ಮತದಾನ ಮಾಡಲಿ

131

Get real time updates directly on you device, subscribe now.


ತುಮಕೂರು: ಮಧುಗಿರಿ ಕ್ಷೇತ್ರದಿಂದ ಹಿಂದುಳಿದ ವರ್ಗದ ನಾಯಕ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ಎನ್.ರಾಜಣ್ಣ ಅವರ ವಿರುದ್ಧ ನಾಯಕ ಸಮುದಾಯದ ಎಲ್.ಸಿ.ನಾಗರಾಜು ಅವರಿಗೆ ಟಿಕೆಟ್ ನೀಡುವ ನೀಡುವ ಮೂಲಕ ಕೆಎನ್ಆರ್ ಅವರನ್ನು ಸೋಲಿಸುವುದರ ಜೊತೆಗೆ ನಾಯಕ ಸಮುದಾಯ ಒಡೆಯುವ ಕೆಲಸವನ್ನು ಕಾಣದ ಕೈಗಳು ಮಾಡುತ್ತಿದ್ದು, ನಾಯಕ ಸಮುದಾಯದವರು ಜಾಗೃತರಾಗಿ ಮತದಾನ ಮಾಡುವಂತೆ ವಾಲ್ಮೀಕಿ ಸಮಾಜದ ಯುವ ಮುಖಂಡ ಕುಪ್ಪೂರು ಶ್ರೀಧರ ನಾಯಕ್ ಮನವಿ ಮಾಡಿದ್ದಾರೆ.

ಖಾಸಗಿ ಹೊಟೇಲ್ ನಲ್ಲಿ ಆಯೋಜಿಸಿದ್ದ ನಾಯಕ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿ, ಮಧುಗಿರಿ ಕ್ಷೇತ್ರದಿಂದ ಎಲ್.ಸಿ.ನಾಗರಾಜು ಸ್ಪರ್ಧೆ ಸಮಾಜ ಒಡೆಯುವ ಕುತಂತ್ರವಷ್ಟೇ, ಹಾಗಾಗಿ ಮಧುಗಿರಿ ಕ್ಷೇತ್ರದ ನಾಯಕ ಸಮುದಾಯಕ್ಕೆ ಸೇರಿದ ಪ್ರತಿಯೊಬ್ಬ ಮತದಾರರು ಬಹಳ ಎಚ್ಚರಿಕೆಯಿಂದ ಮತ ಚಲಾಯಿಸಬೇಕೆಂಬುದು ನಮ್ಮ ಮನವಿಯಾಗಿದೆ ಎಂದರು.

ಕ್ಷೇತ್ರದಲ್ಲಿ ಪ್ರಚಾರ ನಡೆಸುವ ವೇಳೆ ಬಿಜೆಪಿ ಅಭ್ಯರ್ಥಿಯಾಗಿರುವ ಎಲ್.ಸಿ.ನಾಗರಾಜು ಅವರ ಮಕ್ಕಳು ನಮ್ಮ ತಾಯಿಯ ಸಾವಿಗೆ ಕೆ.ಎನ್.ರಾಜಣ್ಣ ಅವರೆ ಕಾರಣ ಎಂಬ ಸುಳ್ಳು ಸುದ್ದಿ ಹರಡುತ್ತಾ ಜನರಲ್ಲಿ ಕೆ.ಎನ್.ರಾಜಣ್ಣ ಅವರ ವಿರುದ್ಧ ಆಕ್ರೋಶ ಉಂಟಾಗುವಂತೆ ಮಾಡಲು ಪ್ರಯತ್ನಿಸುತಿದ್ದಾರೆ. ಆದರೆ ಇದು ಸುಳ್ಳು ಸುದ್ದಿ, ಎಲ್.ಸಿ.ನಾಗರಾಜು ಅವರ ಪತ್ನಿ ಸಾವಿಗೆ ಕೌಟುಂಬಿಕ ಕಲಹವೇ ಕಾರಣ, ಕೌಟುಂಬಿಕ ಕಲಹದಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ವೈದ್ಯಕೀಯ ದಾಖಲೆಗಳನ್ನು ಮತದಾರರ ಮುಂದೆ ಬಹಿರಂಗ ಪಡಿಸಲಿ ಎಂದು ಕುಪ್ಪೂರು ಶ್ರೀಧರ ನಾಯಕ್ ಒತ್ತಾಯಿಸಿದರು.

