ಗೆದ್ದರೆ ಭೋವಿ ಸಮಾಜದ ಅಭಿವೃದ್ಧಿಗೆ ಬದ್ಧ: ಸುರೇಶ್ ಗೌಡ

94

Get real time updates directly on you device, subscribe now.


ತುಮಕೂರು: ನಾನು ಶಾಸಕನಾಗಿದ್ದ ಕಾಲದಲ್ಲಿ ರಸ್ತೆ, ಕುಡಿಯುವ ನೀರು, ಚರಂಡಿ, ಶಿಕ್ಷಣ, ಕೈಗಾರಿಕೆ ಎಲ್ಲದರಲ್ಲಿಯೂ ಮುಂದಿದ್ದ ತುಮಕೂರು ಗ್ರಾಮಾಂತರ ಕ್ಷೇತ್ರವನ್ನು 2018 ರಲ್ಲಿ ಆಯ್ಕೆಯಾದ ಜೆಡಿಎಸ್ ಶಾಸಕರ ನಿರ್ಲಕ್ಷದಿಂದಾಗಿ ದರಿದ್ರ ಕ್ಷೇತ್ರವಾಗಿ ಮಾರ್ಪಡಿಸಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಬಿ.ಸುರೇಶಗೌಡ ಆರೋಪಿಸಿದರು.
ಗ್ರಾಮಾಂತರ ಕ್ಷೇತ್ರದ ಕಚೇರಿ ಶಕ್ತಿ ಸೌಧದಲ್ಲಿ ತುಮಕೂರು ಗ್ರಾಮಾಂತರದ ಭೋವಿ ಸಮುದಾಯದ ಮುಖಂಡರ ಸಭೆ ನಡೆಸಿ ಮಾತನಾಡಿ, ಪ್ರತಿ ಮನೆಗೆ ನಲ್ಲಿ, ಕುಡಿಯುವ ನೀರು, ರಸ್ತೆ, ಚರಂಡಿ, ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡಿದ್ದರ ಪರವಾಗಿ ಕ್ಷೇತ್ರದಲ್ಲಿ ಸುಮಾರು 20ಕ್ಕು ಹೆಚ್ಚು ಸರಕಾರಿ ಶಾಲೆಗಳು ನವೀಕರಣಗೊಂಡ ಪರಿಣಾಮ ಕ್ಷೇತ್ರದ ಸಾವಿರಾರು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಯಿತು. ಆದರೆ ಇಂದು ಬಹುತೇಕ ಶಾಲೆಗಳಲ್ಲಿ ಬಿಸಿಯೂಟಕ್ಕೆ ನೀರಿಲ್ಲ. ಶೌಚಾಲಯಕ್ಕೆ ನೀರಿಲ್ಲ, ಇಂತಹ ಪರಿಸ್ಥಿತಿಗೆ ಹಾಲಿ ಶಾಸಕರ ನಿರ್ಲಕ್ಷವೇ ಕಾರಣ ಎಂದರು.

ಭೋವಿ ಸಮಾಜ ಪರಿಶ್ರಮಕ್ಕೆ ಹೆಸರಾದ ಸಮುದಾಯ, ಮಾನಸಿಕ ಶ್ರಮಕ್ಕಿಂತ ದೈಹಿಕ ಶ್ರಮ ಹೆಚ್ಚು, ಆದರೆ ಇಂದಿಗೂ ಶಿಕ್ಷಣ, ಉದ್ಯೋಗದಲ್ಲಿ ಅತ್ಯಂತ ಹಿಂದುಳಿದ ಸಮಾಜವಾಗಿದೆ. ಇಂತಹ ಸಮುದಾಯಗಳು ವಾಸಿಸುವ ಜಾಗಗಳನ್ನು ಗುರುತಿಸಿ ಎಲ್ಲ ರೀತಿಯ ಮೂಲಭೂತ ಸೌಕರ್ಯ ಕಲ್ಪಿಸಿದ್ದೇನೆ. ಸುಮಾರು 2500 ಕೋಟಿ ರೂ. ಖರ್ಚು ಮಾಡಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿದ್ದೇನೆ. 250 ಕೋಟಿ ರೂ. ಗಳಲ್ಲಿ 21500 ಮನೆಗಳು, 500 ಕೋಟಿ ರೂ. ಗಳ ವೆಚ್ಚದಲ್ಲಿ ಪ್ರತಿ ರೈತರ ಪಂಪ್ ಸೆಟ್ ಗೆ ಪ್ರತ್ಯೇಕ ಟಿಸಿ ಅಳವಡಿಸಲಾಗಿದೆ. ಹೆಬ್ಬೂರು- ಗೂಳೂರು ಏತ ನೀರಾವರಿ ಜಾರಿಗೆ ತಂದು ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿದ್ದೇನೆ ಎಂದರು.

