ಗುಬ್ಬಿ: ಜಾತಿ ವ್ಯಾಮೋಹದಲ್ಲಿ ಸಚಿವ ಮಾಧುಸ್ವಾಮಿಯಿಂದಲೆ ನನಗೆ ಟಿಕೆಟ್ ಮಿಸ್ಸಾಗಿದೆ ಎಂದು ಜೆಡಿಎಸ್ ಮುಖಂಡ ಜಿ.ಎನ್.ಬೆಟ್ಟಸ್ವಾಮಿ ಆಪಾದಿಸಿದರು.
ಗುಬ್ಬಿವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಗರಾಜು ನಾಮಪತ್ರ ಸಲ್ಲಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂಸದ ಜಿ.ಎಸ್.ಬಸವರಾಜು ನನ್ನ ಪರ ಎರಡು ಬಾರಿ ಸಹಕಾರ ಮಾಡಿದ್ದರು, ಈ ಬಾರಿಯೂ ಸಹಾಯ ಮಾಡಿದರು. ಆದರೆ ಮಾಧುಸ್ವಾಮಿ ನನ್ನ ವಿರುದ್ಧ ನನ್ನನ್ನು ಬಿಜೆಪಿಯಲ್ಲಿ ಸೋಲಿಸಿದ ವ್ಯಕ್ತಿಗೆ ಟಿಕೆಟ್ ಕೊಡಿಸುವ ಮೂಲಕ ಜಾತಿ ಪ್ರೇಮ ಮೆರೆದಿದ್ದಾರೆ. ಆದರೆ ಈಗಲೂ ಸಹ ವೀರಶೈವ ಸಮುದಾಯ ನನ್ನ ಜೊತೆಯಲ್ಲಿ ಸ್ವಾಭಿಮಾನದಿಂದ ಇದ್ದಾರೆ. ಜೆಡಿಎಸ್ ಪಕ್ಷಕ್ಕೆ ನಾನು ಆಗಮಿಸಿದ್ದು ಕುದ್ದು ಕುಮಾರಸ್ವಾಮಿ ಅವರೇ ನನ್ನ ಜೊತೆಯಲ್ಲಿ ನೇರವಾಗಿ ಮಾತನಾಡಿ ಪಕ್ಷಕ್ಕೆ ಬರಮಾಡಿಕೊಂಡಿದ್ದು ನಾನು ಯಾವುದೇ ಷರತ್ತು ಇಲ್ಲದೆ ಬಿ.ಎಸ್.ನಾಗರಾಜು ಗೆಲ್ಲಿಸುವುದು ನನ್ನ ಗುರಿಯಾಗಿದೆ. ನನಗೆ ಬಿಜೆಪಿಯ ಹಾಗೂ ಕಾಂಗ್ರೆಸ್ ನ ಇಬ್ಬರು ಅಭ್ಯರ್ಥಿಗಳು ಕೂಡ ಶತ್ರುಗಳೆ, ಅವರನ್ನು ಸೋಲಿಸುವ ವರೆಗೂ ನಾನು ಮಲಗುವುದಿಲ್ಲ ಎಂದು ಶಪಥ ಮಾಡಿದರು.
ಕಾಂಗ್ರೆಸ್ ಟಿಕೆಟ್ ವಂಚಿತ ಹೊನ್ನಗಿರಿ ಗೌಡ ಮಾತನಾಡಿ, ಕಾಂಗ್ರೆಸ್ ಪಕ್ಷ ಗುಬ್ಬಿಯಲ್ಲಿ ಸೋಲುವುದಕ್ಕೆ ಕಾರಣವೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿ ಬಾರಿಯೂ ತಂತ್ರಗಾರಿಕೆ ಮಾಡುವ ಮೂಲಕ ಇಲ್ಲಿನ ಶಾಸಕ ಕಾಂಗ್ರೆಸ್ ಪಕ್ಷ ಸೋಲಿಸಿದ್ದಾರೆ. ಇದಕ್ಕೆ ಕೈವಾಡವೇ ಕಾಂಗ್ರೆಸ್ ಪಕ್ಷದ ಹಲವು ಮುಖಂಡರು ಎಂದರು.
