ಕುಣಿಗಲ್: ಲಿಂಗಾಯಿತ ವೀರಶೈವ ಧರ್ಮವನ್ನು ಒಡೆದು ಆಳಲು ಹೊರಟಿದ್ದು ಇದೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಈಗ ಚುನಾವಣೆಯಲ್ಲಿ ಇದೆ ಅಸ್ತ್ರ ಬಳಸಿ ಲಿಂಗಾಯಿತರನ್ನು ಒಡೆದು ಆಳಲು ಹೊರಟಿದ್ದು ಇದು ಫಲ ನೀಡುವುದಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಗುರುವಾರ ಕುಣಿಗಲ್ ಬಿಜೆಪಿ ಅಭ್ಯರ್ಥಿ ಡಿ.ಕೃಷ್ಣಕುಮಾರ್ ನಾಮಪತ್ರ ಸಲ್ಲಿಕೆಗೆ ಅಪಾರ ಬೆಂಬಲಿಗರೊಂದಿಗೆ ಪಾಲ್ಗೊಂಡು ಮಾತನಾಡಿ, ಈ ಬಾರಿ ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರ ನಡೆಸುತ್ತದೆ. ಕಾಂಗ್ರೆಸ್ ಪಕ್ಷದ ಲಿಂಗಾಯಿತ ಅಸ್ತ್ರ ಸೇರಿದಂತೆ ಯಾವುದೇ ಅಸ್ತ್ರಗಳು ಕೆಲಸ ಮಾಡುವುದಿಲ್ಲ. ಡಬಲ್ ಇಂಜಿನ್ ಸರ್ಕಾರದ ಸಾಧನೆಗೆ ಈ ಬಾರಿ ರಾಜ್ಯದ ಮತದಾರರು ಆಶೀರ್ವಾದ ಮಾಡಲಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಗ್ಯಾಂಗ್ ಸ್ಟರ್ ಗಳೆ ಸ್ಟಾರ್ ಕ್ಯಾಂಪೈನರ್, ಉತ್ತರ ಪ್ರದೇಶದ ಗೂಂಡ ಅತೀಕ್ ಅಹಮದ್ ನನ್ನು ಹೊಗಳುತ್ತಿದ್ದ ಇಮ್ರಾನ್ ಈಗ ಕಾಂಗ್ರೆಸ್ ಸ್ಟಾರ್ ಪ್ರಚಾರಕರು, ಆದರೆ ಲಕ್ಷ್ಮಣ ಸವದಿಯಾಗಲಿ, ಜಗದೀಶ್ ಶೆಟ್ಟರ್ ಇಲ್ಲ. ಜಗದೀಶ್ ಶೆಟ್ಟರ್ ಬಿಜೆಪಿಯಲ್ಲಿದ್ದರೆ ಸ್ಟಾರ್ ಕ್ಯಾಂಪೈನರ್, ಆದರೆ ಈಗ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಕಾಂಗ್ರೆಸ್ ನವರು ಜಾತಿ ಆಧಾರದ ಮೇಲೆ ಲಿಂಗಾಯಿತರನ್ನು ಒಡೆದು ಅಧಿಕಾರ ಗಿಟ್ಟಿಸಿಕೊಳ್ಳಲು ಹೊರಟಿದ್ದು ಅದು ಸಾಧ್ಯವಾಗದು ಎಂದರು.
ಇನ್ನು ಲಿಂಗಾಯಿತ ಸಿಎಂ ವಿಷಯವಿದ್ದು ಕಾಂಗ್ರೆಸ್ ನಲ್ಲಿ ಸಾಕಷ್ಟು ಮಂದಿ ಲಿಂಗಾಯಿತ ಸಿಎಂ ಅಭ್ಯರ್ಥಿಗಳಿದ್ದು ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿಗೆ ಅವರು ಮಾಡುತ್ತಾರೆಯೆ, ಕುಣಿಗಲ್‌ಲ್ಲಿ ಮೂರು ಬಾರಿ ಡಿ.ಕೃಷ್ಣಕುಮಾರ್ ಸೋತರೂ ಕ್ಷೇತ್ರದ ಜನರ ಮಧ್ಯದಲ್ಲಿದ್ದು ಜನರ ಸಮಸ್ಯೆಗೆ ಧ್ವನಿಯಾಗಿದ್ದಾರೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಸಾಧನೆಯನ್ನು ಜನತೆಗೆ ತಲುಪಿಸಲು ಶ್ರಮಿಸಿದ್ದು ಈ ಬಾರಿ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವ ಮೂಲಕ ಪ್ರಧಾನಿ ಮೋದಿಯವರ ಕೈ ಬಲಪಡಿಸಬೇಕು. ಸ್ಥಳೀಯವಾಗಿ ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಎಲ್ಲವನ್ನು ಬಗೆಹರಿಸುತ್ತೇವೆ ಎಂದರು.
