ಕುಣಿಗಲ್: ಸೋಮವಾರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಹಾಲಿ ಶಾಸಕ ಡಾ.ರಂಗನಾಥ್, ಪತ್ನಿ ಸುಮಾ ರಂಗನಾಥ ಪಕ್ಷೇತರ ಅಭ್ಯರ್ಥಿಯಾಗಿ, ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಡಿ.ಕೃಷ್ಣಕುಮಾರ್, ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿ ಗೌಡ ನಾಮಪತ್ರ ಸಲ್ಲಿಸಿದರು.
ಶಾಸಕ ಡಾ.ರಂಗನಾಥ ಬೆಳಗ್ಗೆಯೆ ಮನೆ ದೇವರಾದ ಅಲ್ಕೆರೆ ಗುಡ್ಡದರಂಗನಾಥ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಅಪಾರ ಬೆಂಬಲಿಗರೊಂದಿಗೆ ಪಟ್ಟಣದ ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿವರೆಗೂ ಮೆರವಣಿಗೆಯಲ್ಲಿ ಆಗಮಿಸಿದರು. ಮಾರ್ಗ ಮಧ್ಯೆ ಬರುವ ಗ್ರಾಮ ದೇವತೆ ದೇವಾಲಯ, ಹಜರತ್ ಹಕೀಂಶಾ ವಲಿ ದರ್ಗಾದಲ್ಲೂ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ, ವಕೀಲ ಚಂದ್ರೇಗೌಡರೊಂದಿಗೆ ನಾಮಪತ್ರ ಸಲ್ಲಿಸಿದರು, ನಂತರ ಮಾತನಾಡಿ ಎರಡನೇ ಬಾರಿಗೆ ಶಾಸಕನಾಗಿ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದೇನೆ. ಜನರು ನಾನು ಸಲ್ಲಿಸಿರುವ ಸೇವೆಯ ಪರಿಗಣಿಸಿ ಆಯ್ಕೆ ಮಾಡುವ ಭರವಸೆ ಇದೆ, ಈಗಾಗಲೆ ಒಳ್ಳೆ ಪ್ರತಿಕ್ರಿಯೆ ಬರುತ್ತಿದ್ದು ಕ್ಷೇತ್ರದಲ್ಲಿ ಸಮಗ್ರ ನೀರಾವರಿ ಅನುಷ್ಠಾನ ಹಾಗೂ ಅಭಿವೃದ್ಧಿ ನಿಟ್ಟಿನಲ್ಲಿ ಜನರು ಈ ಬಾರಿ ಆಯ್ಕೆ ಮಾಡುವಂತೆ ಮನವಿ ಮಾಡಿದರು. ಶಾಸಕ ಡಾ.ರಂಗನಾಥ್ ನಾಮಪತ್ರ ಸಲ್ಲಿಸಿದ ನಂತರ ಪತ್ನಿ ಸುಮಾ ರಂಗನಾಥ್ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು ಪುರಸಭೆ ಉಪಾಧ್ಯಕ್ಷೆ ಶಬನಾ ತಬಸ್ಸುಮ್, ಸದಸ್ಯೆ ಜಯಲಕ್ಷ್ಮೀ, ನಾಗೇಂದ್ರ ಇತರರು ಜೊತೆಗಿದ್ದರು.
ಬಿಜೆಪಿ ಪಕ್ಷದ ವತಿಯಿಂದ ಅಭ್ಯರ್ಥಿ ಡಿ.ಕೃಷ್ಣಕುಮಾರ್ ಬೆಳಗಿನಿಂದಲೆ ವಿವಿಧ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ಪತ್ನಿ ವಿಜಯಲಕ್ಷ್ಮೀ, ಪುತ್ರ ದರ್ಶನಗೌಡ, ಮಂಡಲ ಅಧ್ಯಕ್ಷ ಬಲರಾಮ್ ಜೊತೆಯಲ್ಲಿ ನಾಮಪತ್ರ ಸಲ್ಲಿಸಿದರು. ತಾಲೂಕು ಉಸ್ತುವಾರಿ ಹರಿಯಾಣ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಶರ್ಮ ಇತರರು ಜೊತೆಗಿದ್ದರು. ನಾಮಪತ್ರ ಸಲ್ಲಿಸಿ ಮಾತನಾಡಿದ ಡಿ.