ಪಕ್ಷೇತರರ ಸ್ಪರ್ಧೆ ಪಾರ್ಟಿ ಅಭ್ಯರ್ಥಿಗಳಿಗೆ ತಲೆ ಬಿಸಿ

ತುಮಕೂರು ನಗರದಲ್ಲಿ ಅಭ್ಯರ್ಥಿಗಳ ಅಬ್ಬರದ ಪ್ರಚಾರ

128

Get real time updates directly on you device, subscribe now.


ತುಮಕೂರು: ಬಿಸಿಲಿನ ತಾಪ ಏರುತ್ತಿರುವ ರೀತಿ ಚುನಾವಣೆ ಕಾವು ಕೂಡ ಹೆಚ್ಚಾಗ್ತಾ ಇದೆ. ಮತದಾನಕ್ಕೆ ಕೇವಲ 18 ದಿನವಷ್ಟೆ ಬಾಕಿ ಉಳಿದಿದೆ. ಇದರ ಮಧ್ಯೆ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳು ಮತದಾರರ ಸೆಳೆಯಲು ನಾನಾ ಕಸರತ್ತು ಆರಂಭಿಸಿದ್ದಾರೆ. ಗೆದ್ದೇ ಗೆಲ್ಲಬೇಕು ಎಂದು ತೀರ್ಮಾನಿಸಿ ಮನೆ ಮನೆ ಪ್ರಚಾರ ನಡೆಸುತ್ತಿದ್ದಾರೆ.

ತುಮಕೂರು ನಗರ ಕ್ಷೇತ್ರದ ಲ್ಲೂ ಪ್ರಮುಖ ಮೂರು ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರ ಅಭ್ಯರ್ಥಿಗಳು ಹಗಲು ರಾತ್ರಿ ಎನ್ನದೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಜ್ಯೋತಿಗಣೇಶ್: ಬಿಜೆಪಿ ಅಭ್ಯರ್ಥಿಯಾಗಿರುವ ಜ್ಯೋತಿಗಣೇಶ್ ಹಾಲಿ ಶಾಸಕ, ಟಿಕೆಟ್ ಕೈ ತಪ್ಪುವ ಆತಂಕದ ನಡುವೆ ಟಿಕೆಟ್ ಪಡಡಯುವಲ್ಲಿ ಯಶಸ್ವಿಯಾಗಿ ನಾಮಪತ್ರ ಸಲ್ಲಿಸಿ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಆಗಿರುವ ಕಾಮಗಾರಿಗಳನ್ನು ಮುಂದಿಟ್ಟುಕೊಂಡು ಜನರ ಬಳಿಗೆ ಹೋಗುತ್ತಿದ್ದಾರೆ. ಮತ್ತೊಂದು ಅವಕಾಶ ಕೊಡಿ ಮಾದರಿ ತುಮಕೂರು ಮಾಡುವೆ ಎಂಬ ಭರವಸೆಯನ್ನು ನೀಡುತ್ತಿದ್ದಾರೆ. ಡಬಲ್ ಇಂಜಿನ್ ಸರ್ಕಾರದ ಸಾಧನೆ ಬಗ್ಗೆಯು ತಿಳಿಸಿ ಮತಯಾಚನೆ ಮಾಡುತ್ತಿದ್ದಾರೆ.

