ಗರ್ಭಪಾತ ಶಂಕೆ- ಅಧಿಕಾರಿಗಳ ದಾಳಿ

160

Get real time updates directly on you device, subscribe now.


ಶಿರಾ: ಇಲ್ಲಿನ ಜ್ಯೋತಿನಗರದ ಖಾಸಗಿ ಮನೆಯಿಂದರಲ್ಲಿ ಗರ್ಭಪಾತ ನಡೆಸಲಾಗುತ್ತದೆ ಎನ್ನುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕರ್ನಾಟಕ ರಾಜ್ಯ ಸಮಗ್ರ ಗರ್ಭಪಾತ ಸೇವೆಯ ನೋಡಲ್ ಅಧಿಕಾರಿ ಬಿ.ಆರ್.ಚಂದ್ರಿಕಾ ಗರ್ಭಪಾತಕ್ಕೆ ಬಳಸಲಾಗುತ್ತಿದ್ದ ಪರಿಕರಗಳು ಹಾಗೂ ಔಷಧಿಗಳನ್ನು ವಶಕ್ಕೆ ಪಡೆದುಕೊಂಡು, ಮಹಿಳಾ ದಾದಿ ಸೌಜನ್ಯ ಎನ್ನುವವರ ವಿರುದ್ಧ ಪ್ರಕರಣ ದಾಖಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನೋಡಲ್ ಅಧಿಕಾರಿ ಅನಧಿಕೃತ ಗರ್ಭಪಾತ ಮಾಡಿಸುವುದರಿಂದ ಸಾವು ಸಂಭವಿಸುವುದರ ಜೊತೆಗೆ ಶಾಶ್ವತ ಬಂಜೆತನ, ಸೋಂಕು ಹಾಗೂ ಮಾರಕ ರೋಗ ಹರಡುವ ಸಾಧ್ಯತೆ ಇರುತ್ತದೆ. ಒಂದು ವೇಳೆ ಗರ್ಭಪಾತದ ವಿಷಯದ ಬಗ್ಗೆ ಗೌಪ್ಯತೆ ಕಾಯ್ದುಕೊಳ್ಳುವ ಸಂದರ್ಭ ಬಂದಾಗ ವೈದ್ಯರೊಡನೆ ಸಮಾಲೋಚನೆ ನಡೆಸಿಕೊಂಡು ಸುರಕ್ಷಿತ ಗರ್ಭಪಾತ ಮಾಡಿಸಿಕೊಳ್ಳಬೇಕು. ಅಂತಹವರ ಹೆಸರನ್ನು ಗೌಪ್ಯತೆಯಿಂದ ಇಡಲಾಗುತ್ತದೆ. ಒಂದು ವೇಳೆ ವೈದ್ಯರು ಪ್ರಚಾರ ಮಾಡಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅದಕ್ಕಾಗಿಯೇ ಸುರಕ್ಷಿತ ಗರ್ಭಪಾತಕ್ಕಾಗಿ ನೋಂದಣಿ ವೈದ್ಯರನ್ನೇ ಸಂಪರ್ಕಿಸಿ ಎಂದು ತಿಳಿಸಿದರು.

ಗರ್ಭಪಾತ ನಡೆಸುತ್ತಿದ್ದಾಳೆ ಎನ್ನಲಾಗಿರುವ ಸೌಜನ್ಯ ಸುಮಾರು ಒಂದು ವರ್ಷದ ಹಿಂದೆ ಶಿರಾ ತಾಲೂಕು ಬುಕ್ಕಾಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ಎಎನ್ಎಂ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಸರಿಯಾಗಿ ಕೆಲಸಕ್ಕೆ ಬಾರದ ಕಾರಣದಿಂದ ಕೆಲಸದಿಂದ ವಜಾ ಗೊಳಿಸಲಾಗಿತ್ತು ಎಂದು ತಿಳಿದು ಬಂದಿದೆ.

ಪ್ರಕರಣದ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕು ವೈದ್ಯಾಧಿಕಾರಿ ಡಾ.ಮೋಹನ್ ತಿಳಿಸಿದ್ದಾರೆ.
ದಾಳಿ ಸಂದರ್ಭದಲ್ಲಿ ಶಿರಾ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಶ್ರೀನಾಥ್, ವಿನೋದ್, ಯಶ್ ಪಾಲ್ ಮುಂತಾದವರು ಇದ್ದರು.

Get real time updates directly on you device, subscribe now.

Comments are closed.

error: Content is protected !!