ಗುಬ್ಬಿ: ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮಾತ್ರ ಅಬ್ಬರದಿಂದ ನಡೆಯುತ್ತಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರು ಪಕ್ಷದ ಅಭ್ಯರ್ಥಿಗಳು ಹಳ್ಳಿ ಹಳ್ಳಿಗಳನ್ನು ತಿರುಗಿ ಮತಯಾಚನೆ ಮಾಡುತ್ತಿರುವುದು ಒಂದು ಕಡೆಯಾದರೆ ಅವರ ಪತ್ನಿಯರು ಸಹ ಬಿಸಿಲು ಎನ್ನದೆ ಹಳ್ಳಿ ಹಳ್ಳಿಯ ಮನೆಗಳಿಗೆ ತಿರುಗಿ ಕೈ ಮುಗಿದು ನನ್ನ ಪತಿಗೆ ಮತ ನೀಡಿ ಎಂದು ಓಡಾಡುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಸ್.ಆರ್.ಶ್ರೀನಿವಾಸ್ ಪತ್ನಿ ಭಾರತಿ ಶ್ರೀನಿವಾಸ್ ಗೆ ಚುನಾವಣೆ ಏನು ಹೊಸದಲ್ಲ. ಈಗಾಗಲೇ ನಾಲ್ಕು ವಿಧಾನಸಭಾ ಚುನಾವಣೆ ನಡೆಸಿ ತನ್ನ ಪತಿ ಶ್ರೀನಿವಾಸ್ ಅವರನ್ನ ಗೆಲ್ಲಿಸಿ ಕೊಂಡಿದ್ದಾರೆ. ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ಹಳ್ಳಿಯ ಜನರಿಗೂ ಭಾರತಿ ಶ್ರೀನಿವಾಸ್ ಪರಿಚಯ, ಚುನಾವಣೆಯಲ್ಲಿ ಒಂದಷ್ಟು ಸ್ಟ್ರಾಟಜಿ ಮಾಡುವಂತಹ ಬುದ್ಧಿವಂತಿಕೆಯು ಇದೆ. ಪ್ರಚಾರದ ನಡುವೆ ಮುಖಂಡರ ಕಾರ್ಯಕರ್ತರ ಜೊತೆಯಲ್ಲಿ ನಿಂತು ಕೆಲಸ ಮಾಡುವ ಶಕ್ತಿಯೂ ಇದೆ.
ಇನ್ನೂ ಜೆಡಿಎಸ್ ಅಭ್ಯರ್ಥಿ ಬಿ.ಎಸ್.ನಾಗರಾಜು ಪತ್ನಿ ಗಾಯತ್ರಿ ನಾಗರಾಜು ಸಹ ಸುಮಾರು ಒಂದು ವರ್ಷದಿಂದ ಜೆಡಿಎಸ್ ಪಕ್ಷದ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ಪಂಚರತ್ನ ಯೋಜನೆ ಹಾಗೂ ಜೆಡಿಎಸ್ನ ಪ್ರಣಾಳಿಕೆ ಹಿಡಿದುಕೊಂಡು ಮನೆ ಮನೆಗೆ ತಿರುಗಿ ಪ್ರಚಾರ ಮಾಡುತ್ತಿರುವುದು ಕಂಡುಬರುತ್ತದೆ. ಗಾಯತ್ರಿ ದೇವಿ ನಾಗರಾಜು ಸಿ.ಎಸ್.ಪುರ ಜಿಲ್ಲಾ ಪಂಚಾಯಿತಿಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದು ಚುನಾವಣೆ ಮತ್ತು ರಾಜಕೀಯದ ಗಮಲು ತಿಳಿದಿದೆ. ಇವರು ಸಹ ತನ್ನ ಪತಿಯ ಗೆಲುವಿಗಾಗಿ ಹಗಲು ರಾತ್ರಿ ಎನ್ನದೆ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ.
ಇನ್ನು ಬಿಜೆಪಿ ಅಭ್ಯರ್ಥಿ ಎಸ್.ಡಿ.ದಿಲೀಪ್ ಕುಮಾರ್ ಪತ್ನಿ ಶಿಲ್ಪ ದಿಲೀಪ್ ಕುಮಾರ್ ಸಹ ಮನೆ ಮನೆಗೆ ತೆರಳಿ ತಮ್ಮ ಪತಿಯ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಅವರ ತಂದೆಯ ಕಾಲದಿಂದ ರಾಜಕೀಯದ ಒಂದಷ್ಟು ಅನುಭವ ಇವರಿಗಿದ್ದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಿಂತಿದ್ದ ಎಸ್.ಡಿ.ದಿಲೀಪ್ ಕುಮಾರ್ ಅವರ ಪರವಾಗಿ ಕಳೆದ ಬಾರಿಯೂ ಮತ ಯಾಚನೆ ಮಾಡಿದ್ದರು.
ಒಟ್ಟಾರೆಯಾಗಿ ಈ ಬಾರಿ ಶಾಸಕರನ್ನಾಗಿ ಮಾಡಲು ತಮ್ಮ ಪತ್ನಿಯರು ಹಗಲು ರಾತ್ರಿ, ಬಿಸಿಲು ಎನ್ನದೆ ದುಡಿಯುತ್ತಿರುವುದು ಕಂಡು ಬರುತ್ತಿದೆ.
Comments are closed.