ತುಮಕೂರು: ಬಿಜೆಪಿ ಟಿಕೆಟ್ ವಂಚಿತರಾದ ಮಾಜಿ ಸಚಿವ ಸೊಗಡು ಶಿವಣ್ಣ ಅವರು ಹಿತೈಷಿಗಳು ಮತ್ತು ಅಭಿಮಾನಿಗಳ ಒತ್ತಾಸೆಯಿಂತೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚುನಾವಣೆಯಲ್ಲಿ ಹಣ ಹಂಚಿ ಮತ ಖರೀದಿ ಮಾಡಲು ಸ್ಪರ್ಧಿಸುತ್ತಿಲ್ಲ. ಮತ ಭಿಕ್ಷೆ ಕೇಳಲು ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಸೊಗಡು ಶಿವಣ್ಣ ತಿಳಿಸಿದರು.
ಏ.19 ರಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸುತ್ತೇನೆ. ಏ.20 ರಂದು ಅಪಾರ ಅಭಿಮಾನಿಗಳು, ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು.
ಮೂಗುಬಟ್ಟು ಹಂಚಿ ರಾಜಕಾರಣ ಮಾಡುತ್ತಿದ್ದಾರೆ. ಮನೆಯ ಬಾಗಿಲನ್ನೇ ತೆಗೆಯದೆ ಇರುವವರ ಮಧ್ಯೆ ಜನರ ಸೇವೆ ಮಾಡಲು, ಅನೇಕ ಸಮುದಾಯಗಳ ಮುಖಂಡರ ಒತ್ತಾಯದ ಮೇರೆಗೆ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದರು.
ಯಡಿಯೂರಪ್ಪ ಮಾತಿಗೆ ಕಟ್ಟುಬಿದ್ದು ತ್ಯಾಗ ಮಾಡಿದ ನಮಗೆ ಅಧಿಕಾರ ಕೊಡಲು ಜ್ಯೋತಿಗಣೇಶ್ ಯಾರು? ಅಪ್ಪ ಮಕ್ಕಳು ಬೇನಾಮಿ ಆಸ್ತಿ ಮಾಡ್ಕೊಂಡು ನನ್ನ ಸಾಲದ ಬಗ್ಗೆ ಮಾತನಾಡುತ್ತಿದ್ದಾರೆ. ನನಗೆ ಯಾವ ಆಸ್ತಿಯೂ ಬಂದಿಲ್ಲ, ಕಷ್ಟ ಪಟ್ಟು ದುಡಿದು ಸಾಲ ತೀರಿಸುತ್ತೇನೆ ಎಂದರು.
ದಲಿತ ಮುಖಂಡ ನರಸಿಂಹಯ್ಯ ಮಾತನಾಡಿ, ಶಾಸಕ ಜ್ಯೋತಿಗಣೇಶ್ ಕಾರ್ಪೋರೇಟ್ ಸಂಸ್ಕೃತಿ ಹೊಂದಿದ್ದಾರೆ. ಈ ಹಿಂದೆ ಇದ್ದ ಕಾಂಗ್ರೆಸ್ ಶಾಸಕರು ವರ್ಗಾವಣೆ ದಂಧೆಯಲ್ಲಿ ಮುಳುಗಿದ್ದರು, ಇವರಿಂಮದ ನಗರದ ಜನರಿಗೆ ಅನ್ಯಾಯವಾಗಿದೆ ಎಂದರು.
ಸೊಗಡು ಶಿವಣ್ಣ ಅಧಿಕಾರದಲ್ಲಿ ಇದ್ದಾಗ ನಗರದಲ್ಲಿ ರೌಡಿಸಂ, ಗ್ಯಾಬ್ಲಿಂಗ್, ಮೀಟರ್ ಬಡ್ಡಿಗೆ ಕಡಿವಾಣ ಹಾಕಿದ್ದರು, ಇವತ್ತು ಎಲ್ಲ ದಲಿತ ಕೇರಿಗಳ ಮತಗಳು ಮಾರಾಟಕ್ಕೆ ಇವೆ ಎನ್ನುವಂತೆ ಬಿಂಬಿಸಿದ್ದಾರೆ. ಹಣ ಇದ್ದರೆ ಚುನಾವಣೆ ಗೆಲ್ಲಬಹುದು ಎಂದು ಹೊರಟಿರುವವರಿಗೆ ಪಾಠ ಕಲಿಸಲು ಜೋಳಿಗೆ ಹಾಕಿದ್ದೇವೆ ಎಂದರು.
ಕನ್ನಡ ಪರ ಸಂಘಟನೆಯ ಮುಖಂಡ ಧನಿಯಕುಮಾರ್ ಮಾತನಾಡಿ, ಪಾಲಿಕೆಯಲ್ಲಿ ಖಾತೆ ಮಾಡಲು 50 ಸಾವಿರ ಲಂಚ ನೀಡಬೇಕಾದ ಪರಿಸ್ಥಿತಿ ಇದೆ, ಜನರನ್ನು ಲೂಟಿ ಮಾಡುತ್ತಿದ್ದಾರೆ. ಇಂತಹ ಕೆಟ್ಟ ಪರಿಸ್ಥಿತಿ ದೂರ ಮಾಡಲು ಶಿವಣ್ಣ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ನರಸಿಂಹಯ್ಯ, ಜಯಸಿಂಹ ರಾವ್, ಪಂಚಾಕ್ಷರಯ್ಯ, ನವೀನ್ ರಾಜಣ್ಣ, ಶಬೀರ್ ಅಹಮದ್, ಜಯಪ್ರಕಾಶ್, ಅನಿಲ್ ಕುಮಾರ್, ಹರೀಶ್ ಇತರರಿದ್ದರು.
Comments are closed.