ಅದೃಷ್ಟ ಪರೀಕ್ಷೆಗಿಳಿದ ಕದನ ಕಲಿಗಳು

ಕುಣಿಗಲ್ ಅಖಾಡದಲ್ಲಿ ಗೆಲ್ಲುವ ಕುದುರೆ ಯಾವುದು?

100

Get real time updates directly on you device, subscribe now.


ಕುಣಿಗಲ್: ಈ ಬಾರಿಯ ಕುಣಿಗಲ್ ವಿಧಾನಸಭಾ ಕ್ಷೇತ್ರದ ಚುನಾವಣೆ ಕಣದಲ್ಲಿ ತಜ್ಞ ವೈದ್ಯರು, ಬ್ಯಾಂಕ್ ರಾಜ್ಯಾಧ್ಯಕ್ಷರು, ಮಾಜಿ ಶಾಸಕರು ಹಾಗೂ ಅಪ್ಪ ಮಗ ಕಣದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿರುವುದು ವಿಶೇಷವಾಗಿದೆ.
ಹಾಲಿ ಶಾಸಕ ಡಾ.ರಂಗನಾಥ್ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಕಾಂಗ್ರೆಸ್ ಪಕ್ಷದಿಂದ ಕಣಕ್ಕೆ ಇಳಿದಿದ್ದಾರೆ, ಡಾ.ರಂಗನಾಥ್ ಬೆಂಗಳೂರಿನ ಕೆಂಪೇಗೌಡ ವೈದ್ಯಕೀಯ ವಿದ್ಯಾಲಯದಲ್ಲಿ 1989 ರಿಂದ 1996ರ ವರೆಗೂ ಎಂಬಿಬಿಎಸ್ ವ್ಯಾಸಂಗ ಮಾಡಿದ್ದು ನಂತರ ಮೈಸೂರಿನ ಜೆ.ಎಸ್.ವೈದ್ಯಕೀಯ ವಿದ್ಯಾಲಯದಿಂದ ಎಂಎಸ್ ಆರ್ಥೋ 1998 ರಿಂದ 2001 ರವೆಗೂ ವ್ಯಾಸಂಗ ಮಾಡಿ ಮೂಳೆ ತಜ್ಞರಾಗಿದ್ದಾರೆ.

ಇನ್ನು ಜೆಡಿಎಸ್ನಿಂದ ಅಭ್ಯರ್ಥಿಯಾಗಿರುವ ಡಾ.ಬಿ.ಎನ್.ರವಿ ಬೆಂಗಳೂರು ವೈದ್ಯಕೀಯ ವಿವಿಯಲ್ಲಿ 1996ರಲ್ಲಿ ಎಂಬಿಬಿಎಸ್, 1999ರಲ್ಲಿ ಡಿಎನ್ ಡಿ ಹಾಗೂ 2004ರಲ್ಲಿ ರಾಜೀವ್ಗಾಂಧಿ ವೈದ್ಯಕೀಯ ವಿದ್ಯಾಲಯದಲ್ಲಿ ಎಂಡಿ ಪದವಿ ಗಳಿಸಿದ್ದಾರೆ. ಇಬ್ಬರು ನುರಿತ ತಜ್ಞ ವೈದ್ಯರು ತಾಲೂಕಿನ ಚುನಾವಣೆ ಕಣದಲ್ಲಿರುವುದು ಬಹುಶಃ ರಾಜ್ಯದಲ್ಲೆ ಪ್ರಥಮ ಎನ್ನಬಹುದಾಗಿದೆ.
ಬಿಜೆಪಿ ಅಭ್ಯರ್ಥಿ ಡಿ.ಕೃಷ್ಣಕುಮಾರ್ ರಾಜ್ಯ ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್ ನ ರಾಜ್ಯಾಧ್ಯಕ್ಷರಾಗಿದ್ದು ಬಿಜೆಪಿಯಿಂದ ಕಣಕ್ಕೆ ಇಳಿದಿದ್ದಾರೆ. 2008ರಲ್ಲಿ ಕಾಂಗ್ರೆಸ್ ನ ಶಾಸಕರಾಗಿ ಆಯ್ಕೆಯಾಗಿದ್ದ ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿ ಗೌಡ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.

