ಕುಣಿಗಲ್: ಸೋಮವಾರ ನಾಮಪತ್ರ ಹಿಂಪಡೆಯಲು ಅಂತಿಮ ದಿನವಾದ್ದರಿಂದ ಬಂಡಾಯ ಬಿಜೆಪಿ ಅಭ್ಯರ್ಥಿಯನ್ನು ಕಣದಿಂದ ಹಿಂದೆ ಸರಿಯುವಂತೆ ಮಾಡಲು ಪಕ್ಷದ ವರಿಷ್ಠರೆ ಅಖಾಡಕ್ಕೆ ಇಳಿದು ಕೊನೆಗೂ ಯಶಸ್ವಿಯಾದ ಘಟನೆ ನಡೆಯಿತು.
ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ರಾಜೇಶ್ ಗೌಡ, ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರೂ ಬಿಜೆಪಿ ಬಂಡಾಯ ಅಭ್ಯರ್ಥಿ ಎಂದೆ ಬಿಂಬಿಸಲಾಗಿತ್ತು. ಶನಿವಾರ ರಾತ್ರಿಯಿಂದಲೆ ಪಕ್ಷದ ವರಿಷ್ಠರು ಅವರ ಮನ ಒಲಿಸುವ ಕೆಲಸಕ್ಕೆ ಮುಂದಾಗಿದ್ದು, ಸೋಮವಾರ ರಾಜ್ಯದ ಕೇಂದ್ರ ಕಚೇರಿಯಲ್ಲಿ ರಾಜ್ಯಾಧ್ಯಕ್ಷರು ಸೇರಿದಂತೆ ಇತರರು ಮನ ಒಲಿಸಿದ ನಂತರ ಪಟ್ಟಣದ ಗೃಹ ಕಚೇರಿಯಲ್ಲಿ ಬೆಂಬಲಿಗರೊಂದಿಗೆ ಸರಣಿ ಸಭೆ ನಡೆಸಿ, ಪಕ್ಷದ ಚುನಾವಣೆ ಉಸ್ತುವಾರಿ ಹರಿಯಾಣ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಶರ್ಮ, ರಾಜ್ಯದ ಉಸ್ತುವಾರಿ ಜಗದೀಶ್ ಉಪಾಧ್ಯಾಯ, ಜಿಲ್ಲಾ ಉಪಾಧ್ಯಕ್ಷ ಕೆ.ಕೆ.ರಮೇಶ್, ಪ್ರಬುದ್ದ ಕೋಷ್ಟದ ಜಿಲ್ಲಾ ಪ್ರಮುಖ ಎಚ್.ಎನ್.ನಟರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪಿಗೆ ಶ್ರೀಧರ್ ಅವರೊಂದಿಗೆ ಸಭೆ ನಡೆಸಿದರು.
ಈ ವೇಳೆ ಯಾವುದೇ ಕಾರಣಕ್ಕೂ ಕಣದಿಂದ ಹಿಂದೆ ಸರಿಯಬೇಡಿ ಎಂದು ಅಭಿಮಾನಿಗಳು ದುಂಬಾಲು ಬಿದ್ದರಲ್ಲದೆ, ರಾಜೇಶ್ ಗೌಡರ ಮನವೊಲಿಸಲು ಆಗಮಿಸಿದ್ದ ಪಕ್ಷದ ಪ್ರಮುಖರೊಂದಿಗೆ ವಾಗ್ವಾದ ನಡೆಸಿ ರಾಜೇಶ್ ಗೌಡರಿಗೆ ಟಿಕೆಟ್ ತಪ್ಪಿಸಲು ಯಾವ ಮಾನದಂಡ ಇದೆ ಎಂದರು.
ಕೆಲಕಾಲ ವಾದ, ವಿವಾದ ನಡೆದ ನಂತರ ಕಾರ್ಯಕರ್ತರನ್ನು ಸಮಾಧಾನಗೊಳಿಸಿದ ಅಭ್ಯರ್ಥಿ ರಾಜೇಶ್ಗೌಡ, ಪಕ್ಷದ ಹಿತದೃಷ್ಟಿಯಿಂದ ಪಕ್ಷದ ವರಿಷ್ಠರ ಸೂಚನೆ ಮೇರೆಗೆ ಕಣದಿಂದ ಹಿಂದೆ ಸರಿಯುವ ನಿರ್ಧಾರ ಘೋಷಿಸಿ, ಪಕ್ಷ ತಮಗೆ ಎಂದು ಮೋಸ ಮಾಡಿಲ್ಲ. ಆದರೆ ಸ್ಥಳೀಯ ಕೆಲ ನಾಯಕರು ಮೋಸ ಮಾಡಿದ್ದಾರೆ. ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ಪಕ್ಷ ಸೂಚಿಸಿದ ಕಡೆ ಕೆಲಸ ಮಾಡುವುದಾಗಿ ಹೇಳಿದರು.