ಕಳೆದ ಬಾರಿ ನೀವೆಲ್ಲರೂ ನನಗೆ ಬಹುಮತ ನೀಡಿದ್ದರೂ ಹಾಲಿ ಶಾಸಕರು 16500 ಮಕ್ಕಳು ಮತ್ತು 32 ಸಾವಿರ ತಾಯಂದಿರ ಹೆಸರಿನಲ್ಲಿ ನಕಲಿ ಬಾಂಡ್ ಗಳನ್ನು ಹಂಚಿ ವಾಮ ಮಾರ್ಗದಿಂದ ಚುನಾವಣೆ ಗೆದ್ದಿರುವುದು ಹೈಕೋರ್ಟ್ ತೀರ್ಪಿನಿಂದ ಸಾಬೀತಾಗಿದೆ. ಸುಪ್ರಿಂ ಕೋರ್ಟ್ ಅವರಿಗೆ ಷರತ್ತು ಬದ್ಧ ತಡೆಯಾಜ್ಞೆ ನೀಡಿದೆ. ಇವುಗಳನ್ನು ಕ್ಷೇತ್ರದ ಮತದಾರರು ಅರ್ಥ ಮಾಡಿಕೊಂಡು ಮತ ನೀಡಬೇಕೆಂದು ಸುರೇಶ್ಗೌಡ ಮನವಿ ಮಾಡಿದರು.
ಮೇ 10 ರಂದು ನಡೆಯುವ ಚುನಾವಣೆಯಲ್ಲಿ ನಿಮ್ಮೆಲ್ಲರ ಆಶೀರ್ವಾದದಿಂದ ಚುನಾಯಿತನಾದರೆ ಕ್ಷೇತ್ರದಲ್ಲಿ ಗುಡಿಸಲು ಮುಕ್ತ ಮಾಡುವುದಲ್ಲದೆ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಸರಕಾರಿ ಜಾಗ ಗುರುತಿಸಿ ನಿವೇಶನ ನೀಡಲು ಅಗತ್ಯ ಕ್ರಮ ಕೈಗೊಳ್ಳುತ್ತೇನೆ. ಭೋವಿ ಸಮಾಜದ ಪರವಾಗಿ ವಿಧಾನಸಭೆಯ ಹೊರಗೆ ಮತ್ತು ಒಳಗೆ ಧ್ವನಿ ಎತ್ತಲಿದ್ದೇನೆ. ಪ್ರಜಾಪ್ರಭುತ್ವದಲ್ಲಿ ಮತದಾರರೇ ದೇವರು, ಅಂತಹ ಮತದಾರರಿಗೆ ಮೋಸ ಮಾಡಿದ ವ್ಯಕ್ತಿಯನ್ನು ಕ್ಷೇತ್ರದ ಜನತೆ ಎಂದಿಗೂ ಗೆಲ್ಲಿಸಬಾರದು. ಅದು ಜನತೆಗೆ ಮಾಡಿದ ದ್ರೋಹವಾಗುತ್ತದೆ ಎಂದು ಸುರೇಶ್ ಗೌಡ ನುಡಿದರು.

ನಿವೃತ್ತ ಸಿಪಿಐ ಮುನಿರಾಜು ಮಾತನಾಡಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಬಹಳ ಹಿಂದುಳಿದಿರುವ ಭೋವಿ ಸಮಾಜ ಅಭಿವೃದ್ಧಿಯಾಗಬೇಕಾದರೆ ನಾವೆಲ್ಲರೂ ಬಿ.ಸುರೇಶಗೌಡರಿಗೆ ಮತ ನೀಡಬೇಕೆಂದು ಕರೆ ನೀಡಿದರು.
ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ಓಂಕಾರ್ ಮಾತನಾಡಿ, 2008 ರಿಂದ 2018ರ ವರೆಗೆ ಸುರೇಶಗೌಡರು ಶಾಸಕರಾಗಿದ್ದಾಗ ನಮ್ಮ ಸಮಾಜವನ್ನು ಗುರುತಿಸಿ ಅನೇಕ ಅವಕಾಶ ಕಲ್ಪಿಸಿದ್ದಾರೆ. ಬಡವರು ಮಕ್ಕಳು ಓದಲು ಸರಕಾರಿ ಶಾಲೆಗಳ ಅಭಿವೃದ್ಧಿ, ಎಲ್ಲರಿಗೂ ಕುಡಿಯುವ ನೀರು ನೀಡಿದ್ದಾರೆ. ಗ್ರಾಮಾಂತರದಲ್ಲಿ ಬಿಜೆಪಿ ಅಲೆಯಿದ್ದು, ಅದನ್ನು ಮತವಾಗಿ ಪರಿವರ್ತಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ ಎಂದು ಕರೆ ನೀಡಿದರು.
ಸಭೆಯಲ್ಲಿ ನಿವೃತ್ತ ಎಇಇ ಗಂಗಯ್ಯ, ಅರಿಯೂರು ಗ್ರಾಪಂ ಸದಸ್ಯೆ ಸಿದ್ದಗಂಗಮ್ಮ, ಗ್ರಾಪಂ ಸದಸ್ಯರಾದ ಆಶಾ ಸುಲೋಚನ, ಸಮಾಜದ ಮುಖಂಡರಾದ ರಾಜಕುಮಾರ್, ಗಂಗಮ್ಮ ಆನಂದ, ಮುನೇಶ್, ಚಂದ್ರಪ್ಪ, ನಟರಾಜು, ನಾಗರಾಜು, ಮಂಜುನಾಥ್, ಪ್ರಸನ್ನಕುಮಾರ್, ರುಕ್ಮಿಣಿ ವೆಂಕಟೇಶ್, ಜಯಚಂದ್ರ, ಹನುಮಂತಪ್ಪ ಇತರರು ಇದ್ದರು

Get real time updates directly on you device, subscribe now.

Comments are closed.

error: Content is protected !!