ತುಮಕೂರು: ನಮ್ಮ ದೇಶದ ಅತ್ಯಂತ ಪವಿತ್ರವಾದ ಗ್ರಂಥ ಸಂವಿಧಾನ, ಇದಕ್ಕೆ ಮೂಲ ಕಾರಣಕರ್ತರಾಗಿರುವ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಯಾವುದೇ ಜಾತಿ, ತತ್ವಗಳಿಗೆ ಭೇದ ಭಾವ ತೋರಿಸದೆ ಎಲ್ಲವನ್ನು ಸಂವಿಧಾನದಲ್ಲಿ ಅಳವಡಿಸಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ಇದುವರೆಗೂ ಯಾರೇ ಪ್ರಯತ್ನ ಪಟ್ಟರೂ ಸಂವಿಧಾನ ಬದಲಾವಣೆ ಮಾಡಲು ಸಾಧ್ಯವಾಗಿಲ್ಲ. ನಮ್ಮ ದೇಶದ ತಳಹದಿ ಬದಲಾವಣೆ ಮಾಡಲು ಯಾರಾದರೂ ಕೈ ಹಾಕಿದರೆ ಅದರಿಂದ ದೇಶದ ಭದ್ರತೆ, ಅಖಂಡತೆಗೆ ಧಕ್ಕೆ ಬರುತ್ತದೆ ಎಂದು ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಸರಳವಾಗಿ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ 132ನೇ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದ ನಂತರ ಮಾತನಾಡಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಸಮಗ್ರವಾಗಿ ಅಭ್ಯಸಿಸಬೇಕು. ಅವರ ಬಗ್ಗೆ ಸಮಗ್ರವಾಗಿ ತಿಳುವಳಿಕೆ ಹೊಂದಬೇಕು, ಸಮಗ್ರವಾಗಿ ಅವರನ್ನು ತಿಳುವಳಿಕೆ ಹೊಂದಿದಾಗ ಅವರ ಬಗ್ಗೆ ಏನನ್ನೂ ಮಾತನಾಡಲು ಸಾಧ್ಯವಿಲ್ಲ. ಅಷ್ಟು ಪವಿತ್ರವಾಗಿ ಜೀವನ ಸಾಗಿಸಿದವರು ಅಂಬೇಡ್ಕರ್ ಎಂದು ಬಣ್ಣಿಸಿದರು.
ನಮ್ಮ ಮುಂದಿನ ಪೀಳಿಗೆಗೆ ಅಂಬೇಡ್ಕರ್ ಮತ್ತು ಅವರು ಬರೆದಿರುವ ಸಂವಿಧಾನದ ಬಗ್ಗೆ ತಿಳಿಸುವ ಕಾರ್ಯ ಅಗತ್ಯವಾಗಿದೆ. ಅಂಬೇಡ್ಕರ್ ಅವರು ಎಷ್ಟು ಕಷ್ಟ ಪಟ್ಟು ಮೇಲೆ ಬಂದರು ಎಂಬುದರ ಬಗ್ಗೆ ತಿಳಿದುಕೊಳ್ಳಬೇಕಿದೆ ಎಂದರು.
ಒಬ್ಬ ವ್ಯಕ್ತಿ, ದೇಶ ಹಾಗೂ ವಿಶ್ವವನ್ನು ಉದ್ಧಾರ ಮಾಡಲು ಶಿಕ್ಷಣವೊಂದೇ ಪರಿಹಾರ ಎಂದು ಅಂಬೇಡ್ಕರ್ ಹೇಳಿದ್ದಾರೆ. ಪ್ರತಿಯೊಬ್ಬರಿಗೂ ಶಿಕ್ಷಣ ಮುಟ್ಟುವಂತಾಗಬೇಕು ಎಂದು ಸಂವಿಧಾನದಲ್ಲಿ ಬರೆದಿದ್ದಾರೆ. ಇಂದಿನ ಚುನಾವಣಾ ವ್ಯವಸ್ಥೆಯೂ ಸಹ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಬರೆದಿರುವಂತೆಯೇ ನಡೆಯುತ್ತಿದೆ ಎಂದು ಹೇಳಿದರು.