ಕೃಷ್ಣಕುಮಾರ್, ತಾಲೂಕು ಬಿಜೆಪಿಯಲ್ಲಿ ಯಾವುದೇ ಭಿನ್ನಮತ, ಬಂಡಾಯ ಇಲ್ಲ, ಕಾಂಗ್ರೆಸ್ ನವರು ಸೋಲಿನ ಹತಾಶೆಯಿಂದ ವದಂತಿ ಹಬ್ಬಿಸುತ್ತಿದ್ದಾರೆ. ಜನರು ವದಂತಿಗೆ ಕಿವಿಗೊಡದೆ ಈ ಬಾರಿ ನಮ್ಮನ್ನು ಗೆಲ್ಲಿಸುತ್ತಾರೆ. ಮೂರು ಬಾರಿ ಸೋತರು ಕ್ಷೇತ್ರದ ಜನರ ಮಧ್ಯದಲ್ಲಿದ್ದುಕೊಂಡು ಜನಪರ ಸಮಸ್ಯೆಗೆ ಸ್ಪಂದಿಸುತ್ತಿರುವುದನ್ನು ಗಮನಿಸಿರುವ ಮತದಾರರು ಮೂರು ಬಾರಿ ಸೋತಿರುವ ಅನುಕಂಪದ ಹಿನ್ನೆಲೆಯಲ್ಲಿ ತಮಗೆ ಆಶೀರ್ವಾದಿಸುತ್ತಾರೆ. ಮಾಜಿ ಸಂಸದ ಎಸ್.ಪಿ.ಮುದ್ದಹನುಮೇ ಗೌಡ 20 ರಿಂದ ಪ್ರಚಾರಕ್ಕೆ ಬರಲಿದ್ದು, ಮತ್ತೊರ್ವ ಮುಖಂಡ ರಾಜೇಶ್ಗೌಡ ಸಹ ಈ ಬಾರಿ ತಮಗೆ ಬೆಂಬಲಿಸುತ್ತಾರೆ. ಈ ನಿಟ್ಟಿನಲ್ಲಿ ವರಿಷ್ಠರು ಚರ್ಚೆ ಮಾಡಿದ್ದಾರೆ. ಈಬಾರಿ ಕ್ಷೇತ್ರದಲ್ಲಿ ಕಮಲ ಅರಳುವುದು ಸತ್ಯ ಎಂದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸಂತೋಶ್, ಯುವ ಬಿಜೆಪಿ ಅಧ್ಯಕ್ಷ ಧನುಶ್ ಗಂಗಾಟ್ಕಾರ್, ಪುರಸಭೆ ಸದಸ್ಯ ಕೃಷ್ಣ, ಮುಖಂಡರಾದ ತಿಮ್ಮೇಗೌಡ, ವೆಂಕಟೇಶ್ ಇತರರು ಇದ್ದರು.
ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿ ಗೌಡ, ಅಪಾರ ಬೆಂಬಲಿಗರೊಂದಿಗೆ ಪಟ್ಟಣದ ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಸಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿ, ತಾವು ತಮ್ಮ ಅವಧಿಯಲ್ಲಿ ದಕ್ಷ ಆಡಳಿತ, ಸ್ವಚ್ಛ ಹಸ್ತದಿಂದ ಕೆಲಸ ಮಾಡಿದ ಪರಿಣಾಮ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗಿತ್ತು. ಈಗಿನ ಶಾಸಕರು ಅಧಿಕಾರಿಗಳಿಗೆ ಹಣ ನೀಡುವಂತೆ ಒತ್ತಡ ಹಾಕಿದ್ದರಿಂದ ಅಧಿಕಾರಿಗಳು ಜನರಿಂದ ವಸೂಲು ಮಾಡಿ ನೀಡಿದ್ದರಿಂದ ಭ್ರಷ್ಟಾಚಾರ ತಾಲೂಕಿನಲ್ಲಿ ಎಲ್ಲೆ ಮೀರುವಂತಾಗಿದೆ, ಯಾವುದೇ ಅಭಿವೃದ್ಧಿ ಕೆಲಸ ಮಾಡದ ಶಾಸಕರು ಕುಕ್ಕರ್, ಪಿಂಗಾಣಿ ಬಟ್ಟಲು, ಸೀರೆ ವಿತರಣೆ ಮಾಡಿಕೊಂಡು ಓಡಾಡಿದ್ದೆ ಸಾಧನೆಯಾಗಿದೆ. ತಾವು ಯಾವುದೋ ಪಕ್ಷದವರನ್ನು ಸೋಲಿಸಲು ಅಭ್ಯರ್ಥಿಯಾಗುತ್ತಿಲ್ಲ, ಕ್ಷೇತ್ರದ ಅಭಿವೃದ್ಧಿ ನಿಟ್ಟಿನಲ್ಲಿ ತಮ್ಮದೆ ಅದ ದೂರದೃಷ್ಟಿಯಿಂದ ಹಲವು ಯೋಜನೆ ಹಾಕಿಕೊಂಡಿದ್ದು ಯೋಜನೆಗಳ ಅನುಷ್ಠಾನಕ್ಕಾಗಿ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದು, ತಾಲೂಕಿನ ಸಮಗ್ರ ಅಭಿವೃದ್ಧಿ, ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ನಮ್ಮನ್ನು ಬೆಂಬಲಿಸಿ ಆಯ್ಕೆ ಮಾಡುವಂತೆ ಮನವಿ ಮಾಡಿದರು, ಮುಖಂಡರಾದ ಶಿವಣ್ಣಗೌಡ, ಮುನ್ನ, ಶ್ರೀನಿವಾಸಗೌಡ, ಜಗದೀಶ್ ಇತರರು ಇದ್ದರು.
Comments are closed.