ಗೋವಿಂದರಾಜು: ಜೆಡಿಎಸ್ ಅಭ್ಯರ್ಥಿಯಾಗಿರುವ ಗೋವಿಂದರಾಜು ಮೂರನೆ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಮತದಾರರಿಗೆ ಸೀರೆ, ಹಣ ಕೊಟ್ಟು ದೇವಸ್ಥಾನ ಗಳಿಗೆ ಕರೆದುಕೊಂಡು ಹೋಗಿ ಆಣೆ ಪ್ರಮಾಣ ಮಾಡಿಸಿಕೊಂಡ ಅಪವಾದ ಹಾಗೂ ಮಹಿಳೆಯೊಬ್ಬರ ಜೊತೆ ನಡೆಸಿದ ಅಸಭ್ಯ ಮಾತುಕತೆ ಆಡಿಯೊ ವೈರಲ್, ಸ್ವಪಕ್ಷದವರಿಂದಲೇ ಅಸಮಾಧಾನಕ್ಕೆ ಗುರಿಯಾಗಿರುವ ಗೋವಿಂದರಾಜುಗೆ ಈ ಚುನಾವಣೆ ನಿಜಕ್ಕೂ ಅಗ್ನಿ ಪರೀಕ್ಷೆ, ಎರಡು ಬಾರಿ ಸೋಲಿಸಿದ್ದೀರಿ, ಇದೊಂದು ಬಾರಿ ನನ್ನ ಗೆಲ್ಲಿಸಿ. ಇದು ನನ್ನ ಅಳಿವು ಉಳಿವಿನ ಪ್ರಶ್ನೆ ಎಂದು ಮತದಾರರ ಬಳಿಗೆ ಹೋಗುತ್ತಿದ್ದಾರೆ.

ಇಕ್ಬಾಲ್ ಅಹಮದ್: ಕಾಂಗ್ರೆಸ್ ನ ನಿಷ್ಠಾವಂತ ಕಾರ್ಯಕರ್ತ, ತನಗೆ ಟಿಕೆಟ್ ಸಿಗುತ್ತೆ ಎಂದು ನಿರೀಕ್ಷೆಯನ್ನೇ ಮಾಡದ ಇಕ್ಬಾಲ್ ಅಹಮದ್ ಅಪ್ಪಟ ಕಾಂಗ್ರೆಸ್ ಕಟ್ಟಾಳು, ಆದರೆ ಈ ನಾಯಕನ ಹೆಸರು ತುಮಕೂರಿನ ಬಹುತೇಕ ಮಂದಿಗೆ ತಿಳಿದಿಲ್ಲ. ಆದರೂ ಸಾಮಾನ್ಯ ಕಾರ್ಯಕರ್ತನಿಗೆ ಪಕ್ಷ ಟಿಕೆಟ್ ನೀಡಿದೆ. ನಿಮ್ಮ ಸೇವೆ ಮಾಡಲು ನನಗೊಂದು ಚಾನ್ಸ್ ನೀಡಿ, ಕೊರೊನಾ ಸಮುದಲ್ಲಿ ಜನರ ಸಹಾಯಕ್ಕೆ ನಿಂತಿದ್ದೆ. ಬಡವರಿಗೆ ಆಹಾರ ಪದಾರ್ಥಗಳನ್ನು ನೀಡಿದೆ ಎಂಬ ತೃಪ್ತಿ ವ್ಯಕ್ತಪಡಿಸುವ ಇಕ್ಬಾಲ್ ಅಹಮದ್ ಗೆ ಕಾಂಗ್ರೆಸ್ ಟಿಕೆಟ್ ವಂಚಿತವಾಗಿರುವ ಮಾಜಿ ಶಾಸಕ ರಫಿಕ್ ಅಹಮದ್ ಕುಟುಂಬ ಮಗ್ಗುಲ ಮುಳ್ಳಾಗಿ ಪರಿಣಮಿಸಿದರು ಅಚ್ಚರಿ ಇಲ್ಲ.

