ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಕುಮಾರಣ್ಣನನ್ನು ಅಧಿಕಾರಕ್ಕೆ ತನ್ನಿ

102

Get real time updates directly on you device, subscribe now.


ಶಿರಾ: ಭದ್ರಾ ಮೇಲ್ದಂಡೆ ಯೋಜನೆಗೆ 2006 ರಲ್ಲಿ ಮೊದಲು ರೂಪುರೇಷೆಗಳನ್ನು ರೂಪಿಸಿದ್ದೇ ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ. ಅದರ ಫಲವಾಗಿ ಇಂದು ಶಿರಾ, ಮಧುಗಿರಿ ಹಾಗೂ ಪಾವಗಡ ತಾಲೂಕಿಗೆ ಭದ್ರೆ ಹರಿಯಲಿದೆ. ಕುಮಾರಸ್ವಾಮಿ ಈಗಾಗಲೇ ಎರಡು ಸಲ ಮುಖ್ಯಮಂತ್ರಿಯಾಗಿದ್ದಾರೆ. ಸಂಪೂರ್ಣ ಬಹುಮತದೊಂದಿಗೆ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು ಅದಕ್ಕಾಗಿ ಜೆಡಿಎಸ್ ಪಕ್ಷವನ್ನು ಗೆಲ್ಲಿಸಿ ಎಂದು ಮಾಜಿ ಪ್ರಧಾನಿ ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡ ಕಾರ್ಯಕರ್ತರಿಗೆ ಕರೆ ನೀಡಿದರು.

ಸೋಮವಾರದಂದು ಶಿರಾ ನಗರದ ಜೆಡಿಎಸ್ ಕಚೇರಿ ಪಕ್ಕದ ಮೈದಾನದಲ್ಲಿ ಏರ್ಪಡಿಸಿದ್ದ ಭಾರಿ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. ನಮ್ಮ ಪಕ್ಷ ಯಾವತ್ತೂ ಮುಸ್ಲಿಮರನ್ನು ಕಡೆಗಣಿಸಿಲ್ಲ. ಈದ್ಗಾ ಮೈದಾನದ ಸಮಸ್ಯೆಯನ್ನು ನಾನು ಬಗೆಹರಿಸುವೆ, ಹೆಣ್ಣು ಮಕ್ಕಳಿಗೆ ಮೀಸಲಾತಿ ಕಲ್ಪಿಸಲು ರಾಜ್ಯಸಭೆಯಲ್ಲಿ ಈಗಾಗಲೇ ಬಿಲ್ ಪಾಸಾಗಿದ್ದು, ಲೋಕಸಭೆಯಲ್ಲಿ ಮಂಡಿಸಲಾಗುವುದು, ಅದಕ್ಕಾಗಿ ನಮ್ಮ ಪಕ್ಷ ಹೋರಾಟ ಮಾಡಲಿದೆ. ನಾಯಕ, ಗೊಲ್ಲ, ಕುರುಬ, ಪರಿಶಿಷ್ಟ ಜಾತಿ, ಪಂಗಡ ಹೀಗೆ ಎಲ್ಲಾ ವರ್ಗಗಳಿಗೂ ವಿಶೇಷ ಸ್ಥಾನಮಾನ ಒದಗಿಸಲಾಗಿದೆ ಎಂದರು.

60 ವರ್ಷ ಮೇಲ್ಪಟ್ಟವರಿಗೆ ಐದು ಸಾವಿರ ವೃದ್ಧಾಪ್ಯ ಮಾಶಾಸನ, ಗರ್ಭಿಣಿ ಸ್ತ್ರೀಯರಿಗೆ 6000 ಹಾಗೂ ರೈತರಿಗೆ ಸಾಲ ಮನ್ನಾ ಹೀಗೆ ಹಲವಾರು ಯೋಜನೆಗಳನ್ನು ಕುಮಾರಸ್ವಾಮಿ ಜಾರಿಗೆ ತರಲಿದ್ದಾರೆ ಎಂದರು.
ಜೆಡಿಎಸ್ ರಾಜ್ಯಧ್ಯಕ್ಷ ಸಿ.ಎಂ. ಇಬ್ರಾಹಿಂ ಮಾತನಾಡಿ ರೈತ ತನ್ನ ಮಕ್ಕಳಿಗೋಸ್ಕರ ಅನ್ನ ಬೆಳೆಯುವುದಿಲ್ಲ ಇಡೀ ದೇಶದ ಜನರ ಹಸಿವನ್ನು ನೀಗಿಸಲು ಬೆಳೆಯುತ್ತಾನೆ. ಅಂತಹ ರೈತನ ಬೆಂಬಲಕ್ಕೆ ನಿಂತವರು ನಮ್ಮ ಮಾಜಿ ಪ್ರಧಾನಿ ದೇವೇಗೌಡ. ಪ್ರಧಾನಿಯಾಗಿ ಡೆಲ್ಲಿಗೆ ಹೋದರೂ ಕೂಡ ಕರ್ನಾಟಕದ ಸಂಸ್ಕೃತಿ, ಉಡುಗೆ ತೊಡುಗೆಗಳನ್ನು ಅವರು ಬದಲಾಯಿಸದೆ ರೈತನ ಮಗನಾಗಿ ಉಳಿದರು. ಆದುದರಿಂದಲೇ ಪಂಜಾಬ್ ನಲ್ಲಿ ಬೆಳೆಯುತ್ತಿದ್ದ ಒಂದು ಭತ್ತದ ತಳಿಗೆ ಇವರ ಹೆಸರನ್ನು ಇಟ್ಟಿದ್ದಾರೆ. ದಲಿತ, ಗೊಲ್ಲ ಹಾಗೂ ಹಿಂದುಳಿದ ವರ್ಗದವರು ಕೂಡ ತಾಲೂಕು ಪಂಚಾಯತ್ ಜಿಲ್ಲಾ ಪಂಚಾಯತ್ ನಗರಸಭೆ ಪುರಸಭೆಗಳಲ್ಲಿ ಅಧ್ಯಕ್ಷ ಸ್ಥಾನ ಅಲಂಕರಿಸಬಹುದು ಎಂಬ ಕಾನೂನು ಮಾಡಿದ್ದೆ ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗ, ಆ ಕಾರಣದಿಂದಲೇ ಈಗಲೂ ಹಿಂದುಳಿದ ವರ್ಗದವರು ಜೆಡಿಎಸ್ ಪಕ್ಷವನ್ನು ಬೆಂಬಲಿಸುತ್ತಾರೆ ಎಂದರು.