ನಾಗೇಂದ್ರ ಶರ್ಮ ಮಾತನಾಡಿ ಬಿಜೆಪಿ ದೊಡ್ಡ ಪರಿವಾರದಲ್ಲಿ ತಾಲೂಕು ಬಿಜೆಪಿ ಒಂದು ಕುಟುಂಬ ಇದ್ದಂತೆ, ಕುಟುಂಬದಲ್ಲಿ ಭಿನ್ನಾಭಿಪ್ರಾಯ ಸಹಜ, ಎಲ್ಲವನ್ನು ನಿಭಾಯಿಸಿಕೊಂಡು ಹೋಗಬೇಕಿದೆ. ಬಿಜೆಪಿ ಕಾರ್ಯಕರ್ತರು ಎಂದರೆ ಎಲ್ಲರೂ ಒಂದೆ, ಅದರಲ್ಲಿ ಅವರು, ಇವರು, ಆ ಬಣ, ಈ ಬಣ ಎಂಬ ಭೇದ ಭಾವ ಇಲ್ಲ. ಯಾವುದೇ ಕಾರ್ಯಕರ್ತರಿಗೂ ತೊಂದರೆ ಆಗದಂತೆ ಅಗತ್ಯ ಕ್ರಮ ವಹಿಸುತ್ತೇವೆ. ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಗೆಲ್ಲಿಸಲು ಎಲ್ಲರೂ ಶ್ರಮಿಸಬೇಕೆಂದರು.
ನಂತರ ರಾಜೇಶ್ ಗೌಡ ನಾಮಪತ್ರ ಹಿಂದಕ್ಕೆ ಪಡೆದರು. ಇತ್ತ ಕಾಂಗ್ರೆಸ್ ನಿಂದ ಬಂಡಾಯ ಅಭ್ಯರ್ಥಿ ಎಂದು ಗುರುತಿಸಿಕೊಂಡಿದ್ದ ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡರು ಕಣದಿಂದ ಹಿಂದೆ ಸರಿಯುತ್ತಾರೆಂಬ ವದಂತಿ ಹಬ್ಬಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನ ಕಾರ್ಯಕರ್ತರು ಸೇರಿದಂತೆ ಬಿಬಿಆರ್ ಬೆಂಬಲಿಗರು ತಾಲೂಕು ಕಚೇರಿಯ ಮುಂದೆ ಮಧ್ಯಾಹ್ನದ ವರೆಗೂ ಜಮಾವಣೆ ಗೊಂಡಿದ್ದರು. ಮೂರು ಗಂಟೆ ನಂತರವೂ ಬಿ.ಬಿ.ರಾಮಸ್ವಾಮಿ ಗೌಡ ನಾಮಪತ್ರ ಹಿಂಪಡೆಯದೆ ಕಣದಲ್ಲಿ ಉಳಿದಿದ್ದು ಕಾಂಗ್ರೆಸ್ ವಲಯದಲ್ಲಿ ಕುತೂಹಲಕ್ಕೆ ಕಾರಣವಾಯಿತು.
8 ಅಭ್ಯರ್ಥಿಗಳು ಕಣದಲ್ಲಿ
ನಾಮಪತ್ರ ಹಿಂಪಡೆಯಲು ನಿಗದಿಪಡಿಸಿದ ಅವಧಿಯ ನಂತರ ತಾಲೂಕಿನ ಚುನಾವಣೆ ಕಣದಲ್ಲಿ ಒಟ್ಟಾರೆ ಎಂಟು ಮಂದಿ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಶಾಸಕ ಡಾ.ರಂಗನಾಥ್ ಪತ್ನಿ ಸುಮಾ ರಂಗನಾಥ್ ನಾಮಪತ್ರ ಹಿಂದೆಕ್ಕೆ ಪಡೆದರೆ, ಬಿಜೆಪಿ ಬಂಡಾಯ ಅಭ್ಯರ್ಥಿ ಎಂದೆ ಘೋಷಿಸಿಕೊಂಡು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ರಾಜೇಶ್ ಗೌಡ ನಾಮಪತ್ರ ಹಿಂಪಡೆದರು, ನಾಮಪತ್ರ ಹಿಂಪಡೆದ ನಂತರ ಒಟ್ಟಾರೆ ಎಂಟು ಮಂದಿ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು ಆಮ್ ಆದ್ಮಿ ಪಕ್ಷದಿಂದ ಎಚ್.ಎ.ಜಯರಾಮಯ್ಯ, ಬಿಜೆಪಿಯಿಂದ ಡಿ.ಕೃಷ್ಣಕುಮಾರ್, ಕಾಂಗ್ರೆಸ್ ಪಕ್ಷದಿಂದ ಡಾ.ರಂಗನಾಥ್, ಜೆಡಿಎಸ್ ಪಕ್ಷದಿಂದ ಡಾ.ರವಿ, ಕೆಆರ್ಎಸ್ ಪಕ್ಷದಿಂದ ರಘು, ರಾಷ್ಟ್ರೀಯ ಜನಹಿತ ಪಕ್ಷದಿಂದ ರಮೇಶ, ಪಕ್ಷೇತರ ಅಭ್ಯಥಿಯಾಗಿ ಬಿ.ಬಿ.ರಾಮಸ್ವಾಮಿ ಗೌಡ, ಪಕ್ಷೇತರ ಅಭ್ಯರ್ಥಿಯಾಗಿ ತಿರುಮಲೆ ಗೌಡ ಕಣದಲ್ಲಿದ್ದಾರೆ.
Comments are closed.