ತುಮಕೂರು: ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಗತ್ಯ ಸೇವೆಯಲ್ಲಿರುವ ಗೈರು ಮತದಾರರಿಗಾಗಿ ಅಂಚೆ ಮೂಲಕ ಮತದಾನ ಮಾಡಲು ಅನುವಾಗುವಂತೆ ಮೇ 2 ರಿಂದ 4 ರವರೆಗೆ ಆಯಾ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಪೋಸ್ಟಲ್ ವೋಟಿಂಗ್ ಸೆಂಟರ್ ಸ್ಥಾಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಕೆಸ್ವಾನ್ ಸಭಾಂಗಣದಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾ ಅಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಮಾತನಾಡಿ, ಪೋಸ್ಟಲ್ ವೋಟಿಂಗ್ ಸೆಂಟರ್ ಸ್ಥಾಪಿಸಿರುವ ಬಗ್ಗೆ ಎಲ್ಲ ಎವಿಇಎಸ್ ಮತದಾರರಿಗೆ ಎಸ್ಎಂಎಸ್ ಮೂಲಕ ಕಡ್ಡಾಯವಾಗಿ ಮಾಹಿತಿ ನೀಡಬೇಕು ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ವೆಬೆಸೈಟ್ನಲ್ಲಿ ಪ್ರಚುರಪಡಿಸಬೇಕು ಎಂದರು.
ಎಲ್ಲ ಎವಿಇಎಸ್ ಮತದಾರರಿಗೆ ಪಿವಿಸಿ ಸ್ಥಾಪನೆಯ ಸ್ಥಳ, ವಿಳಾಸ, ದಿನಾಂಕ, ಸಮಯದ ಮಾಹಿತಿಯನ್ನು ಎಸ್ಎಂಎಸ್ ಮೂಲಕ ತಿಳಿಸಬೇಕು, ಪಿವಿ ಸೆಂಟರ್ ನಲ್ಲಿ ಅಂಚೆ ಮತದಾನ ಮಾಡಲು ಮೇ 2 ರಿಂದ 4 ರವರೆಗೆ ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ಮಾತ್ರ ಅವಕಾಶವಿರುತ್ತದೆ. ಅಂಚೆ ಮತದಾನಕ್ಕಾಗಿ ನಮೂನೆ- 12 ಡಿಯನ್ನು ಭರ್ತಿ ಮಾಡಿ ಸಲ್ಲಿಸಿದ ಎವಿಇಎಸ್ ಸಿಬ್ಬಂದಿ ಕೇವಲ ಈ ಪಿವಿಸಿ (ಅಂಚೆ ಮತದಾನ ಕೇಂದ್ರ) ದಲ್ಲಿ ಮಾತ್ರ ಮತ ಚಲಾಯಿಸಲು ಅವಕಾಶವಿರುತ್ತದೆ. ಉಳಿದಂತೆ ಬೇರೆ ಯಾವ ಕ್ರಮದಲ್ಲಿಯೂ ಮತ ಚಲಾಯಿಸಲು ಅವಕಾಶವಿರುವುದಿಲ್ಲ ಎಂಬುದನ್ನು ಕಡ್ಡಾಯವಾಗಿ ತಿಳಿಸಬೇಕು ಎಂದು ತಿಳಿಸಿದರು.
ಪೋಸ್ಟಲ್ ವೋಟಿಂಗ್ ನಡೆಯುವ ದಿನಾಂಕವನ್ನು ಚುನಾವಣಾ ಅಭ್ಯರ್ಥಿಗಳಿಗೆ ಮಾಹಿತಿ ನೀಡಬೇಕು. ಅಂಚೆ ಮತದಾನ ನಡೆಯುವ ವಿಧಾನವನ್ನು ಅಭ್ಯರ್ಥಿ ಅಥವಾ ಅವರ ಏಜೆಂಟ್ ಗಳಿಗೆ ವೀಕ್ಷಿಸಲು ಅವಕಾಶವಿರುತ್ತದೆ ಎಂದು ಹೇಳಿದರು.
ಅಂಚೆ ಮತದಾನ ಕೇಂದ್ರದಲ್ಲಿ ಮತದಾರರಿಗೆ ಅಂಚೆ ಮತಪತ್ರ, ಮತದಾನಕ್ಕೆ ಸಂಬಂಧಿಸಿದಂತೆ 13ಎ, 13ಬಿ, 13ಸಿ ಇತರೆ ಲಕೋಟೆಗಳನ್ನು ನೀಡಲು ಅಗತ್ಯ ಸಿಬ್ಬಂದಿ ನಿಯೋಜಿಸಬೇಕು. ನಿಯೋಜಿತ ಸಿಬ್ಬಂದಿ ಮತದಾರನ ಗುರುತು ಪತ್ರ (ಚುನಾವಣಾ ಆಯೋಗ ಸೂಚಿಸಿರುವ ದಾಖಲೆಗಳ ಪೈಕಿ) ಹೊಂದಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಪಟ್ಟಿಯನ್ನು ದೊಡ್ಡ ಕಾರ್ಡ್ ಬೋರ್ಡ್ನಲ್ಲಿ ಲಗತ್ತಿಸಿ ಮತದಾನ ಕೇಂದ್ರದ ಹೊರಗಡೆ ಇಡಬೇಕು.
ಪಿವಿಸಿ ಕೇಂದ್ರದಲ್ಲಿ ಎವಿಇಎಸ್ ಮತದಾರರ ಸಂಖ್ಯೆಗನುಗುಣವಾಗಿ ಹಾಗೂ ಶೇ.10 ರಷ್ಟು ಹೆಚ್ಚುವರಿ ಅಂಚೆ ಮತಗಳು, ಅಗತ್ಯ ಲಕೋಟೆಗಳು, ನೇರಳೆ ಬಣ್ಣದ ಸ್ಕೆಚ್ ಪೆನ್, ಗೋಂದು ಬಾಟಲಿ, ಸೆಲ್ಫ್ ಇಂಕಿಂಗ್ ಪ್ಯಾಡ್, ಸ್ಟೀಲ್ ಟ್ರಂಕ್, ಅವಶ್ಯಕ ರಿಜಿಸ್ಟರ್, ವೋಟಿಂಗ್ ಕಂಪಾಟ್ಮೆರ್ಂಟ್, ಎವಿಇಎಸ್ ಮತದಾರರ ಪಟ್ಟಿ ಸೇರಿದಂತೆ ಅಗತ್ಯ ಸಾಮಗ್ರಿ ಹೊಂದಿರಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಪಾಲಿಕೆ ಆಯುಕ್ತ ನಗರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ದರ್ಶನ್, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ, ಉಪ ವಿಭಾಗಾಧಿಕಾರಿ ಹೋಟೆಲ್ ಶಿವಪ್ಪ, ಭೂ ದಾಖಲೆಗಳ ಇಲಾಖೆ ಉಪ ನಿರ್ದೇಶಕ ಸುಜಯ್, ತಹಶೀಲ್ದಾರ್ ಸಿದ್ದೇಶ್ ಸೇರಿದಂತೆ ವಿವಿಧ ಅಧಿಕಾರಿಗಳು ಇದ್ದರು.
Comments are closed.