ಮಾಜಿ ಶಾಸಕ ಸುರೇಶ್ ಬಾಬು ಮಾತನಾಡಿ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ 24 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡುವಾಗ ದಾಖಲೆ ಸಂಗ್ರಹಿಸಲಿಲ್ಲ. ಆದರೆ ಈಗ ಕಾಂಗ್ರೆಸ್ನವರು ಗ್ಯಾರಂಟಿ ಕಾರ್ಡ್ ನೀಡುವಾಗ ಬ್ಯಾಂಕ್ ಖಾತೆ, ಆಧಾರ್ ನಂಬರ್ ಕೇಳುತ್ತಿದ್ದಾರೆ. ಕಾಂಗ್ರೆಸ್ ನವರ ಪೊಳ್ಳು ಭರವಸೆಗೆ ಯಾರೂ ಬಲಿಯಾಗಬೇಡಿ. ಬಡವರ ಕಣ್ಣೀರನ್ನು ಒರೆಸಲು ಜೆಡಿಎಸ್ ಪಕ್ಷದಿಂದ ಮಾತ್ರ ಸಾಧ್ಯ. ಸುಮಾರು 35 ವರ್ಷಗಳ ಕಾಲ ಜೆಡಿಎಸ್ ನಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ ಆರ್ ಉಗ್ರೇಶ್ ಅವರಿಗೆ ಟಿಕೆಟ್ ನೀಡಿ ಒಬ್ಬ ಸಾಮಾನ್ಯ ಕಾರ್ಯಕರ್ತನಿಗೂ ಉನ್ನತ ಅಧಿಕಾರ ಪಕ್ಷ ನೀಡುತ್ತದೆ ಎಂಬುದನ್ನು ಸಾಬೀತುಪಡಿಸಿದೆ. ರಾಷ್ಟ್ರೀಯ ಪಕ್ಷಗಳ ಸುಳ್ಳು ಭರವಸೆಗಳಿಗೆ ಬಲಿಯಾಗದೆ ಪ್ರಾದೇಶಿಕ ಜೆಡಿಎಸ್ ಪಕ್ಷವನ್ನು ಗೆಲ್ಲಿಸಿ ಎಂದು ತಿಳಿಸಿದರು.

ಜೆಡಿಎಸ್ ಅಭ್ಯರ್ಥಿ ಅರ್. ಉಗೇಶ್ ಮಾತನಾಡಿ ಉಪ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಗದಕ್ಕೆ ನೋವನ್ನು ಅನುಭವಿಸಿದ್ದ ದೇವೇಗೌಡರು, ರಾಜ್ಯದಲ್ಲಿ ಮೊಟ್ಟಮೊದಲು ಶಿರಾ ಕ್ಷೇತ್ರದಲ್ಲೇ ಪ್ರಥಮವಾಗಿ ಶ್ರೀ ಪಟ್ಟನಾಯಕನಹಳ್ಳಿ ಕ್ಷೇತ್ರದ ಓಂಕಾರೇಶ್ವರ ಸ್ವಾಮಿಯ ಪೂಜೆ ಹಾಗೂ ನಂಜಾವದೂತ ಸ್ವಾಮಿಗಳ ಆಶೀರ್ವಾದದೊಂದಿಗೆ ಪ್ರಚಾರ ಸಭೆಯನ್ನು ಆರಂಭಿಸಿದ್ದಾರೆ. ಜೆಡಿಎಸ್ ಶಿರಾದಲ್ಲಿ ಗೆಲ್ಲುವುದರ ಮೂಲಕ ದೇವೇಗೌಡರ ಕನಸನ್ನು ನನಸು ಮಾಡಲಾಗುವುದು ಎಂದರು.

Get real time updates directly on you device, subscribe now.

Comments are closed.

error: Content is protected !!