ತುಮಕೂರು: ಕುಣಿಗಲ್ ತಾಲ್ಲೂಕು ಬಿಜೆಪಿಯಲ್ಲಿ ಉಂಟಾಗಿದ್ದ ಅಸಮಾಧಾನ ಅಂತ್ಯಗೊಂಡಿದೆ. ಟಿಕೆಟ್ ವಂಚಿತವಾಗಿದ್ದ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇ ಗೌಡರು ಅಧಿಕೃತ ಬಿಜೆಪಿ ಅಭ್ಯರ್ಥಿ ಡಿ.ಕೃಷ್ಣ ಕುಮಾರ್ ಪರ ಪ್ರಚಾರ ಮಾಡುವುದಾಗಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಧಾನಸಭೆಗೆ ಕುಣಿಗಲ್ ಟಿಕೆಟ್ ಆಕಾಂಕ್ಷಿಯಾಗಿದ್ದು ಸತ್ಯ, ಆದರೆ ಪಕ್ಷದ ತೀರ್ಮಾನಕ್ಕೆ ಬದ್ಧನಾಗಿ ನಾನು ನಾಮಪತ್ರ ಸಲ್ಲಿಸಲಿಲ್ಲ. ಕುಣಿಗಲ್ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡುವೆ ಎಂದು ತಿಳಿಸಿದರು.
ಬಿಜೆಪಿ ಪಕ್ಷ ವಿಶ್ವಮಟ್ಟದಲ್ಲಿ ತನ್ನದೆ ಸ್ಥಾನ ಹೊಂದಿದೆ. ಪಕ್ಷ ವಹಿಸುವ ಜವಾಬ್ದಾರಿ ನಿರ್ವಹಿಸುವೆ, ನಾನು ಪಕ್ಷದ ನಿಷ್ಠಾವಂತನಾಗಿ ನಮ್ಮ ಅಭ್ಯರ್ಥಿಗಳ ಪರ ಪ್ರಚಾರ ಮಾಡುವೆ, ಪಕ್ಷದ ಶಿಸ್ತಿನ ಸಿಪಾಯಿ ನಾನು, ಎಲ್ಲಾ ಕ್ಷೇತ್ರದಲ್ಲೂ ನಾನು ಪ್ರಚಾರಕ್ಕೆ ಹೋಗುವೆ. ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು ಎಂದರು.
ಕುಣಿಗಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ಕೃಷ್ಣಕುಮಾರ್ ಮಾತನಾಡಿ, ಕುಣಿಗಲ್ ತಾಲ್ಲೂಕಲ್ಲಿ ಎಸ್ಪಿಎಂ ದೊಡ್ಡ ಶಕ್ತಿ ಹೊಂದಿದ್ದಾರೆ. ಅವರ ಸಹಕಾರದಿಂದ ನಾನು ಜಯ ಗಳಿಸುವುದು ನಿಶ್ಚಿತ ಎಂದರು.
ಕುಣಿಗಲ್ ತಾಲ್ಲೂಕಿನಿಂದ ಕನಕಪುರದ ಕಾಂಗ್ರೆಸ್ ನವರನೊ ಓಡಿಸಬೇಕು. ಅವರಿಂದ ತಾಲ್ಲೂಕು ಹಾಳಾಗುತ್ತಿದೆ. ಈ ಬಗ್ಗೆ ಮತದಾರರಿಗೆ ಅರಿವಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್, ಸಂಸದ ಜಿ.ಎಸ್ .ಬಸವರಾಜು, ಎಂಎಲ್ಸಿ ಚಿದಾನಂದ್ ಗೌಡ, ಶರ್ಮ, ಸದಾಶಿವಯ್ಯ ಇತರರು ಇದ್ದರು.
Comments are closed.