ಅಂಬೇಡ್ಕರ್ ಭಾರತ ರತ್ನ ಅಲ್ಲ, ಅವರು ವಿಶ್ವರತ್ನ, ಅಂಬೇಡ್ಕರ್ ಅಭಿಮಾನಿ ಇಲ್ಲದವನು ಇದ್ದಾನೆ ಎಂದರೆ ಆತ ನಮ್ಮ ದೇಶದವನಲ್ಲ ಎಂದರ್ಥ. ನಮ್ಮ ದೇಶದ ಪ್ರಜಾ ಪ್ರಭುತ್ವ ವ್ಯವಸ್ಥೆ ಸಂವಿಧಾನದ ಆದರ್ಶ ಆಧರಿಸಿ ನಡೆಯುತ್ತಿದೆ. ಹಾಗಾಗಿ ಸಂವಿಧಾನ ರಚಿಸಿದವರ ಅಭಿಮಾನಿ ಇಲ್ಲ ಎಂದರೆ ಏನರ್ಥ ಎಂದು ಪ್ರಶ್ನಿಸಿದರು.
ಅಂಬೇಡ್ಕರ್ ಅವರು ಇದ್ದಂತಹ ಪರಿಸ್ಥಿತಿಯಲ್ಲಿ ಅಷ್ಟು ಎತ್ತರಕ್ಕೆ ಬೆಳೆದರು ಎಂದರೆ ಅವರೊಬ್ಬ ಅದ್ಭುತ ಚೇತನ, ನಮ್ಮನ್ನು ಯಾರೋ ಆಳುತ್ತಿದ್ದ ಸಂದರ್ಭದಲ್ಲಿ ಶಿಕ್ಷಣ ಪಡೆಯುವುದೇ ದುರ್ಲಬ, ಆದರೂ ಅವರ ತಂದೆ ಮಾಡಿದ ತ್ಯಾಗ, ಧೈರ್ಯ, ಅವರು ಎದುರಿಸಿದ ಪರಿಸ್ಥಿತಿ ಎಲ್ಲವೂ ಭಯಾನಕ. ಅಂತಹ ಪರಿಸ್ಥಿತಿಯಲ್ಲಿ ಅತ್ಯದ್ಭುತ ಚೇತನವಾಗಿ ಅಂಬೇಡ್ಕರ್ ಅವರು ಹೊರ ಹೊಮ್ಮಿದ್ದಾರೆ. ನಮ್ಮ ದೇಶದಲ್ಲಿ ಆರ್ಥಿಕ ಸುಭದ್ರತೆ ಇದೆ ಎಂದರೆ ಅದಕ್ಕೆ ರಿಸರ್ವ್ ಬ್ಯಾಂಕ್ ಕಾರಣ, ಈ ರಿಸರ್ವ್ ಬ್ಯಾಂಕ್ ಇಂಡಿಯಾ ಸ್ಥಾಪನೆಯಾಗಲು ಮೂಲ ಕಾರಣಕರ್ತರು ಡಾ.ಅಂಬೇಡ್ಕರ್ ಎಂದರು.
ಅಂಬೇಡ್ಕರ್ ಯಾವುದೇ ಒಂದು ಜಾತಿ, ಸಮುದಾಯಕ್ಕೆ ಕಾನೂನು ಮಾಡಿಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮೇಲಕ್ಕೆತ್ತುವ ನೀತಿ ನಿಯಮಗಳನ್ನು ಸಂವಿಧಾನದಲ್ಲಿ ಅಳವಡಿಸಿದ್ದಾರೆ. ಸಂವಿಧಾನದ ವಿರುದ್ಧವಾಗಿ ಯಾವುದೇ ಯೋಜನೆ ಮಾಡಲು ಸಾಧ್ಯವಿಲ್ಲ. ಆಗೊಂದು ರೀತಿ ಮಾಡಿದರೆ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ನಲ್ಲಿ ಅದು ಬಿದ್ದು ಹೋಗುತ್ತದೆ ಎಂದ ಅವರು ನಮ್ಮ ಸಂವಿಧಾನದಲ್ಲಿ 5 ವರ್ಷಕ್ಕೊಮ್ಮೆ ಚುನಾವಣೆ ನಡೆಯುವಂತೆ ಬರೆದಿದ್ದಾರೆ. ಈ ನೀತಿ, ನಿಯಮ ಸುಭದ್ರ ದೇಶಕ್ಕೂ ಕಾರಣವಾಗಿದೆ ಎಂದು ಅವರು ವಿವಿಧ ದೇಶಗಳ ಆಡಳಿತ ವ್ಯವಸ್ಥೆ ಉದಾಹರಿಸುವ ಮೂಲಕ ತಿಳಿಸಿದರು.
ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ಇಡೀ ವಿಶ್ವದಲ್ಲೇ ಮಹಾನ್ ಚೇತನ, ಶ್ರೇಷ್ಠ ಸಂಸದೀಯ ಪಟು ಡಾ.ಅಂಬೇಡ್ಕರ್, ಎಲ್ಲಾ ಕ್ಷೇತ್ರದಲ್ಲೂ ಮಹಿಳೆಯರಿಗೆ ಪ್ರಾತಿನಿಧ್ಯವನ್ನು ಅಂಬೇಡ್ಕರ್ ಸಂವಿಧಾನದಲ್ಲಿ ನೀಡಿದ್ದಾರೆ ಎಂದರು.
ಅಂಬೇಡ್ಕರ್ ಅವರು ಅರಿಯದ ವಿಚಾರವಿಲ್ಲ, ಬರೆಯದ ವಿಷಯವಿಲ್ಲ. ಅಷ್ಟು ವಿಸ್ತತ ರೂಪದ ಬರವಣಿಗೆ ಅಂಬೇಡ್ಕರ್ ಅವರಲ್ಲಿತ್ತು. ಇಂತಹ ಸಾಧನೆ ಅಂಬೇಡ್ಕರ್ ಅವರಿಗೆ ಮಾತ್ರ ಸಾಧ್ಯವಾಗಿದೆ ಎಂದು ಹೇಳಿದರು.
ಅಂಬೇಡ್ಕರ್ ಚಿಂತನೆಯನ್ನು ನಾವೆಲ್ಲೂ ಅರಿತು ಮೈಗೂಡಿಸಿಕೊಳ್ಳಬೇಕು. ಕೇವಲ ಅಂಬೇಡ್ಕರ್ ಅವರ ಹೆಸರನ್ನು ಹೇಳಿದರೆ ಸಾಲದು, ಅವರ ಚಿಂತನೆಗಳನ್ನು ನಾವೆಲ್ಲೂ ಅಳವಡಿಸಿಕೊಂಡಾಗ ಮಾತ್ರ ಅವರಿಗೆ ನಾವು ನೀಡುವ ನಿಜವಾದ ಗೌರವವಾಗಿದೆ ಎಂದರು.
ಅಂಬೇಡ್ಕರ್ ಬಗ್ಗೆ ಮತ್ತು ಅವರ ಚಿಂತನೆಗಳ ಬಗ್ಗೆ ಹೆಚ್ಚು ಚರ್ಚೆ ಮಾಡುತ್ತಲೇ ಇರಬೇಕು. ಆಗ ಮಾತ್ರ ಮುಂದಿನ ಪೀಳಿಗೆಗೂ ಅವರ ಬಗ್ಗೆ ತಿಳಿಸುವಂತಹ ಕಾರ್ಯವಾಗಲಿದೆ. ಇದರಿಂದ ನಮ್ಮ ಜ್ಞಾನವೂ ವಿಸ್ತರಿಸುತ್ತಾ ಹೋಗುತ್ತೆ ಎಂದ ಅವರು ಅಂಬೇಡ್ಕರ್ ಅವರ ಜ್ಞಾನವನ್ನು ಸಂವಿಧಾನ ಸಾಕ್ಷೀಕರಿಸುತ್ತದೆ ಎಂದರು.
ಭಾರತದ ಸಂವಿಧಾನ ವಿಶ್ವದಲ್ಲೇ ಶ್ರೇಷ್ಠವಾದುದು, ಇಂತಹ ಮಹತ್ವವಾದ ಸಂವಿಧಾನವನ್ನು ಅಂಬೇಡ್ಕರ್ ನಮ್ಮ ದೇಶಕ್ಕೆ ನೀಡಿದ್ದಾರೆ. ಅವರನ್ನು ಸದಾ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಉಪ ವಿಭಾಗಾಧಿಕಾರಿ ಹೋಟೆಲ್ ಶಿವಪ್ಪ ಇತರರು ಇದ್ದರು.
Comments are closed.