ಚುನಾವಣೆಯಲ್ಲಿ ಕೋಮುವಾದಿಗಳಿಗೆ ಪಾಠ ಕಲಿಸಿ

ದ್ವೇಷ ರಾಜಕಾರಣದಿಂದ ಪ್ರಜಾಪ್ರಭುತ್ವಕ್ಕೆ ಆತಂಕ: ಸಿದ್ದರಾಮಯ್ಯ

85

Get real time updates directly on you device, subscribe now.


ತುಮಕೂರು: ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದ ಕರ್ನಾಟಕವನ್ನು ಬಿಜೆಪಿ ಪಕ್ಷ ಕೋಮು ಮತ್ತು ದ್ವೇಷ ರಾಜಕಾರಣದ ಪ್ರಯೋಗ ಶಾಲೆಯಾಗಿ ಮಾಡಿಕೊಂಡಿದ್ದು, ಇದರಿಂದ ಕರುನಾಡಿನ ಜನರನ್ನು ಹೊರತರುವ ನಿಟ್ಟಿನಲ್ಲಿ ಸಮಾನ ಮನಸ್ಕರ ಒಕ್ಕೂಟ, ಸ್ಥಳೀಯ ಜಾಗೃತ ಮನಸ್ಸುಗಳ ಮೂಲಕ ಮತದಾರರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಸಮಾನ ಮನಸ್ಕರ ಒಕ್ಕೂಟ ಡಾ.ಎಸ್.ಜಿ.ಸಿದ್ದರಾಮಯ್ಯ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋಮುವಾದ ಮತ್ತು ದ್ವೇಷ ರಾಜಕಾರಣದಿಂದ ಇಂದು ಪ್ರಜಾಪ್ರಭುತ್ವ ಆತಂಕದಲ್ಲಿದೆ, ಸಂವಿಧಾನವನ್ನು ಹಾಳು ಮಾಡುವ ಪ್ರಯತ್ನಗಳು ವ್ಯವಸ್ಥಿತವಾಗಿ ನಡೆಯುತ್ತಿದ್ದು, ಇದರ ವಿರುದ್ಧ ಸಾಹಿತಿಗಳು, ಕಲಾವಿದರು, ವೈದ್ಯರು, ವಕೀಲರು, ಯುವಜನರು, ವಿದ್ಯಾರ್ಥಿಗಳು, ರೈತ-ದಲಿತ ಮಹಿಳಾ ಮತದಾರರ ಸಮನ್ವಯದಿಂದ ದ್ವೇಷ ಭಾಷಣಗಳಿಗೆ ನಮ್ಮ ಮತ ಇಲ್ಲ, ಹಣ, ಹೆಂಡ, ಸೀರೆ, ಪಂಚೆ ಹಂಚುವವರಿಗೆ ನಮ್ಮ ಮತ ಇಲ್ಲ. ಪ್ರೀತಿಗೆ, ಕರುಣೆಗೆ, ಸೌಹಾರ್ದತೆಗೆ ನಮ್ಮ ಮತ ಎಂಬ ಘೋಷವಾಕ್ಯದೊಂದಿಗೆ ರಾಜ್ಯದಾದ್ಯಂತ ಪ್ರವಾಸ ಮಾಡಿ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಸರ್ವ ಜನಾಂಗದ ಶಾಂತಿಯ ತೋಟ ಎನಿಸಿಕೊಂಡಿರುವ ಕರ್ನಾಟಕದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ದ್ವೇಷದಿಂದ ಯುವ ಜನರ ರಾಜಕೀಯ ಪ್ರೇರಿತ ಕಗ್ಗೊಲೆಗಳು ನಡೆಯುತ್ತಿವೆ. ಎಲ್ಲರಿಗೂ ತಿಳಿ ಹೇಳಬೇಕಾದ ಶಿಕ್ಷಣ ಕ್ಷೇತ್ರ ಒಂದು ಸಮುದಾಯದ ಕೈಗೆ ಸಿಕ್ಕು, ಸುಳ್ಳು ಇತಿಹಾಸ ಸೃಷ್ಟಿಯಾಗುತ್ತಿದೆ. ಇದರಿಂದ ಕರ್ನಾಟಕದ ಭವಿಷ್ಯ ಏನಾಗಲಿದೆ ಎಂಬ ಆಂತಕ ನಮ್ಮೆಲ್ಲರಲ್ಲಿಯೂ ಮನೆ ಮಾಡಿದೆ. ಸಾಮಾಜಿಕ ಹೊಣೆಗಾರಿಕೆ ಉಳ್ಳವರಾದ ನಾವುಗಳು ಈ ಸಮಯದಲ್ಲಿ ಮೌನ ವಹಿಸುವುದು ಸರಿಯಲ್ಲ ಎಂಬ ಕಾರಣಕ್ಕೆ ಈ ಸಣ್ಣ ಪ್ರಯತ್ನಕ್ಕೆ ಮುಂದಾಗಿದ್ದೇವೆ. ಭಾರತೀಯರಿಗೆ ಸರ್ವಶ್ರೇಷ್ಠ ಧರ್ಮವಾಗಿರುವ ಸಂವಿಧಾನ, ಪ್ರಜಾ ಪ್ರಭುತ್ವ ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಮುಂದಾಗಿದ್ದು, ಹಲವಾರು ಜನರು ಕೈಜೋಡಿಸಿದ್ದಾರೆ ಎಂದು ಡಾ.ಎಸ್.ಜಿ.ಸಿದ್ದರಾಮಯ್ಯ ತಿಳಿಸಿದರು.