ಬಿಜೆಪಿಯಿಂದ ಸ್ಪರ್ಧೆ ಮಾಡಿರುವ ಡಿ.ಕೃಷ್ಣಕುಮಾರ್, ಜೆಡಿಎಸ್ನಿಂದ ಸ್ಪರ್ಧೆ ಮಾಡಿರುವ ಡಾ.ಬಿ.ಎನ್.ರವಿ ಅವರಿಗೆ ಚಿಕ್ಕಪ್ಪ ಆಗಬೇಕಿದೆ. ವರಸೆಯಲ್ಲಿ ಅಪ್ಪ-ಮಗ ಬೇರೆ ಬೇರೆ ಪಕ್ಷದಿಂದ ಕಣದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿರುವುದು ತಾಲೂಕು ರಾಜಕಾರಣದಲ್ಲಿ ಬಹಳ ಮಹತ್ವ ಪಡೆದಿದೆ.
ನಿವೃತ್ತ ಪೊಲೀಸ್ ಮುಖ್ಯಪೇದೆ ತಿರುಮಲೇಗೌಡ ಎರಡನೇ ಬಾರಿಗೆ ಸ್ವತಂತ್ರ ಅಭ್ಯರ್ಥಿ ಯಾಗಿ ಕಣದಲ್ಲಿ ಉಳಿದಿರುವುದು ಮತ್ತೊಂದು ವಿಶೇಷವಾಗಿದೆ. ನಿವೃತ್ತ ಪೊಲೀಸ್ ಮುಖ್ಯ ಪೇದೆಯಾಗಿರುವ ತಿರುಮಲೇಗೌಡ 2019ರ ಚುನಾವಣೆಯಲ್ಲೂ ಸ್ಪರ್ಧೆ ಮಾಡಿ ಠೇವಣಿ ಕಳೆದುಕೊಂಡಿದ್ದರು.

ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಎಚ್.ಎ.ಜಯರಾಮಯ್ಯ ಅವರ ಪತ್ನಿ ವಸಂತಮ್ಮ ಹುಲಿಯೂರುದುರ್ಗ ಜಿಪಂ ಕ್ಷೇತ್ರದಿಂದ ಜಿಪಂ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ಅವರ ಪತಿಯಾಗಿ ಪತ್ನಿಯ ಗೆಲುವಿಗೆ ಶ್ರಮಿಸಿದ್ದ ಜಯರಾಮಯ್ಯ ಈ ಬಾರಿ ಆಮ್ ಆದ್ಮಿ ಪಕ್ಷದಿಂದ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.
ಭ್ರಷ್ಟಾಚಾರ ನಿಯಂತ್ರಣ ನಿಟ್ಟಿನಲ್ಲಿ ವಿಭಿನ್ನ ರೀತಿಯ ಹೋರಾಟ ಮಾಡಿಕೊಂಡು ಬಂದಿದ್ದ ಕೆಆರ್ಎಸ್ ಪಕ್ಷದ ರಘು ಹೋರಾಟದ ಮೂಲಕ ತಾಲೂಕಿನಲ್ಲಿ ಗುರುತಿಸುವಂತಾಗಿದ್ದು ಈ ಬಾರಿ ತಮ್ಮ ಅದೃಷ್ಟ ಪರೀಕ್ಷಿಸಲು ಚುನಾವಣೆ ಕಣದಲ್ಲಿದ್ದಾರೆ. ರಾಷ್ಟ್ರೀಯ ಜನಹಿತ ಪಕ್ಷದ ರಮೇಶ್ ಮೊದಲ ಬಾರಿಗೆ ಕಣದಲ್ಲಿದ್ದಾರೆ. ತಾಲೂಕಿನ ಚುನಾವಣೆ ಕಣದಲ್ಲಿ ತಜ್ಞ ವೈದ್ಯರು, ಮಾಜಿ ಶಾಸಕ, ಸಹಕಾರಿ ಬ್ಯಾಂಕ್ ಅಧ್ಯಕ್ಷ, ಜಿಪಂ ಸದಸ್ಯೆಯ ಪತಿ, ನಿವೃತ್ತ ಪೊಲೀಸ್ ಮುಖ್ಯಪೇದೆ ಹಾಗೂ ಸಾಮಾಜಿಕ ಹೋರಾಟಗಾರರು ಕಣದಲ್ಲಿದ್ದು ಮತದಾರರ ಗಮನ ಸೆಳೆಯಲು ತಮ್ಮದೆ ಅದ ರೀತಿಯಲ್ಲಿ ಹಗಲಿರುಳು ಪ್ರಚಾರದಲ್ಲಿ ತೊಡಗಿದ್ದಾರೆ.

Get real time updates directly on you device, subscribe now.

Comments are closed.

error: Content is protected !!