ಪ್ರತಿ ಬಾರಿಯೂ ಗೆಲ್ಲುತ್ತಿರುವ ಶಾಸಕ ಶ್ರೀನಿವಾಸ್ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಅವರ ಹಿಂಬಾಲಕರಿಗೆ ಒಂದಷ್ಟು ಕೆಲಸ ಮಾಡಿಕೊಟ್ಟಿರುವುದು ಬಿಟ್ಟರೆ ತಾಲೂಕಿನ ಅಭಿವೃದ್ಧಿ ಮಾಡುವುದರಲ್ಲಿ ಶೂನ್ಯರಾಗಿದ್ದಾರೆ. ಈ ಬಾರಿ ಮೊದಲ ಸ್ಥಾನದಲ್ಲಿ ನಾಗರಾಜು, ಎರಡನೇ ಸ್ಥಾನದಲ್ಲಿ ದಿಲೀಪ್ ಕುಮಾರ್, ಮೂರನೇ ಸಾಲಿನಲ್ಲಿ ಮಾಜಿ ಶಾಸಕ ಶ್ರೀನಿವಾಸ ನಿಲ್ಲುವುದು ಶತಸಿದ್ಧ, ಚುನಾವಣೆ ಮುಗಿಯುವವರೆಗೂ ನಾವೆಲ್ಲರೂ ಒಟ್ಟಿಗೆ ಇದ್ದು ಅವರನ್ನು ಸೋಲಿಸುವುದೆ ನಮ್ಮ ಗುರಿ ಎಂದು ತಿಳಿಸಿದರು.
ಜೆಡಿಎಸ್ ಅಭ್ಯರ್ಥಿ ಬಿ.ಎಸ್.ನಾಗರಾಜು ಮಾತನಾಡಿ, ಎರಡು ರಾಷ್ಟ್ರೀಯ ಪಕ್ಷದ ನಾಯಕರಾದ ಬೆಟ್ಟಸ್ವಾಮಿ, ಹೊನ್ನಗಿರಿ ಗೌಡ ಬಂದಿರುವುದು ನಮ್ಮ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ. ಗುಬ್ಬಿ ಜೆಡಿಎಸ್ ಭದ್ರಕೋಟೆ ಎಂಬುದನ್ನು ಮತ್ತೊಮ್ಮೆ ಉಳಿಸಿಕೊಳ್ಳುತ್ತೇವೆ. ಈ ಎರಡು ರಾಷ್ಟ್ರೀಯ ಪಕ್ಷಗಳನ್ನು ಮತದಾರರು ದೂರ ಬಿಡುತ್ತಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಅಧ್ಯಕ್ಷ ಚಿಕ್ಕ ವೀರಪ್ಪ, ಮುಖಂಡರಾದ ಕಳ್ಳಿಪಾಳ್ಯ ಲೋಕೇಶ್, ಮುಖಂಡ ನರಸಿಂಹಯ್ಯ, ಪೂಜಾರಿ ಎರಪ್ಪ, ಸಿದ್ದಗಂಗಮ್ಮ ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಹಾಜರಿದ್ದರು.
ಇದಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಿ ನೇರವಾಗಿ ಬಿಜೆಪಿ ಮುಖಂಡರಾಗಿದ್ದ ಜಿ.ಎನ್.ಬೆಟ್ಟಸ್ವಾಮಿ ಅವರ ಮನೆಗೆ ತೆರಳಿ ಜೆಡಿಎಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಪಕ್ಷಕ್ಕೆ ಆಹ್ವಾನ ನೀಡಿದರು. ಕಾಂಗ್ರೆಸ್ ಮುಖಂಡ ಹೊನ್ನಗಿರಿ ಗೌಡ, ನರಸಿಂಹಯ್ಯ, ಪೂಜಾರಿ ಎರಪ್ಪ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಈ ಬಾರಿ ಜೆಡಿಎಸ್ ಪಕ್ಷ ಗೆಲ್ಲಿಸುವಂತೆ ಮನವಿ ಮಾಡಿದರು.
Comments are closed.