ತುಮಕೂರು: ಸ್ಮಾರ್ಟ್ ಸಿಟಿಯಾಗಿರುವ ತುಮಕೂರು ಮಂಗಳವಾರ ರಾತ್ರಿ ಅಬ್ಬರಿಸಿ ಬೊಬ್ಬಿರಿದ ಮಳೆಗೆ ನಲುಗಿ ಹೋಯಿತು.
ವರುಣನ ಆರ್ಭಟಕ್ಕೆ ನಗರದ ಬಹುತೇಕ ರಸ್ತೆಗಳು ಜಲಾವೃತಗೊಂಡರೆ ಅಂಡರ್ ಪಾಸ್ ಗಳು ನೀರಿನಿಂದ ಜಲಾವೃತಗೊಂಡವು, ಹಲವು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಇಡೀ ರಾತ್ರಿ ಜಾಗರಣೆ ಇರುವಂತಾಯಿತು.
ನಗರದ ಶೆಟ್ಟಿಹಳ್ಳಿ ಅಂಡರ್ ಪಾಸ್ನಲ್ಲಿ ಆರು ಅಡಿಗೂ ಹೆಚ್ಚು ನೀರು ನಿಂತು ಕೆರೆಯಂತಾಗಿತ್ತು. ಬೆಳಗಿನ ವೇಳೆ ಕಾಲೇಜಿಗೆ ಹೋಗುವವರಿಗೆ, ಕಚೇರಿಗೆ ತೆರಳುವವರಿಗೆ ತೀವ್ರ ತೊಂದರೆ ಉಂಟಾಯಿತು.
ಕುಣಿಗಲ್ ರಸ್ತೆಯ ರೈಲ್ವೆ ಅಂಡರ್ ಪಾಸ್ ನಲ್ಲಿ ಐದು ಅಡಿಗೂ ಹೆಚ್ಚು ನೀರು ನಿಂತು ವಾಹನ ಸವಾರರು ಪರದಾಡಿದರು. ಇನ್ನೋವಾ, ಡಸ್ಟರ್ ಕಾರು ನೀರಿನಲ್ಲಿ ಚಲಿಸಲು ಮುಂದಾಗಿ ಕೆಟ್ಟು ನಿಲ್ಲುವಂತಾಯಿತು.
ಎಸ್ಐಟಿ, ಸಿದ್ದಗಂಗಾ ಬಡಾವಣೆ, ಎಸ್.ಎಸ್.ಪುರಂ ಸೇರಿದಂತೆ ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿ ರಾತ್ರಿ ಇಡೀ ನಿವಾಸಿಗಳು ನೀರು ಹೊರ ಹಾಕುವ ಕೆಲಸದಲ್ಲಿ ನಿರತವಾಗಿದ್ದರು.
ಇನ್ನು ಕೋತಿ ತೋಪು ಹಾಗೂ ಅಮಾನಿಕೆರೆ ರಸ್ತೆಯಲ್ಲೂ ನೀರು ನಿಂತು ಕೆರೆಯ ಪಕ್ಕದಲ್ಲಿ ಮತ್ತೊಂದು ಕೆರೆ ನಿರ್ಮಾಣವಾದಂತಾಗಿತ್ತು.
ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಾಣವಾಗಿರುವ ಅಂಡರ್ ಪಾಸ್ ನಿರ್ಮಾಣವಾದ ಮೇಲೆ ನನಗೂ, ಅಂಡರ್ ಪಾಸ್ಗೂ ಸಂಬಂಧವಿಲ್ಲ ಎಂಬಂತೆ ನಡೆದುಕೊಳ್ಳುತ್ತಾ ಇದೆ.
ಪ್ರಾರಂಭದಲ್ಲೆ ಈ ರೀತಿಯಾಗಿದ್ದು ಮಳೆಗಾಲ ಪ್ರಾರಂಭಕ್ಕೂ ಮುನ್ನ ಎಚ್ಚೆತ್ತು. ಶೆಟ್ಟಿಹಳ್ಳಿ, ಮಾರುತಿನಗರ, ನೃಪತುಂಗ ಬಡಾವಣೆ, ಜಯನಗರ, ಬಡಾವಣೆಗಳ ಜನರ ಬವಣೆಯನ್ನು ಈಗಲಾದರೂ ಸಂಬಂಧಪಟ್ಟವರು ಗಮನಿಸಿ ಅಂಡರ್ ಪಾಸ್ಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕಿದೆ.
ನಗರದ ಹಲವಾರು ಕಡೆ ಮನೆಗಳು ಕುಸಿದಿದ್ದು, ದಿಬ್ಬೂರು, ಬಾವಿಕಟ್ಟೆ ಕಲ್ಯಾಣ ಮಂಟಪ ಮುಂತಾದೆಡೆ ಪ್ರವಾಹದಂತೆ ನೀರು ಹರಿಯುತ್ತಿರುವುದುನ್ನು ಕಂಡ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಜನರ ಸಮಸ್ಯೆ ಕೇಳದ ಶಾಸಕ ತುಮಕೂರು ನಗರ ಕ್ಷೇತ್ರದ ಅಭ್ಯರ್ಥಿ ಜ್ಯೋತಿಗಣೇಶ್ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದು, ಮಳೆಯಿಂದ ಸಮಸ್ಯೆ ಎದುರಿಸುತ್ತಿರುವ ಜನರ ಕಷ್ಟ ಕೇಳುತ್ತಿಲ್ಲ, ಮಳೆಯಿಂದ ಹಾನಿ ಪ್ರದೇಶಗಳ ಕಡೆ ತಿರುಗಿ ನೋಡಿಲ್ಲ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗ್ರಾಮೀಣ ಭಾಗದಲ್ಲೂ ಭರ್ಜರಿ ಮಳೆ
ಇಡೀ ರಾತ್ರಿ ವರ್ಷಧಾರೆ ಸುರಿದಿದ್ದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ತಾಕುಗಳು, ಅಡಿಕೆ, ತೆಂಗಿನ ತೋಟಗಳು ಜಲಾವೃತಗೊಂಡರೂ ಸಹ ತೋಟಗಳು ಮಳೆಯಿಂದಾಗಿ ನಳನಳಿಸುತ್ತಿವೆ.
ರಾತ್ರಿ ಧಾರಾಕಾರವಾಗಿ ಸುರಿದ ಭರಣಿ ಮಳೆಯಿಂದ ಕೃಷಿ ಚಟುವಟಿಕೆ ಆರಂಭಿಸಲು ಶುಭ ಸೂಚನೆಯಾಗಿದೆ ಎಂಬುದು ರೈತರ ಸಂತಸದ ಮಾತು.
Comments are closed.