ತುಮಕೂರಿಗೆ ನರೇಂದ್ರ ಮೋದಿ ಆಗಮನ ಇಂದು

ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ- ಸಾವಿರಾರು ಕಾರ್ಯಕರ್ತರು ಸೇರುವ ನಿರೀಕ್ಷೆ

191

Get real time updates directly on you device, subscribe now.


ತುಮಕೂರು: ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೇ 5 ರಂದು ತುಮಕೂರು ನಗರಕ್ಕೆ ಆಗಮಿಸಲಿದ್ದು, ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಮೋದಿ ಆಗಮನಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದ್ದು, ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆ ಹಾಗೂ ಪೆಂಡಾಲ್ ನಿರ್ಮಿಸಲಾಗಿದೆ. ನಾಳೆ ಸಂಜೆ 4.30ಕ್ಕೆ ತುಮಕೂರು ವಿವಿ ಹೆಲಿಪ್ಯಾಡ್ ಗೆ ಆಗಮಿಸುವ ನರೇಂದ್ರ ಮೋದಿ ಅವರು ಅಲ್ಲಿಂದ ಕಾರ್ ಮೂಲಕ ಸರ್ಕಾರಿ ಕಾಲೇಜು ಮೈದಾನದ ವೇದಿಕೆಗೆ ಆಗಮಿಸಲಿದ್ದಾರೆ.

ಈಗಾಗಲೇ ಸಕಲ ಭದ್ರತೆ ಕೈಗೊಳ್ಳಲಾಗಿದೆ, ಭದ್ರತೆ ದೃಷ್ಟಿಯಿಂದ ಮೋದಿ ಸಾಗುವ ರಸ್ತೆಯ ಅಕ್ಕಪಕ್ಕದ ಅಂಗಡಿಗಳನ್ನು ಬಂದ್ ಮಾಡುವಂತೆ ಪೊಳಿಸರು ಸೂಚಿಸಿದ್ದಾರೆ. ಬಾಂಬ್ ಸ್ಕ್ಯಾಡ್ ಟೀಮ್, ಅರೆ ಸೇನಾ ಸಿಬ್ಬಂದಿ ಸೇರಿದಂತೆ ಸಾವಿರಾರು ಪೊಲೀಸರನ್ನು ನಿಯೋಜಿಸಲಾಗಿದೆ.
ಕಳೆದ ಎರಡು ದಿನದಿಂದ ಹೆಲಿಕಾಪ್ಟರ್ ಗಳನ್ನು ತುಮಕೂರು ವಿವಿ ಹೆಲಿಪ್ಯಾಡ್ ಗೆ ಆಗಮಿಸಿ ರಿಹರ್ಸಲ್ ನಡೆಸಿದ್ದು, ಹೆಲಿಕಾಪ್ಟರ್ ಲ್ಯಾಂಡಿಂಗ್ ಮತ್ತು ಟೇಕಾಫ್ ಆಗುವುದನ್ನು ನೋಡಲು ಜನ ಮುಗಿ ಬೀಳುತ್ತಿದ್ದರು.
ಸರ್ಕಾರಿ ಕಾಲೇಜು ಮೈದಾನದಲ್ಲಿ ಸಿದ್ಧತೆ ವೀಕ್ಷಿಸಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ ಮಾತನಾಡಿ, ಜಿಲ್ಲೆಯ 11 ಕ್ಷೇತ್ರ ಮತ್ತು ನೆಲಮಂಗಲ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪರ ಪ್ರಧಾನಿ ನರೇಂದ್ರ ಮೋದಿ ಮತಯಾಚನೆ ನಡೆಸಲಿದ್ದಾರೆ ಎಂದರು.

12 ಕ್ಷೇತ್ರಗಳ ಕಾರ್ಯಕರ್ತರು ಹಾಗೂ ಮುಖಂಡರು ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಮೇ 5 ರಂದು 4.30ಕ್ಕೆ ಆಗಮಿಸುವ ಪ್ರಧಾನಿ ಅವರು 6 ಗಂಟೆಯವರೆಗೆ ತುಮಕೂರು ನಗರದಲ್ಲಿ ಇರಲಿದ್ದು, ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದು, ಮಧ್ಯಾಹ್ನ 2 ಗಂಟೆಯಿಂದಲೇ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ಪ್ರಧಾನಿ ಮೋದಿ ಅವರ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾರ್ವಜನಿಕರು ಹಾಗೂ ಕಾರ್ಯಕರ್ತರು ಮೋದಿ ಅವರು ಆಗಮಿಸುವ 2 ಗಂಟೆ ಮೊದಲೇ ಕಾರ್ಯಕ್ರಮದ ಸ್ಥಳದಲ್ಲಿ ಹಾಜರಾಗಬೇಕು. ಸುರಕ್ಷತಾ ದೃಷ್ಟಿಯಿಂದ ಸಾರ್ವಜನಿಕರಿಗೆ ನೀರಿನ ಬಾಟಲಿ ಮತ್ತು ಬ್ಯಾಗ್ ತರದಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ 11 ಅಭ್ಯರ್ಥಿಗಳು ಹಾಗೂ ಸಂಸದರು ಭಾಗವಹಿಸಲಿದ್ದಾರೆ. ಬಿಜೆಪಿ ಕಾರ್ಯಕರ್ತರು ಹಾಗೂ ಮಹಿಳಾ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದರು.

Get real time updates directly on you device, subscribe now.

Comments are closed.

error: Content is protected !!