ಗ್ರಾಮಾಂತರದಲ್ಲಿ ಜೆಡಿಎಸ್ ತೊರೆದು ಹಲವರು ಬಿಜೆಪಿ ಸೇರ್ಪಡೆ

117

Get real time updates directly on you device, subscribe now.


ತುಮಕೂರು: ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ, ರಾಜ್ಯ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ತಿಗಳ ಸಮುದಾಯ ಮುಖಂಡ ಬಿ.ಹೆಚ್.ಕೃಷ್ಣಪ್ಪ ತಮ್ಮ ಅಪಾರ ಬೆಂಬಲಿಗರೊಂದಿಗೆ ಜೆಡಿಎಸ್ ಪಕ್ಷ ತೊರೆದು ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಬಿ.ಸುರೇಶಗೌಡರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.

ಬಿಜೆಪಿ ಗ್ರಾಮಾಂತರ ಕ್ಷೇತ್ರದ ಕಚೇರಿ ಶಕ್ತಿ ಸೌಧದಲ್ಲಿ ತಮ್ಮ ಕುಟುಂಬದ ಸದಸ್ಯರು, ಸಂಬಂಧಿಕರು ಹಾಗೂ ಅಪಾರ ಬೆಂಬಲಿಗರೊಂದಿಗೆ ಬಿಜೆಪಿ ಕಚೇರಿಯಲ್ಲಿ ಆ ಪಕ್ಷದ ಬಾವುಟ ಮತ್ತು ಶಾಲು ಸ್ವೀಕರಿಸುವ ಮೂಲಕ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡರು.
ಈ ವೇಳೆ ಮಾತನಾಡಿದ ಮಾಜಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ಸುರೇಶ್ ಗೌಡ, 30 ವರ್ಷದಿಂದ ಜೆಡಿಎಸ್ ಪಕ್ಷದಲ್ಲಿದ್ದು, ಹಲವಾರು ಹುದ್ದೆ ಅನುಭವಿಸಿ ಪಕ್ಷಕ್ಕಾಗಿ ದುಡಿದು ಇಂದು ಪಕ್ಷದ ಮುಖಂಡರ ನಡವಳಿಕೆಗೆ ಬೇಸತ್ತು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಇದು ಗ್ರಾಮಾಂತರದಲ್ಲಿ ನಮ್ಮ ಬಲ ಹೆಚ್ಚು ಮಾಡಿದೆ, ಜೆಡಿಎಸ್ ಬುನಾದಿ ಈ ಭಾಗದಲ್ಲಿ ಕಳಚಿದೆ ಎಂದು ಹೇಳಬಹುದಾಗಿದೆ. ನರೇಂದ್ರ ಮೋದಿ ಅವರ ನಾಯಕತ್ವ ಈ ದೇಶಕ್ಕೆ ಅತ್ಯಮೂಲ್ಯವಾಗಿರುವುದರ ಪ್ರಯುಕ್ತ ಕಳೆದ ಐದು ವರ್ಷ ಯಾವುದೇ ರೀತಿಯಾದ ಅಭಿವೃದ್ಧಿ ಆಗಿಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿ ಬೆಂಬಲಿಸುವು ದರೊಂದಿಗೆ ಅಭಿವೃದ್ಧಿಯ ಪಥದಲ್ಲಿ ಸಾಗಿಸುವ ಭರವಸೆ ನೀಡುತ್ತೇನೆ ಎಂದು ಹೇಳಿದರು.

ಜೆಡಿಎಸ್ ತೊರೆದು ಬಿಜೆಪಿ ಸೇರಿದ ಕೃಷ್ಣಪ್ಪ ಮಾತನಾಡಿ, ಸುರೇಶ್ ಗೌಡ ಸರ್ವ ಜನಾಂಗದ ನಾಯಕರು, ನಾನು ಈ ಪಕ್ಷ ಸೇರ್ಪಡೆಯಾಗಲು ಕಾರಣ ರಾಮಚಂದ್ರಪ್ಪ, ಕುಮಾರಣ್ಣ, ಹೆತ್ತೇನಹಳ್ಳಿ ವೆಂಕಟೇಶ್, ವೈ.ಟಿ.ನಾಗರಾಜು ಹಾಗೂ ಇತರರು ಪ್ರೇರಣೆ ಹಾಗೂ ಸುರೇಶ್ ಗೌಡ್ರ ಮುಂದಾಳತ್ವ ಮತ್ತು ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ಭರವಸೆ ನೀಡಿರುವ ಪ್ರಯುಕ್ತ ನಾನು ಈ ಪಕ್ಷಕ್ಕೆ ಬರುತ್ತಿದ್ದೇನೆ ಎಂದರು.
ಜಿಲ್ಲಾ ಜೆಡಿಎಸ್ ನನ್ನನ್ನು ನಡೆಸಿಕೊಂಡ ರೀತಿಯಿಂದ ಬೇಸತ್ತು ನಾನು ಪಕ್ಷ ತೊರೆದಿದ್ದೇನೆ. ಅಧಿಕಾರ ವಿಕೇಂದ್ರಿಕರಣಕ್ಕೆ ದೇವೇಗೌಡರು, ಕುಮಾರಣ್ಣ ಕೊಡ್ತಾರೆ. ಆದರೆ ಅದನ್ನು ಗೌರಿಶಂಕರ್ ನಮಗೆ ಕೊಟ್ಟಿಲ್ಲ, ಅವರು ಸಮರ್ಥ ನಾಯಕರಲ್ಲ. ಅವರು ಎಂದಿಗೂ ರಾಜಕೀಯವಾಗಿ ಬೆಳೆಯಲು ಬಿಡಲಿಲ್ಲ. ಇದರಿಂದ ನಮಗೆ ಸಾಕಷ್ಟು ನೋವು ಉಂಟಾಗಿದೆ. ಹಲವಾರು ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತರಿಗೆ ತಾಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಗಳಲ್ಲಿ ಅಧಿಕಾರ ತಪ್ಪಿಸುವಲ್ಲಿ ಹಾಲಿ ಶಾಸಕರು ವಂಚನೆ ಮಾಡಿದ್ದಾರೆ ಎಂದು ತಿಗಳ ಜನಾಂಗದ ಮುಖಂಡ ಕೃಷ್ಣಪ್ಪ ಆರೋಪಿಸಿದರು.

