ತುಮಕೂರು: ಮೇ 10 ರಂದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆ- 2023ರ ಅಂಗವಾಗಿ ನಮ್ಮ ನಡೆ ಮತದಾರರಿಗೆ ಮತಗಟ್ಟೆ ತೋರಿಸುವ ಕಡೆ ಎಂಬ ವಿನೂತನ ಬೂತ್ ವಾಕ್ ಕಾರ್ಯಕ್ರಮ ಏ.25, 26 ಹಾಗೂ ಮೇ 5, 6 ರಂದು ಒಟ್ಟಾರೆ 4 ದಿನ ಆಯೋಜಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯ ವೀಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣೆ- 2023ರ ಸಂಬಂಧ ನಡೆದ 11 ವಿಧಾನಸಭಾ ಕ್ಷೇತ್ರಗಳ ಚುನಾವಣಾ ಅಧಿಕಾರಿಗಳೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಬಿಎಲ್ಒ, ಕಂದಾಯ ಲೆಕ್ಕಾಧಿಕಾರಿ ಮತ್ತು ಪಿಡಿಓಗಳನ್ನೊಳಗೊಂಡ ಹಾಗೂ ಪಟ್ಟಣ ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಿಎಲ್ಓ, ಬಿಲ್ ಕಲೆಕ್ಟರ್ ಮತ್ತು ಹೆಲ್ತ್ ಇನ್ಸ್ಪೆಕ್ಟರ್ಗಳನ್ನೊಳಗೊಂಡ ತಂಡಗಳು ಪ್ರತಿಯೊಂದು ಮತಗಟ್ಟೆ ವ್ಯಾಪ್ತಿಯಲ್ಲಿ ಒಂದು ನಿರ್ಧಿಷ್ಟ ಸ್ಥಳ ಗುರುತಿಸಿ ಆ ಸ್ಥಳಕ್ಕೆ ಮತಗಟ್ಟೆ ವ್ಯಾಪ್ತಿಯ ಎಲ್ಲಾ ಮತದಾರರು ಬರುವಂತೆ ಪ್ರೇರೇಪಿಸಿ ಆ ಸ್ಥಳದಿಂದ ಅವರನ್ನು ಮತಗಟ್ಟೆ ಕೇಂದ್ರಕ್ಕೆ ಕರೆತಂದು ಅವರಿಗೆ ಮತಗಟ್ಟೆ ಪರಿಚಯ ಮಾಡಿಕೊಡಬೇಕು ಹಾಗೂ ಮತದಾರರಿಗೆ ಅವರ ಪಾರ್ಟ್ ನಂಬರ್ ಹಾಗೂ ಸೀರಿಯಲ್ ನಂಬರ್ ಗಳನ್ನು ತಿಳಿಸಿ ಸಾಧ್ಯವಾದಲ್ಲಿ ವೋಟರ್ ಸ್ಲಿಪ್ ಗಳನ್ನು ವಿತರಿಸಬೇಕೆಂದು ಸೂಚಿಸಿದರು.
ನಂತರ ಚುನವಣಾ ಸಿದ್ದತೆ ಕುರಿತು ಮಾತನ್ನಾಡಿದ ಅವರು, ನಾಮಪತ್ರ ಹಿಂಪಡೆದು ಕೊಂಡವರ ಪಟ್ಟಿಯನ್ನು ನಮೂನೆ- 6 ರಲ್ಲಿ ತಯಾರಿಸಿ ಪ್ರಚುರಪಡಿಸಬೇಕು. ನಂತರ ಫಾರಂ-7ಎ ರಲ್ಲಿ ಅಂತಿಮವಾಗಿ ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ ತಯಾರಿಸಬೇಕು ಎಂದು ತಿಳಿಸಿದರು.
ಪೋಸ್ಟಲ್ ಬ್ಯಾಲೆಟ್ ಗಳನ್ನು ಭೂ ದಾಖಲೆಗಳ ಉಪ ನಿರ್ದೇಶಕರ ಸಹಕಾರದಿಂದ ಮುದ್ರಣ ಮಾಡಿ, ಹಂಚಿಕೆ ಕಾರ್ಯ ಮಾಡತಕ್ಕದ್ದು, 24 ಗಂಟೆಗಳಲ್ಲಿ ಇಟಿಪಿಬಿಎಸ್ ಮತಪತ್ರಗಳನ್ನು ಅಪ್ ಲೋಡ್ ಮಾಡತಕ್ಕದ್ದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮತ್ತು ಸ್ವೀಪ್ ಅಧ್ಯಕ್ಷರಾದ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ಬಿಎಲ್ಓಗಳು ತಮ್ಮ ಮತಗಟ್ಟೆ ವ್ಯಾಪ್ತಿಯ ವಲಸೆ ಹೋದಂತಹ ಮತ್ತು ಗೈರು ಹಾಜರಿ ಮತದಾರರ ಪಟ್ಟಿ ಸಿದ್ಧಪಡಿಸಿ ಸದರಿ ಮತದಾರರು ತಪ್ಪದೆ ಮೇ 10 ರಂದು ತಮ್ಮ ವಿಧಾನಸಭಾ ಕ್ಷೇತ್ರಗಳ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡುವಂತೆ ದೂರವಾಣಿ ಕರೆ ಮತ್ತು ವಾಟ್ಸಪ್ ಮೂಲಕ ಪ್ರೇರೇಪಿಸುವುದು ಎಂದು ನಿರ್ದೇಶನ ನೀಡಿದರು.
ಅಂತೆಯೇ ಎಲ್ಲಾ ಮತಗಟ್ಟೆಗಳ ಬಳಿ ಮತಗಟ್ಟೆ ಅಧಿಕಾರಿಯ ಹೆಸರು, ಸಂಪರ್ಕ, ವಿಳಾಸ ಸೇರಿದಂತೆ ಬಿಎಲ್ಓಗಳ ಮಾಹಿತಿಯನ್ನು ಕಡ್ಡಾಯವಾಗಿ ಪೇಂಟಿಂಗ್ ಮಾಡಿಸಬೇಕು ಮತ್ತು ಮತಗಟ್ಟೆಗಳಿಗೆ ಹೊಂದಿಕೊಂಡಂತೆ ಪಕ್ಕದ ಕೊಠಡಿಗಳಲ್ಲಿ ಮತದಾರರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮತ್ತು ಕುಡಿಯುವ ನೀರನ್ನು ಒದಗಿಸಬೇಕು. ಮತಗಟ್ಟೆಗೆ ಹೊಂದಿಕೊಂಡಂತೆ ಕೊಠಡಿಗಳು ಲಭ್ಯವಿಲ್ಲದಿದ್ದಲ್ಲಿ ಶಾಮಿಯಾನ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ ಅವರು ಎಲ್ಲಾ ಚುನಾವಣಾಧಿಕಾರಿಗಳಿಗೆ ಚಿಹ್ನೆಗಳ ಹಂಚಿಕೆ ಕುರಿತು ವಿವರವಾದ ಮಾಹಿತಿ ನೀಡಿದರು.
ಪಾಲಿಕೆ ಆಯುಕ್ತ ದರ್ಶನ್, ಡಿಡಿಎಲ್ಆರ್ ಸುಜಯ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
Comments are closed.