ಚುನಾವಣೆಗೆ ನಿಲ್ಲಿಸಿ ನನ್ನನ್ನು ಬಲಿ ಪಶು ಮಾಡಿದ್ರು

ಲೋಕಸಭೆಯಿಂದ ಸ್ಪರ್ಧಿಸಬೇಕೆಂದು ಅಂದುಕೊಂಡವನಲ್ಲ: ಎಚ್ ಡಿಡಿ

161

Get real time updates directly on you device, subscribe now.


ಮಧುಗಿರಿ: ಕಳೆದ ಲೋಕಸಭಾ ಚುನಾವಣೆಯಲ್ಲಿ ನಾನು ತುಮಕೂರಿನಿಂದ ನಿಲ್ಲಲು ಬಯಸಿದವನಲ್ಲ. ರಾಜಕೀಯ ನಿವೃತ್ತಿ ಘೋಷಿಸಲು ಬಯಸಿದ್ದೆ, ಆದರೆ ಜಿಲ್ಲೆಯ ಕೆಲ ಮುಖಂಡರು ಚುನಾವಣೆಗೆ ನಿಲ್ಲಿಸಿ ನನ್ನನ್ನು ಬಲಿ ಪಶು ಮಾಡಿದರು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆರೋಪಿಸಿದರು.

ತಾಲೂಕಿನ ದೊಡ್ಡೇರಿ ಹೋಬಳಿಯ ಡಿ ಕೈಮರ ಗ್ರಾಮದ ಶಾಸಕ ವೀರಭದ್ರಯ್ಯನವರ ಮನೆ ಸಮೀಪ ಹಮ್ಮಿಕೊಂಡಿದ್ದ ಬೃಹತ್ ಕಾರ್ಯಕರ್ಯರ ಸಭೆ ಉದ್ಘಾಟಿಸಿ ಮಾತನಾಡಿ, ಲೋಕಸಭೆಯಿಂದ ಸ್ಪರ್ಧಿಸಬೇಕೆಂದು ನಾನು ಎಂದೂ ಅಂದುಕೊಂಡವನಲ್ಲ. ನನಗೆ ಮಂಡಿನೋವಿದೆ, ಎದ್ದು ನಿಲ್ಲೋಕೆ ಕಷ್ಟ ಆಗುತ್ತೆ, ಚುನಾವಣಾ ರಾಜಕೀಯ ಸಾಕಾಗಿದೆ ಎಂದು ಈ ಹಿಂದೆಯೇ ಹೇಳಿದ್ದೆ, ಆದರೆ ತುಮಕೂರಿನ ಕೆಲ ಮುಖಂಡರು ನನ್ನನ್ನ ಬಲಿಪಶು ಮಾಡಿದ್ರು ಎಂದು ಹೇಳಿ ನಾನು ಯಾರ ಮನಸ್ಸನ್ನು ನೋಯಿಸುವುದಿಲ್ಲ. ನಾನು ಹಿಂದೆ ನಡೆದದ್ದನ್ನ ಮೆಲುಕು ಹಾಕಿ ನೋಡೋಕು ಹೋಗೋದಿಲ್ಲ. ಕಾಂಗ್ರೆಸ್ ನವರು ಜೆಡಿಎಸ್ ಗೆ ಕೇವಲ 20 ಸ್ಥಾನ ಮಾತ್ರ ಬರುತ್ತವೆ ಎಂದು ಹೇಳುತ್ತಿದ್ದು, ಬಹುಶಃ ಮಧುಗಿರಿ ಒಂದೇ ಸಾಕು ಕಾಂಗ್ರೆಸ್ ನಾಯಕರಿಗೆ ಉತ್ತರ ಕೊಡೋಕೆ ಎಂದು ಕಾಂಗ್ರೆಸ್ ಮುಖಂಡರ ವಿರುದ್ಧ ಹರಿಹಾಯ್ದರು.