ಇತ್ತೀಚೆಗೆ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆ ಆದ ಬೆಳ್ಳಿ ಲೋಕೇಶ್ ಮಾತನಾಡಿ, ಆ ಪಕ್ಷದಲ್ಲಿ ನಿಷಾವಂತ ಕಾರ್ಯಕರ್ತರಿಗೆ ಪ್ರಾಮಾಣಿಕರಿಗೆ ಬೆಲೆ ನೀಡದ ಪಕ್ಷದಲ್ಲಿ ನಾನು ಮೊದಲ್ಗೊಂಡು ಹಲವಾರು ಕಾರ್ಯಕರ್ತರು ತೊರೆಯಲು ಕಾರಣವಾಗಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಇನ್ನು ಸಾವಿರಾರು ಸಂಖ್ಯೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರಲಿದ್ದಾರೆ ಎಂದರು.

ಒಕ್ಕಲಿಗ ಸಮುದಾಯಕ್ಕೆ ತುಮಕೂರು ಕ್ಷೇತ್ರದಲ್ಲಿ ಅನ್ಯಾಯ ಮಾಡಿರುವುದು ಜೆಡಿಎಸ್ ಪಕ್ಷವೇ ಹೊರತು ಬಿಜೆಪಿ ಅಲ್ಲ, ಒಕ್ಕಲಿಗ ನಿಗಮ ಮಂಡಳಿ ಸ್ಥಾಪನೆಯಾಗಲು ಸುರೇಶ್ ಗೌಡ ಕಾರಣ ಹೊರತು ಯಾವುದೇ ಜೆಡಿಎಸ್ ಮುಖಂಡರಲ್ಲ. ಜೆಡಿಎಸ್ ಪಕ್ಷದಲ್ಲಿ ಕುಮಾರಣ್ಣನ ದರ್ಬಾರ್ ಜಾಸ್ತಿ, ಸುಖಾ ಸುಮ್ಮನೆ ರೈತರ ಹೆಸರು ಹೇಳಿ ಓಟ್ ಪಡೆಯುತ್ತಿದ್ದಾರೆ. ಆದರೆ ಅದನ್ನು ಬಿಟ್ಟು ತಾವು ಮಾಡಿರುವ ನಿಷ್ಠಾವಂತ ಕೆಲಸಗಳಿಂದ ಮತ ಕೇಳಲಿ ಎಂದು ತಾಕೀತು ಮಾಡಿದರು.
ತಮ್ಮ ವಿರುದ್ಧ ಅವಹೇಳನಾಕಾರಿಯಾಗಿ ಸುದ್ದಿ ಮಾಡಬಾರದು ಎಂದು ಭಯ ಪಟ್ಟು ನ್ಯಾಯಾಲಯದಿಂದ ತಡೆಯಾಜ್ಞೆ ತರುತ್ತಾರೆ, ಇದು ತರವಲ್ಲ. ಅಲ್ಲದೆ ನಕಲಿ ಬಾಂಡ್ ಹಂಚಿ ಪುಟ್ಟ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಡುತ್ತಿದ್ದಾರೆ ಎಂದು ಬೆಳ್ಳಿ ಲೋಕೇಶ್ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಪತ್ರಿಕಾಗೋಷ್ಠಿಯಲ್ಲಿ ಗೂಳೂರು ಶಿವಕುಮಾರ್, ಪಂಚೆ ರಾಮಚಂದ್ರಪ್ಪ, ದೇವರಾಜು, ಮಾಸ್ತಿಗೌಡ, ವೈ.ಟಿ.ನಾಗರಾಜು, ಜಯಂತಗೌಡ, ತಾಲೂಕು ಅಧ್ಯಕ್ಷ ಶಂಕರ್, ಊರುಕೆರೆ ವಿಜಯಕುಮಾರ್, ಕೆಂಪರಾಜು ಬೆಳಗುಂಬ, ಹೆತ್ತೇನಹಳ್ಳಿ ವೆಂಕಟೇಶ್ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!