ದುಷ್ಕರ್ಮಿಗಳು ಕಲ್ಲು ಹಾಕಿರಬಹುದು: ಡಾ.ಪರಂ

ಕಲ್ಲು ಹಾಕಿದ ತಕ್ಷಣ ಹೆದರಲ್ಲ, ಧೈರ್ಯವಾಗಿ ಪ್ರಚಾರಕ್ಕೆ ಹೋಗುವೆ

133

Get real time updates directly on you device, subscribe now.


ತುಮಕೂರು: ಕೊರಟಗೆರೆ ತಾಲ್ಲೂಕಿನ ಬೈರೇನಹಳ್ಳಿ ಕ್ರಾಸ್ ನಲ್ಲಿ ಪ್ರಚಾರ ಮಾಡುವಾಗ ನಮ್ಮ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಜೆಸಿಬಿ ಮೂಲಕ ಹಾರ, ಹೂ ಹಾಕುವಾಗ ತಲೆಗೆ ಏನೋ ಹೊಡೆದಂತೆ ಆಯ್ತು, ಗುಲಾಬಿ ಜೊತೆ ರಕ್ತ ಬರ್ತಾ ಇದ್ದಿದ್ದು ಗೊತ್ತಾಗಲಿಲ್ಲ. ಅಕ್ಕಿರಾಂಪುರದಲ್ಲಿ ಪ್ರಥಮ ಚಿಕಿತ್ಸೆ ಪಡೆದು ಮನೆಗೆ ಬಂದೆ, ಹೂವಿನಲ್ಲಿ ಕಲ್ಲು ಬಂದಿರೋಲ್ಲ. ಯಾರೋ ದುಷ್ಕರ್ಮಿಗಳು ಕಲ್ಲು ಹಾಕಿರಬೇಕು ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿದರು.

ತುಮಕೂರಿನ ಹೆಗ್ಗೆರೆಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 35 ವರ್ಷದ ರಾಜಕೀಯದಲ್ಲಿ ಶತ್ರುಗಳು ಕಡಿಮೆ, ಚುನಾವಣೆ ಜನರ ತೀರ್ಪು, ಜನರ ಮುಂದೆ ಮತ ಕೇಳ್ತೀವಿ, ಆಶ್ವಾಸನೆ ಕೊಡ್ತೀವಿ. ಅದನ್ನ ಬಿಟ್ಟು ಬೇರೆ ಮಾಡಬಾರದು, ದ್ವೇಷ ತೀರಿಸಿಕೊಳ್ಳುವುದಕ್ಕೆ ಸಾರ್ವಜನಿಕ ಜೀವನ ಬಳಸಿಕೊಳ್ಳಬಾರದು ಎಂದರು.

ಹೂ ಎಸೆಯೋರಿಗೆ ಕಲ್ಲು ಇರೋದು ಗೊತ್ತಾಗುತ್ತೆ, ಪೊಲೀಸರಿಗೆ ತನಿಖೆ ಮಾಡುವಂತೆ ತಿಳಿಸಿದ್ದೇನೆ. 1999ರಲ್ಲೂ ಚಾಕುವಿನಿಂದ ತಿವಿಯಲು ಪ್ರಯತ್ನಿಸಿದ್ದರು. ಈಗ ಮತ್ತೆ ಆಗಿದೆ. ಪಕ್ಷದ ಅಧ್ಯಕ್ಷರು ದೂರು ನೀಡಿದ್ದಾರೆ, ಪೊಲೀಸರು ತನಿಖೆ ನಡೆಸುವಂತೆ ಮನವಿ ಮಾಡಿದರು.

ಒಂದೂವರೆ ಇಂಚು ಗಾಯವಾಗಿದೆ, ಸರ್ಜಿಕಲ್ ಬ್ಲ್ಯೂ ಹಾಕಲಾಗಿದೆ. ಕುಮಾರ ಸ್ವಾಮಿಗೆ ಡ್ರಾಮಾ ಮಾಡಿ ಅಭ್ಯಾಸ ಇರ್ಬೇಕು ಅದಕ್ಕೆ ಹೇಳಿದ್ದಾರೆ. ಏಟು ತಿಂದಿರೋನು ನಾನು, ಡಾಕ್ಟರ್ ಅನುಮತಿ ಕೊಟ್ಟರೆ ನಾಳೆಯಿಂದಲೇ ಪ್ರಚಾರದಲ್ಲಿ ಪಾಲ್ಗೊಳ್ಳುತ್ತೇನೆ.
ನನಗೆ ಡ್ರಾಮಾ ಮಾಡುವ ಅಗತ್ಯವಿಲ್ಲ, ಜನರ ಮುಂದೆ ಹೋಗುತ್ತೇನೆ. ಜನರ ತೀರ್ಮಾನ ತೆಗೆದುಕೊಳ್ಳುತ್ತಾರೆ. ಸೋಲು, ಗೆಲುವು ನೋಡಿದ್ದೇನೆ. ಕ್ರೀಡಾಪಟುವಾಗಿ ಎರಡನ್ನು ಸಮಾನವಾಗಿ ಸ್ವೀಕರಿಸುತ್ತೇನೆ ಎಂದರು.
ಯಾರು ಉದ್ವೇಗಕ್ಕೆ ಒಳಗಾಗಬೇಡಿ, ಶಾಂತಿಯುತವಾಗಿ ಚುನಾವಣೆ ನಡೆಯಬೇಕು. ಭದ್ರತಾ ವೈಫಲ್ಯ ಆಗಿಲ್ಲ, ಕಲ್ಲು ಹಾಕಿದ ತಕ್ಷಣ ಹೆದರುವುದಿಲ್ಲ. ಧೈರ್ಯವಾಗಿ ಪ್ರಚಾರಕ್ಕೆ ಹೋಗುತ್ತೇನೆ, ಪಕ್ಷದ ಮುಖಂಡರು ಆರೋಗ್ಯ ವಿಚಾರಿಸಿದ್ದಾರೆ. ಕ್ಷೇತ್ರದ ಜನರು ನನಗೆ ಆಶೀರ್ವಾದ ಮಾಡಲಿದ್ದಾರೆ ಎಂದರು.

Get real time updates directly on you device, subscribe now.

Comments are closed.

error: Content is protected !!