ಈ ಹಿಂದೆ ನಾನು ಸಿಎಂ ಆಗುವ ಸಂದರ್ಭದಲ್ಲಿ ತುಮಕೂರಿನಲ್ಲಿ 9 ಕ್ಷೇತ್ರಗಳನ್ನು ಜೆಡಿಎಸ್ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಈ ಬಾರಿಯ ಚುನಾವಣೆಯಲ್ಲೂ ಮತದಾರರು ಅದೇ ಫಲಿತಾಂಶ ನೀಡಬೇಕು. ಕುಮಾರಣ್ಣ ನಿಮ್ಮ ಮೇಲೆ ವಿಶ್ವಾಸ ವಿಟ್ಟಿದ್ದು, ಅವರು ರಾಜ್ಯದ ಅಭಿವೃದ್ಧಿಗಾಗಿ ಹತ್ತು ಹಲವಾರು ಯೋಜನೆ ಹಾಕಿಕೊಂಡಿದ್ದು, ಕೊಟ್ಟ ಮಾತಿನಂತೆ ನಡೆಯುತ್ತಾರೆ. ಆದ್ದರಿಂದ ಈ ಬಾರಿ ಕುಮಾರಣ್ಣನಿಗೆ ಶಕ್ತಿ ತುಂಬಿ ಎಂದು ಕರೆ ನೀಡಿದರು.
ಶಾಸಕ ಎಂ.ವಿ.ವೀರಭದ್ರಯ್ಯನವರು ಮಧುಗಿರಿ ಕಂದಾಯ ಜಿಲ್ಲೆಯನ್ನಾಗಿ ಮಾಡಬೇಕು. ಏಕಶಿಲಾ ಬೆಟ್ಟಕ್ಕೆ ರೋಪ್ ವೇ ಅಳವಡಿಸಬೇಕು ತಾಲೂಕಿನಲ್ಲಿ ಇಂಡಸ್ಟ್ರಿಯಲ್ ಕ್ಲಸ್ಟರ್ ಮಾಡಬೇಕು ಎಂಬ ಕನಸು ಹೊಂದಿದ್ದು, ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮಾತನಾಡಿ, ಬಿಜೆಪಿಯಿಂದಾಗಿ ಕರ್ನಾಟಕದ ಗೌರವವಿಲ್ಲದಂತಾಗಿದ್ದು, ಅವರು ಯಡಿಯೂರಪ್ಪನನ್ನು ಮುಗಿಸಿದ್ದಾರೆ. ರಾಜ್ಯದ 7 ಕೋಟಿ ಜನತೆಯ ಕಲ್ಯಾಣಕ್ಕಾಗಿ ಜೆಡಿಎಸ್ ಬೆಂಬಲಿಸಿ ಎಂದು ಮನವಿ ಮಾಡಿದರು.
ಹಿಂದುಳಿದವರಿಗೆ ಮೀಸಲಾತಿ ಕೊಟ್ಟವರು ಕೆಂಪೇಗೌಡನ ಮಗ ದೇವೇಗೌಡ, ಇಂತಹ ದೇವೇಗೌಡರನ್ನು ಕಾಂಗ್ರೆಸ್ ನವರು ಇಳಿ ವಯಸ್ಸಿನಲ್ಲಿ ತುಮಕೂರಿನಿಂದ ಚುನಾವಣೆಗೆ ನಿಲ್ಲಿಸಿ ಸೋಲಿಸಿ ಅನ್ನದಲ್ಲಿ ವಿಷ ಹಾಕುವ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಸಾಧನೆ ಏನು ಎಂದ ಅವರು ಸಿಡಿಯಲ್ಲಿರುವ ಮಂತ್ರಿಗಳಿಗೆ ಇವತ್ತು ಟಿಕೆಟ್ ಕೊಟ್ಟಿದ್ದಾರೆ. ಇಂತಹ ಅಪವಿತ್ರರು ರಾಜ್ಯದಲ್ಲಿದ್ದರೆ ಮಳೆಯಾಗುತ್ತಾ ಎಂದು ಪ್ರಶ್ನಿಸಿದರು.

