ತುಮಕೂರು: ತುಮಕೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾದ ಪಿಆರ್ಓ, ಎಪಿಆರ್ಓ, ಪಿಓಗಳಿಗಾಗಿ ನಗರದ ಎಂಪ್ರೆಸ್ ಶಾಲೆಯಲ್ಲಿ ಬುಧವಾರ ತರಬೇತಿ ಏರ್ಪಡಿಸಲಾಗಿತ್ತು. ತರಬೇತಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್.ಪಾಟೀಲ ಹಾಗೂ ಚುನಾವಣಾ ವೀಕ್ಷಕ ಪಂಕಜ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.
ಪರಿಶೀಲನೆ ನಂತರ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 2951 ಪಿಆರ್ಓ, ಎಪಿಆರ್ಓ, ಫಸ್ಟ್ ಪೋಲಿಂಗ್ ಆಫೀಸರ್ ಹಾಗೂ ಸೆಕೆಂಡ್ ಪೋಲಿಂಗ್ ಆಫೀಸರ್ ಸೇರಿ ಒಟ್ಟು 11805 ಅಧಿಕಾರಿ, ಸಿಬ್ಬಂದಿ ಚುನಾವಣಾ ತರಬೇತಿಗೆ ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ 1153, ತಿಪಟೂರು- 1025, ತುರುವೇಕೆರೆ- 1008, ಕುಣಿಗಲ್- 1162, ತುಮಕೂರು ನಗರ- 1118, ತುಮಕೂರು ಗ್ರಾಮಾಂತರ- 994, ಕೊರಟಗೆರೆ- 1065, ಗುಬ್ಬಿ- 933, ಶಿರಾ- 1175, ಪಾವಗಡ- 1082 ಹಾಗೂ ಮಧುಗಿರಿ ವಿಧಾನಸಭಾ ಕ್ಷೇತ್ರಕ್ಕೆ 1091 ಸೇರಿ ಒಟ್ಟು 11805 ಸಿಬ್ಬಂದಿ ತರಬೇತಿಗೆ ನಿಯೋಜಿಸಲಾಗಿದೆ ಎಂದು ತಿಳಿಸಿದರಲ್ಲದೆ ಚುನಾವಣಾ ತರಬೇತಿ ಪಡೆಯಲು ಬಂದವರಿಗೆ ಅಂಚೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿತ್ತು ಎಂದು ತಿಳಿಸಿದರು.
ಮಾಸ್ಟರ್ ಟ್ರೈನರ್ ಗಳು ಮೇ 9 ರಂದು ನಡೆಯುವ ಮಸ್ಟರಿಂಗ್ ಹಾಗೂ ಮೇ 10 ರಂದು ನಡೆಯುವ ಡಿ- ಮಸ್ಟರಿಂಗ್ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಚುನಾವಣಾ ಸಿಬ್ಬಂದಿಗೆ ತರಬೇತಿ ನೀಡಿದರು ಎಂದು ತಿಳಿಸಿದರು.
ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಹೆಚ್.ವಿ.ದರ್ಶನ್ ಮಾತನಾಡಿ, ಮೇ 9 ರಂದು ನಡೆಯುವ ಮಸ್ಟರಿಂಗ್ ಸಂದರ್ಭದಲ್ಲಿ ಮತಗಟ್ಟೆಗೆ ತೆರಳುವ ಸಿಬ್ಬಂದಿಗೆ ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಅನುವಾಗುವಂತೆ ಪ್ರತ್ಯೇಕವಾದ ಕೌಂಟರ್ ತೆರೆಯಲಾಗುವುದು, ಮತದಾನ ಪ್ರಕ್ರಿಯೆಯಲ್ಲಿ ಬಳಸಲಾಗುವ ವಿದ್ಯುನ್ಮಾನ ಮತಯಂತ್ರದ ಕಂಟ್ರೋಲ್ ಯೂನಿಟ್ ಹಾಗೂ ಬ್ಯಾಲೆಟ್ ಯೂನಿಟ್, ವಿವಿ ಪ್ಯಾಟ್ ಕಾರ್ಯ ವಿಧಾನಗಳ ಬಗ್ಗೆ ಪ್ರಾಯೋಗಿಕ ಹಾಗೂ ವಿವರಣಾತ್ಮಕ ತರಬೇತಿ ನೀಡಲಾಯಿತಲ್ಲದೆ, ಮತದಾನ ದಿನದಂದು ನಿರ್ವಹಿಸಬೇಕಾದ ವಹಿ, ಲಕೋಟೆ, ಅಣಕು ಮತದಾನ, ಟೆಂಡರ್ ವೋಟಿಂಗ್, ಚಾಲೆಂಜ್ಡ್ ವೋಟಿಂಗ್ ಬಗ್ಗೆ ಮಾಹಿತಿ ನೀಡಲಾಯಿತು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಪಾಲಿಕೆ ಚುನಾವಣಾ ಶಾಖೆಯ ನಾಗಭೂಷಣ್, ಭೂ ದಾಖಲೆಗಳ ಇಲಾಖೆ ಉಪ ನಿರ್ದೇಶಕ ಹಾಗೂ ಅಂಚೆ ಮತದಾನದ ನೋಡಲ್ ಅಧಿಕಾರಿ ಸುಜಯ್, ಪಾಲಿಕೆಯ ಸುಮತಿ, ಮಾಸ್ಟರ್ ಟ್ರೈನರ್ ಗಳು ಹಾಜರಿದ್ದರು.
Comments are closed.