ಸೊಗಡು ಶಿವಣ್ಣ: ಬಿಜೆಪಿ ಟಿಕೆಟ್ ಸಿಕ್ಕೇ ಸಿಗುತ್ತೆ ಎಂಬ ನಿರೀಕ್ಷೆ ಯಲ್ಲಿದ್ದ ಮಾಜಿ ಸಚಿವ ಸೊಗಡು ಶಿವಣ್ಣರಿಗೆ ಬಿಜೆಪಿ ಮಣೆ ಹಾಕಲಿಲ್ಲ. ತುಮಕೂರಲ್ಲಿ ಬಿಜೆಪಿ ಬೆಳವಣಿಗೆಗೆ ಕಾರಣರಾದ ಸೊಗಡು ಶಿವಣ್ಣರನ್ನು ಪಕ್ಷ ಅದ್ಯಾಕೊ ಅಂಗಳದಾಚೆ ಇಟ್ಟು ಬಿಟ್ಟಿದೆ. ಇದರಿಂದ ಬೇಸತ್ತ ಶಿವಣ್ಣ ಬಿಜೆಪಿಗೆ ಗುಡ್ ಬೈ ಹೇಳಿ ಸ್ವತಂತ್ರ ಅಭ್ಯರ್ಥಿ ಯಾಗಿ ಅಖಾಡಕ್ಕೆ ಇಳಿದಿದ್ದಾರೆ. ಜನರಿಗೆ ನಾನು ದುಡ್ಡು ಹಂಚಲ್ಲ, ನಾನೇ ಅವರ ಬಳಿ ದುಡ್ಡು ಮತ್ತು ಮತ ಕೇಳುತ್ತೇನೆ ಎಂದು ಹೆಗಲಿಗೆ ಜೋಳಿಗೆ ಹಾಕಿಕೊಂಡು ಮತದಾರರ ಮನೆ ಬಾಗಿಲಿಗೆ ಹೋಗಿ ಮತ ಭಿಕ್ಷೆ ಕೇಳುತ್ತಿದ್ದಾರೆ. ಜೋಳಿಗೆ ಜಂಗಮನ ಸ್ಪರ್ಧೆ ಬಿಜೆಪಿ ಅಭ್ಯರ್ಥಿ ಗೆ ದೊಡ್ಡ ಹೊಡೆತ ಕೊಡಲಿದೆ ಎನ್ನಲಾಗ್ತಿದೆ.

ನರಸೇಗೌಡ: ಜೆಡಿಎಸ್ ವರಿಷ್ಠ ದೇವೇಗೌಡರ ಮಾನಸ ಪುತ್ರ ಎಂದೇ ಕರೆಯಲ್ಪಡುವ ಮುಖಂಡ ನರಸೇಗೌಡ ಸ್ವತಂತ್ರ ಅಭ್ಯರ್ಥಿ ಯಾಗಿ ಕಣಕ್ಕೆ ಇಳಿದಿದ್ದಾರೆ. ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಇವರಿಗೆ ಪಕ್ಷ ಸಿಹಿ ಸುದ್ದಿ ನೀಡಲಿಲ್ಲ. ಇದರಿಂದ ಬೇಸತ್ತು ಇಂಡಿಪೆಂಡೆಂಟ್ ಆಗಿ ಮತದಾರರ ಬಳಿಗೆ ಹೋಗುತ್ತಿದ್ದಾರೆ. ಜೆಡಿಎಸ್ ಅಭ್ಯರ್ಥಿ ಯ ನಡೆಯನ್ನೇ ಇಷ್ಟಪಡದ ನರಸೇಗೌಡ ಜೆಡಿಎಸ್ ಮತಬ್ಯಾಂಕ್ ಛಿದ್ರ ಮಾಡುತ್ತಾರಾ ಕಾದು ನೋಡಬೇಕು.
ಇಷ್ಟೇ ಅಲ್ಲದೆ ಆಪ್, ಕೆಆರ್ಎಸ್, ಕಮ್ಯುನ್ಟ್ ಸೇರಿದಂತೆ ವಿವಿಧ ಪಕ್ಷಗಳ ಅಭ್ಯರ್ಥಿ ಗಳು ಸ್ಪರ್ಧೆಯಲ್ಲಿ ಇದ್ದಾರೆ, ಅಂತಿಮವಾಗಿ ಯಾರಿಗೆ ಮತದಾರನ ಮುದ್ರೆ ಬೀಳುತ್ತೆ ಎಂಬುದು ಮೇ 13 ರಂದು ಗೊತ್ತಾಗುತ್ತೆ.

Get real time updates directly on you device, subscribe now.

Comments are closed.

error: Content is protected !!