ಶಾಸಕ ಎಂ.ವಿ.ವೀರಭದ್ರಯ್ಯ ಮಾತನಾಡಿ, ಕಳೆದ 5 ವರ್ಷಗಳಲ್ಲಿ ಪ್ರಕೃತಿ ನಮ್ಮ ಪರವಾಗಿ ಇರಲಿಲ್ಲ. ಆರಂಭದಲ್ಲಿ ಭೀಕರ ಬರಗಾಲ ಆವರಿಸಿತ್ತು. ಈ ಸಂದರ್ಭದಲ್ಲಿ ತಾಲೂಕಿನಾದ್ಯಂತ 300 ಬೋರ್ವೆಲ್ ಗಳನ್ನು ಕೊರೆಸಲಾಗಿತ್ತು. 6.70 ಕೋಟಿ ಅನುದಾನ ತಂದು ತಾಲೂಕಿನಲ್ಲಿ ಮೇವು ಬ್ಯಾಂಕ್ ಆರಂಭಿಸಿ ರೈತರ ನೆರವಿಗೆ ಧಾವಿಸಲಾಗಿತ್ತು. 2 ವರ್ಷ ಕೊರೊನಾ ಆವರಿಸಿ ಕಾಮಗಾರಿ ಕುಂಠಿತಗೊಂಡಿತ್ತು. ಬಿಜೆಪಿ ಸರ್ಕಾರದಲ್ಲಿ ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಎಂಬಂತಹ ಪರಿಸ್ಥಿತಿ ಇದ್ದರೂ 1143 ಕೋಟಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇನೆ. ಈಗಾಗಲೇ ಮಧುಗಿರಿ ಉಪ ವಿಭಾಗವಾಗಿದ್ದು, ಮಧುಗಿರಿ ಜಿಲ್ಲೆಯದಾಗ ಮಾತ್ರ ಕ್ಷೇತ್ರ ಅಭಿವೃದ್ಧಿ ಸಾಧ್ಯ. ಮಧುಗಿರಿಯ ಏಕಶಿಲಾ ಬೆಟ್ಟ ದೊಡ್ಡ ಸಂಪತ್ತು, ಇದನ್ನು ಉಪಯೋಗಿಸುವಲ್ಲಿ ಸರ್ಕಾರ ಎಡವಿದೆ. ಈ ಏಕಶಿಲಾ ಬೆಟ್ಟಕ್ಕೆ ರೋಪ್ ವೇ ಅಳವಡಿಸಿದಲ್ಲಿ ಆರ್ಥಿಕ ಚಟುವಟಿಕೆ ಸಾಧ್ಯವಾಗಲಿದೆ. ಕ್ಷೇತ್ರದಲ್ಲಿ ಇಂಡಸ್ಟ್ರಿಯಲ್ ಕ್ಲಸ್ಟರ್ ಆದಲ್ಲಿ ನಿರುದ್ಯೋಗ ದೂರಾಗಲಿದ್ದು, ಯುವಕರಿಗೆ ಕೆಲಸ ದೊರೆಯಲಿದೆ.

ಎತ್ತಿನಹೊಳೆ ಕಾಮಗಾರಿ ಕುಂಟುತ್ತಾ ಸಾಗಿದ್ದು, ಕಾಮಗಾರಿ ತ್ವರಿತಗೊಳಿಸಿದಲ್ಲಿ ಕೆರೆಗಳಿಗೆ ನೀರು ಹರಿಯಲಿದ್ದು, ಈ ಬಾರಿ ನನ್ನನ್ನು ಗೆಲ್ಲಿಸಿ ಜೆಡಿಎಸ್ಗೆ ಆಶೀರ್ವದಿಸಿದಲ್ಲಿ ಕುಮಾರ ಸ್ವಾಮಿ ಸಿಎಂ ಆಗಲಿದ್ದು, ಅವರು ಸಿಎಂ ಆದರೆ ಮಧುಗಿರಿಯ ಭಾಗ್ಯದ ಬಾಗಿಲು ತೆರೆಯಲಿದೆ ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಲಿಂಗಯ್ಯ, ತುಮುಲ್ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್, ಪುರಸಭಾ ಅಧ್ಯಕ್ಷ ತಿಮ್ಮರಾಜು, ಸದಸ್ಯರಾದ ಎಂ.ಆರ್.ಜಗನ್ನಾಥ್, ಎಂ.ಎಲ್.ಗಂಗರಾಜು, ಚಂದ್ರಶೇಖರ್ ಬಾಬು, ಮುಖಂಡರಾದ ತಿಮ್ಮೇಗೌಡ, ಬಸವರಾಜು, ಕಂಭತ್ತನಹಳ್ಳಿ ರಘು, ವೆಂಕಟಾಪುರ ಗೋವಿಂದರಾಜು, ಪಾವಗಡ ಶ್ರೀರಾಮ್, ಎಸ್.ಡಿ. ಕೃಷ್ಣಪ್ಪ, ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಲಕ್ಷ್ಮಮ್ಮ ಇತರರಿದ್ದರು.

Get real time updates directly on you device, subscribe now.

Comments are closed.

error: Content is protected !!