ಹಿರಿಯ ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ, ಕಳೆದ ಎರಡು ತಿಂಗಳಿನಿಂದ ನಾವೆಲ್ಲರೂ ಹಲವಾರು ಸಭೆ ಮಾಡಿ, ಪ್ರವಾಸ ಮಾಡಿ ಜನರಿಗೆ ಮಾಧ್ಯಮಗಳ ಮೂಲಕ ರಾಜ್ಯದಲ್ಲಿ ಕೋಮುವಾದ, ದ್ವೇಷ ರಾಜಕಾರಣಕ್ಕೆ ವಿರುದ್ಧವಾಗಿ ಮತ ಚಲಾಯಿಸುವಂತೆ ಮನವಿ ಮಾಡುತ್ತಾ ಬಂದಿದ್ದೇವೆ. ಕೋಮುವಾದ, ದ್ವೇಷದಿಂದ ನಮ್ಮ ನೆರೆ ಹೊರೆಯ ರಾಷ್ಟ್ರಗಳು ಏನಾಗಿವೆ ಎಂಬುದನ್ನು ನಾವೆಲ್ಲರೂ ಒಮ್ಮೆ ಅವಲೋಕಿಸಬೇಕಿದೆ. ಭಾರತವನ್ನು ಧರ್ಮಾಧಾರಿತ ದೇಶವನ್ನಾಗಿ ರೂಪಿಸಲು ಹೊರಟಿರುವ ಡಬಲ್ ಇಂಜಿನ್ ಸರಕಾರದ ಹುನ್ನಾರವನ್ನು ತಡೆಯುವುದೇ ಇದರ ಹಿಂದಿರುವ ಉದ್ದೇಶ ಎಂದರು.

ಮಹಿಳಾ ಹೋರಾಟಗಾರತಿ ಬಾ.ಹ.ರಮಾಕುಮಾರಿ ಮಾತನಾಡಿ, ಬಿಜೆಪಿ ಕಳೆದ 9 ವರ್ಷಗಳಿಂದ ಸುಳ್ಳು ಹೇಳಿಕೊಂಡೇ ಬರುತ್ತಿದೆ. ಮಹಿಳಾ ರಕ್ಷಣೆ, ಮಹಿಳಾ ಮೀಸಲಾತಿ ಬಗ್ಗೆ ದೊಡ್ಡ ಜಾಹಿರಾತು ನೀಡುತ್ತಿರುವ ಬಿಜೆಪಿ, ಆ ನಿಟ್ಟಿನಲ್ಲಿ ಹೆಜ್ಜೆ ಇರಿಸಿದೆಯೇ ಎಂದು ನೋಡಿದರೆ ಅದೆಲ್ಲಾ ಸುಳ್ಳು ಎಂಬುದು ಗೊತ್ತಾಗುತ್ತದೆ. ಇದಕ್ಕೆ ಗುಜರಾತ್ ನ ಬಲ್ಕೀಸ್ ಭಾನು ಪ್ರಕರಣವೇ ಸಾಕ್ಷಿಯಾಗಿದೆ. ಜನಸಾಮಾನ್ಯರು ಇದನ್ನು ಪ್ರಶ್ನಿಸುವಂತಾಗಬೇಕು ಎಂದರು.
ಸಾಹಿತಿ ಡಾ.ಎಲ್.ಎನ್.ಮುಕುಂದರಾಜ್ ಮಾತನಾಡಿ, ಮತದಾರರ ಜಾಗೃತಿ ಎಂಬುದು ನಿರಂತರವಾಗಿ ನಡೆಯುವ ಕಾರ್ಯಕ್ರಮವಾಗಿದೆ. ಆದರೆ ಜನರಿಗೆ ಸತ್ಯ ಹೇಳಲು ಹೊರಟಿರುವ ನಮ್ಮಂತಹ ಸಾಹಿತಿಗಳು ಅನುಭವಿಸುತ್ತಿರುವ ನೋವು ಸಾಕಷ್ಟಿವೆ. ಬಸವಪ್ರಜ್ಞೆ, ಕುವೆಂಪು ಪ್ರಜ್ಞೆ ಎಂಬುದು ಜನರ ಮನಸ್ಸಿನಲ್ಲಿದ್ದರೂ ಪಠ್ಯ ಪುಸ್ತಕದಿಂದ ಕಾಣೆಯಾಗಿವೆ. ಲೇಖಕರು ಸಹ ಭಯದ ವಾತಾವರಣದಲ್ಲಿ ಬದುಕುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಹೊರಬರಲು ಇರುವ ಏಕೈಕ ಮಾರ್ಗವೆಂದರೆ ಕೋಮುವಾದ ಮತ್ತು ದ್ವೇಷ ಮಾಡುವವರಿಗೆ ಜನತೆ ಮತ ನೀಡಬಾರದು ಎಂದರು.

ಲೇಖಕ ಶ್ರೀಪಾದಭಟ್ ಮಾತನಾಡಿ, ಜಾಗೃತ ಮತದಾರರ ವೇದಿಕೆಯ ಸಂಚಾಲಕ ಡಾ.ಹೆಚ್.ವಿ.ರಂಗಸ್ವಾಮಿ, ಡ್ಯಾಗೇರಹಳ್ಳಿ ವಿರೂಪಾಕ್ಷ, ನಟರಾಜಪ್ಪ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!