ಅಭ್ಯರ್ಥಿ ಡಿ.ಕೃಷ್ಣಕುಮಾರ್ ಮಾತನಾಡಿ, ಕಳೆದ ಬಾರಿ ಅತ್ಯಲ್ಪ ಮತಗಳ ಅಂತರದಿಂದ ಸೋಲಿಸಿದ್ದು, ಈ ಬಾರಿ ಕ್ಷೇತ್ರದ ಜನರು ನನ್ನನ್ನು ಗೆಲ್ಲಿಸಲಿದ್ದಾರೆ. ಸೋತರೂ ಎದೆಗುಂದದೆ ತಾಲೂಕಿನ ಜನರ ಮಧ್ಯದಲ್ಲಿದ್ದುದ ಜನರ ಸಮಸ್ಯೆಗೆ ಸ್ಪಂದಿಸಿದ್ದೇನೆ. ಮೂರು ಬಾರಿ ಶಿಕ್ಷೆ ನೀಡುವ ಮತದಾರರು ಈಬಾರಿ ರಕ್ಷಿಸುವ ಭರವಸೆ ಇದೆ. ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲಿದ್ದು ಇಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ವೇಗ ಸಿಗಲಿದೆ. ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಕಾರ್ಯಕರ್ತರು ಈ ಬಾರಿ ಮತ್ತಷ್ಟು ಹೆಚ್ಚಿನದಾಗಿ ಪಕ್ಷದ ಯೋಜನೆಗಳನ್ನು ಮತದಾರರಿಗೆ ತಲುಪಿಸಿ ಕುಣಿಗಲ್ ಕ್ಷೇತ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಹಕರಿಸಬೇಕೆಂದರು.
ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿ ವರೆಗೂ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸಿದರು, ಕಾರ್ಯಕರ್ತರು ಮೆರವಣಿಗೆ ಸಾಗುವ ಹಾದಿಯುದ್ದಕ್ಕೆ ಬಿಸಿಲಿನ ಝಳ ನಿಯಂತ್ರಿಸಲು ಎರಡು ಟ್ಯಾಂಕರ್ ಮೂಲಕ ನೀರು ಚೆಲ್ಲುವ ಮೂಲಕ ಕಾರ್ಯಕರ್ತರಿಗೆ ಬಿಸಿಲಿನ ಝಳ ತಟ್ಟದಂತೆ ವ್ಯವಸ್ಥೆ ಮಾಡಲಾಗಿತ್ತಲ್ಲದೆ ನೀರಿನ ಬಾಟಲಿ, ಮಜ್ಜಿಗೆ ವಿತರಿಸಲಾಯಿತು. ಮಾಜಿ ಸಂಸದ ಎಸ್.ಪಿ.ಮುದ್ದಹನುಮೇ ಗೌಡ ಪ್ರಚಾರದಿಂದ ದೂರ ಉಳಿದಿದ್ದರು. ಪತ್ನಿ ವಿಜಯಲಕ್ಷ್ಮೀ, ಪುತ್ರ ದರ್ಶನಗೌಡ, ತಾಲೂಕು ಉಸ್ತುವಾರಿ ವೈ.ಎಚ್.ಹುಚ್ಚಯ್ಯ, ನಾಗೇಂದ್ರ ಶರ್ಮ, ಎಂಎಲ್ಸಿ ವೈ.ಎ.ನಾರಾಯಣ ಸ್ವಾಮಿ, ಮುಖಂಡ ಎಂ.ಡಿ.ಲಕ್ಷ್ಮೀನಾರಾಯಣ, ತಾಲೂಕು ಅಧ್ಯಕ್ಷ ಬಲರಾಮ, ಪ್ರಮುಖರಾದ ಸಂತೋಶ್, ಕೃಷ್ಣ, ಧನುಶ್, ಅಮರ್, ದೇವರಾಜ, ದಿಲೀಪ, ಗೋಪಿ, ದಿನೇಶ, ಕೋಟೆ ನಾಗಣ್ಣ, ನಾಗರಾಜು, ಮರಿಯಣ್ಣ, ಆನಂದ್ ಕುಮಾರ್, ರೇವಣ್ಣ ಇತರರು ಇದ್ದರು.
Comments are closed.