ಗೊಲ್ಲ ಸುಮುದಾಯದ ಅಭಿವೃದ್ಧಿಗೆ ಶ್ರಮಿಸಿದ್ದೇನೆ: ಸುರೇಶ್ ಗೌಡ

109

Get real time updates directly on you device, subscribe now.


ತುಮಕೂರು: ತುಮಕೂರು ವಿಧಾನಸಭಾ ಕ್ಷೇತ್ರದ 35 ಗ್ರಾಮ ಪಂಚಾಯಿತಿಗಳಲ್ಲಿ 3 ರಲ್ಲಿ ಕಾಡುಗೊಲ್ಲರಿಗೆ, ಒಂದರಲ್ಲಿ ಗೊಲ್ಲ ಸಮುದಾಯಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಕಲ್ಪಿಸುವ ಮೂಲಕ ಕ್ಷೇತ್ರದಲ್ಲಿ ಸಾಮಾಜಿಕ ನ್ಯಾಯ ಕಾಪಾಡಲಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಬಿ.ಸುರೇಶಗೌಡ ತಿಳಿಸಿದ್ದಾರೆ.
ಗ್ರಾಮಾಂತರ ಬಿಜೆಪಿ ಕಚೇರಿ ಶಕ್ತಿಸೌಧದಲ್ಲಿ ಆಯೋಜಿಸಿದ್ದ ಗೊಲ್ಲ ಸಮುದಾಯದ ಮುಖಂಡರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿ, ಕ್ಷೇತ್ರದ ಹಿರೇಹಳ್ಳಿ, ಗಳಿಗೇನಹಳ್ಳಿ, ನಿಡುವಳಲು ಗ್ರಾಮ ಪಂಚಾಯಿತಿಗಳಲ್ಲಿ ಕಾಡುಗೊಲ್ಲ ಸಮುದಾಯಕ್ಕೆ, ಸೀತಕಲ್ಲು ಗ್ರಾಮ ಪಂಚಾಯಿತಿಯಲ್ಲಿ ಗೊಲ್ಲ ಸಮುದಾಯದವರಿಗೆ ಅಧ್ಯಕ್ಷ ಸ್ಥಾನ ನೀಡಿ ಸಾಮಾಜಿಕ ನ್ಯಾಯ ಕಲ್ಪಿಸಲಾಗಿದೆ ಎಂದರು.

ಶಿರಾ ಉಪ ಚುನಾವಣೆಯಲ್ಲಿ ಹಾಗೂ ಇನ್ನಿತರ ಸಂದರ್ಭದಲ್ಲಿ ನಾನು ಗೊಲ್ಲ ಸಮುದಾಯಕ್ಕೆ ನೀಡಿದ ಮಾತಿನಂತೆ ನಡೆದು ಕೊಂಡಿದ್ದೇನೆ. ಅತ್ಯಂತ ನಿಕೃಷ್ಟ ಸ್ಥಿತಿಯಲ್ಲಿದ್ದನ್ನು ಕಣ್ಣಾರೆ ಕಂಡು, ಇವರ ಸಾಮಾಜಿಕ, ಶೈಕ್ಷಣಿಕ, ಅರ್ಥಿಕ ಅಭಿವೃದ್ಧಿಗಾಗಿ ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂಬ ಬೇಡಿಕೆಯನ್ನು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮುಂದಿಟ್ಟು, ನಿಗಮ ಸ್ಥಾಪಿಸಿ ಚಂಗಾವರ ಮಾರಣ್ಣ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದೇನೆ. ಅಲ್ಲದೆ ಕ್ಷೇತ್ರದ 38 ಗೊಲ್ಲರ ಹಟ್ಟಿಗಳಿಗೂ ಸಿಸಿ ರಸ್ತೆ, ಚರಂಡಿ, ಕುಡಿಯುವ ನೀರು, ಅಗತ್ಯವಿರುವರಿಗೂ ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊಳವೆ ಬಾವಿ ನೀಡಿ, ಅವರ ಸಮಗ್ರ ಅಭಿವೃದ್ಧಿಗೆ ಕೆಲಸ ಮಾಡಿದ್ದೇನೆ. ಹಾಗಾಗಿ ಮೇ 10 ರಂದು ನಡೆಯುವ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಮತ ನೀಡಿ ಗೆಲುವು ತಂದುಕೊಡುವಂತೆ ಮನವಿ ಮಾಡಿದರು.

ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ಕ್ಷೇತ್ರದ ಗೊಲ್ಲರ ಹಟ್ಟಿಗಳನ್ನು ದತ್ತು ಪಡೆದು ಅಲ್ಲಿನ ಶಾಲೆ, ಅಂಗನವಾಡಿ ಸೇರಿದಂತೆ ಗ್ರಾಮವನ್ನು ದತ್ತು ಪಡೆದು, ಅಭಿವೃದ್ಧಿ ಪಡಿಸಲಾಗುವುದು. ಇದರ ಜೊತೆಗೆ ಕಾಡುಗೊಲ್ಲ ಅಭಿವೃದ್ಧಿ ನಿಗಮದಿಂದ ಹೆಚ್ಚಿನ ಅನುದಾನ ತಂದು ಕಾಡುಗೊಲ್ಲ ಮತ್ತು ಗೊಲ್ಲ ಸಮುದಾಯದ ಮಕ್ಕಳ ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಬಿ.ಸುರೇಶಗೌಡ ತಿಳಿಸಿದರು.
ಮೇ 10 ರಂದು ನಡೆಯುತ್ತಿರುವ ಚುನಾವಣೆ ಕುರುಕ್ಷೇತ್ರ ವಿದ್ದಂತೆ, ಕೃಷ್ಣನ ಮಕ್ಕಳಾದ ನೀವುಗಳ ಧರ್ಮವಾಗಿ ನಡೆದುಕೊಳ್ಳುತ್ತಿರುವ ನನಗೆ ಬೆಂಬಲವಾಗಿ ನಿಂತು ಜಯಗಳಿಸುವಂತೆ ಮಾಡಬೇಕು. ಹಾಲಿ ಶಾಸಕರು ಕಳೆದ ಬಾರಿ ಹೇಗೆ ಚುನಾವಣೆಯನ್ನು ಮೋಸದಿಂದ ಗೆದ್ದರು ಎಂಬುದು ಗೊತ್ತಿದೆ ಹಾಗೂ ಮೋಸವೇ ತುಂಬಿರುವ, ಕುತಂತ್ರಿಗಳಿರುವ ವಿರೋಧ ಪಕ್ಷವನ್ನು ಬದಿಗೊತ್ತಿ ಬಿಜೆಪಿ ಗೆಲ್ಲಿಸುವಂತೆ ಸುರೇಶಗೌಡ ಮನವಿ ಮಾಡಿದರು.

ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಚಂಗಾವರ ಮಾರಣ್ಣ ಮಾತನಾಡಿ, ನಾನು ಇಂದು ಒಂದು ನಿಗಮದ ಅಧ್ಯಕ್ಷನಾಗಿದ್ದರೆ ಅದಕ್ಕೆ ಸುರೇಶಗೌಡರೇ ಕಾರಣ, ಶಿರಾ ಉಪ ಚುನಾವಣೆಯಲ್ಲಿ ನನ್ನೊಂದಿಗೆ ಶಿರಾ ಕ್ಷೇತ್ರದ 372 ಕಾಡುಗೊಲ್ಲರ ಹಟ್ಟಿಗಳನ್ನು ಸುತ್ತಿ ಅಲ್ಲಿನ ನಿಜಸ್ಥಿತಿ ಅರಿತ ಅಂದಿನ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರಿಗೆ ಕಾಡುಗೊಲ್ಲ ನಿಗಮದ ಸ್ಥಾಪನೆ ಕುರಿತಂತೆ ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ನಿಗಮ ಸ್ಥಾಪನೆಯಾಯಿತು. ಅಲ್ಲದೆ ಕಾಡುಗೊಲ್ಲರ ಅರಾಧ್ಯ ದೈವಗಳಿರುವ ಜುಂಜಪ್ಪನ ಗುಡ್ಡೆ, ಹೆತ್ತಪ್ಪನ ದೇವಾಲಯ, ಚಿಕ್ಕಣ್ಣನ ಹಟ್ಟಿಗಳಿಗೆ ಅನುದಾನ ನೀಡಿ ಅಭಿವೃದ್ಧಿ ಪಡಿಸಿದ್ದಾರೆ. ಹಾಗಾಗಿ ಅವರನ್ನು ನಾವು ಈ ಚುನಾವಣೆಯಲ್ಲಿ ಕೈ ಹಿಡಿಬೇಕಾಗಿದೆ ಎಂದರು.

ತುಮಕೂರು ಗ್ರಾಮಾಂತರ ಓಬಿಸಿ ಮೋರ್ಚಾದ ಶಿವಕುಮಾರ್ ಮಾತನಾಡಿ, ಕ್ಷೇತ್ರದಲ್ಲಿ 38 ಗೊಲ್ಲರ ಹಟ್ಟಿಗಳಿದ್ದು, ಅವುಗಳಿಗೆ ರಸ್ತೆ, ಕುಡಿಯುವ ನೀರು, ಚರಂಡಿ ಕಲ್ಪಿಸಲು ಸುರೇಶಗೌಡರು ಅವಿರತ ಶ್ರಮಿಸಿದ್ದಾರೆ. ಅಲ್ಲದೆ ಗೊಲ್ಲರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಸುರೇಶಗೌಡರು ಶಾಸಕರಾಗಿದ್ದ ಕಾಲದಲ್ಲಿ ಮಾಡಿದ್ದು, ಕಾಡುಗೊಲ್ಲ ಸಮುದಾಯ ಆಸೆ, ಆಮಿಷಗಳಿಗೆ ಬಲಿಯಾಗದೆ ಸುರೇಶ್ ಗೌಡರನ್ನು ಈ ಬಾರಿ ಬೆಂಬಲಿಸುವಂತೆ ಮನವಿ ಮಾಡಿದರು.
ಕಾಡುಗೊಲ್ಲ ಸಮುದಾಯದ ಯುವ ಮುಖಂಡ ಗೋವಿಂದರಾಜು, ಶೇಷಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾ ಭಾಗ್ಯ ಸತೀಶ್, ಅನ್ನಪೂರ್ಣ ಈರೇಗೌಡ,ಯಮುನ ಗೋವಿಂದರಾಜು, ಕೃಷ್ಣಮೂರ್ತಿ, ಸದಸ್ಯರಾದ ಶಿವಗಂಗಯ್ಯ, ವೀಣಾ ಸುರೇಶ್, ರಾಜಣ್ಣ, ಜೋತಿ ಕುಮಾರ್, ಚಿಕ್ಕಮ್ಮ ,ಲಲಿತ ರಂಗಸ್ವಾಮಿ, ನಳಿನ, ಶಿವಲಿಂಗಯ್ಯ, ಶಿವಮ್ಮ, ಶಿವರಾಜ್, ಶಿವಣ್ಣ, ಯತ್ತಪ್ಪನ ಹಟ್ಟಿ ಪೂಜಾರಿ ಯರಪ್ಪ ಇತರರು ಇದ್ದರು

Get real time updates directly on you device, subscribe now.

Comments are closed.

error: Content is protected !!