ಮಧುಗಿರಿ ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಯಾಗಿರುವ ಕೆ.ಎನ್.ರಾಜಣ್ಣ ಹಣ, ಹೆಂಡ ಹಂಚಿ ರಾತ್ರೋರಾತ್ರಿ ನಾಯಕರಾದವರಲ್ಲ. ರೈತ ಪರ, ಜನಪರ, ದೀನದಲಿತ ಹಾಗೂ ಹಿಂದುಳಿದ ಅಲ್ಪಸಂಖ್ಯಾತರ ಪರ ಧ್ವನಿ ಎತ್ತಿ ಹೋರಾಟಗಳ ಮೂಲಕ ಜನ ನಾಯಕ ಎನಿಸಿಕೊಂಡವರು. ಆದ್ದರಿಂದಲೇ ಕೆ.ಎನ್.ರಾಜಣ್ಣ ಪರಿಶಿಷ್ಟ ವರ್ಗಕ್ಕೆ ಸೇರಿದ್ದರೂ ಸರ್ವ ಜನಾಂಗದ ಜನರ ಅಭಿಲಾಷೆಯಂತೆ ಮಧುಗಿರಿ ವಿಧಾನಸಭಾ ಕ್ಷೇತ್ರದ ಸಾಮಾನ್ಯ ಮೀಸಲು ಕ್ಷೇತ್ರದಲ್ಲಿ 2 ಬಾರಿ ಶಾಸಕರಾಗಿ ಜನಪ್ರಿಯ ನಾಯಕನೆನಿಸಿಕೊಂಡಿದ್ದಾರೆ. ಯಾರಿಗೂ ಮುಖ ಪರಿಚಯವಿಲ್ಲದ ಯಾರೆಂದೂ ಗೊತ್ತಿರದ, ಅಧಿಕಾರಿಯಾಗಿದ್ದ ಎಲ್.ಸಿ ನಾಗರಾಜ್ ರನ್ನು ಕೆಲ ರಾಜಕೀಯ ಪಕ್ಷಗಳು ಹಾಗೂ ಕಾಣದ ಕೈಗಳು ಕೆ.ಎನ್.ರಾಜಣ್ಣ ಮೇಲಿನ ವೈಯಕ್ತಿಕ ಸೇಡಿಗಾಗಿ ಎಲ್ ಸಿ.ನಾಗರಾಜ್ ರಾಜೀನಾಮೆ ಕೊಡಿಸಿ ಅವರ ಮೂಲಕ ಮುಗ್ಧ ಜನರಿಗೆ ಇಲ್ಲಸಲ್ಲದ ಆಸೆ ಆಮಿಷ ಒಡ್ಡಿ ವಾಲ್ಮೀಕಿ ಸಮಾಜದ ಯುವಕರನ್ನು ದಾರಿ ತಪ್ಪಿಸಲು ಹೊರಟಿರುವುದು ಸರಿಯಲ್ಲ ಎಂದರು.

ಬಿಜೆಪಿ ಅಭ್ಯರ್ಥಿಯಾಗಿರುವ ಎಲ್.ಸಿ.ನಾಗರಾಜು ಮತ್ತು ಅವರ ಮಕ್ಕಳು ಪ್ರಚಾರಕ್ಕೆ ಹೋದ ಕಡೆಯಲ್ಲ ಕೆ.ಎನ್.ರಾಜಣ್ಣ ಅವರ ಬಗ್ಗೆ ತಳಬುಡ ಇಲ್ಲದ ಆರೋಪ ಮಾಡಿಕೊಂಡು ಓಡಾಡುತ್ತಿರುವುದು ಸಮುದಾಯಕ್ಕೆ ನೋವು ತಂದಿದೆ. ರಾಜಣ್ಣ ಅವರ ವಿರುದ್ಧ ಸ್ಪರ್ಧಿಸಿ ಗೆಲ್ಲುವುದು ಕಷ್ಟ ಎಂದು ಗೊತ್ತಿದ್ದರೂ ಅವರ ಜನಾಂಗದ ಮತಗಳನ್ನು ಡಿವೈಡ್ ಮಾಡುವ ಉದ್ದೇಶದಿಂದ ಎಲ್.ಸಿ.ನಾಗರಾಜು ಅವರನ್ನು ಕಣಕ್ಕೆ ಇಳಿಸಲಾಗಿದೆ. ಕಳೆದ ಎಂಎಲ್ಸಿ ಚುನಾವಣೆ ವೇಳೆಯೂ ಇದೇ ರೀತಿ ಹುನ್ನಾರ ಮಾಡಿದ್ದರು. ಇದರ ಬಗ್ಗೆ ವಾಲ್ಮೀಕಿ ಸಮುದಾಯದ ಮತದಾರರು ಎಚ್ಚೆತ್ತುಕೊಳ್ಳಬೇಕೆಂದು ಯುವ ಮುಖಂಡ ಕುಪ್ಪೂರು ಶ್ರೀಧರ ನಾಯಕ ಮನವಿ ಮಾಡಿದ್ದಾರೆ.
ಈ ವೇಳೆ ವಾಲ್ಮೀಕಿ ಸಮಾಜದ ಹಿರಿಯ ಮುಖಂಡರಾದ ದೊಡ್ಡ ಓಬಳಯ್ಯ, ಮರಳೂರು ಆರ್.ನಾಗರಾಜು, ಮಾರಣ್ಣ ಪಾಳ್ಳೇಗಾರ್, ಕೃಷ್ಣಪ್ಪ ದೇವಲಾಪುರ, ಆರ್.ರಂಗಸ್ವಾಮಯ್ಯ, ಬುಗುಡನಹಳ್ಳಿ ಕೃಷ್ಣಪ್ಪ ಮತ್ತಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!