ಶಿರಾ: ರಾಜ್ಯದಲ್ಲಿ ಪಂಚರತ್ನ ಯೋಜನೆ ಜಾರಿಗೊಂಡರೆ ಪ್ರತಿ ಕುಟುಂಬವು ನೆಮ್ಮದಿಯಿಂದ ಬದುಕಲು ಸಾಧ್ಯವಿದೆ. ಅದಕ್ಕಾಗಿ ತಂದೆ ತಾಯಿಯರು ಯುವಕರ ಸ್ನೇಹಿತರ ಆಶೀರ್ವಾದ ಪಡೆಯಲು ಬಂದಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಗುರುವಾರ ಶಿರಾದಲ್ಲಿ 2023ರ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಬೃಹತ್ ಪ್ರಚಾರ ಸಭೆ ನಡೆಸಿ ಮಾತನಾಡಿ, ರೈತರ, ಅಲ್ಪಸಂಖ್ಯಾತರ, ಬಡವರ ಒಳಿತಿಗಾಗಿ ಅನಾರೋಗ್ಯದ ನಡುವೆಯೂ ಎರಡು ಬಾರಿ ಹೇಳಿದೆ ಚಿಕಿತ್ಸೆಗೆ ಒಳಗಾಗಿದ್ದರೂ ನಿಮ್ಮ ಬದುಕು ಸರಿಪಡಿಸಲು ಸ್ವತಂತ್ರ ಸರ್ಕಾರ ತರಲು ಹೋರಾಡುತ್ತಿದ್ದೇನೆ. ಶೇ.4 ರಷ್ಟು ಮೀಸಲಾತಿ ಮುಸಲ್ಮಾನರಿಗೆ ಕೊಟ್ಟಿದ್ದು ದೇವೇಗೌಡರು, ಆ ಮೀಸಲಾತಿ ಹಾಗೆಯೇ ಮುಂದುವರೆಯಲಿದೆ. ಬಿಜೆಪಿ ಆಟ ನಡೆಯೋದಿಲ್ಲ, ನಿಮ್ಮ ಆಶೀರ್ವಾದದಿಂದ ಜೆಡಿಎಸ್ ಸರ್ಕಾರ ಬರುವುದನ್ನು ಯಾರಿಂದಲೂ ತಪ್ಪಿಸಲಾಗುವುದಿಲ್ಲ. ಕುಮಾರಸ್ವಾಮಿ ಗೆಲ್ಲಬೇಕು ಎಂದರೆ ನೀವು ಜೆಡಿಎಸ್ ಅಭ್ಯರ್ಥಿ ಉಗ್ರೇಶ್ ಕ್ರಮ ಸಂಖ್ಯೆ ಒಂದರ ಮುಂದೆ ಮತ ಚಲಾಯಿಸುವ ಮೂಲಕ ಬಲ ನೀಡಬೇಕು ಎಂದು ಕೋರಿದರು.
ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ ವರ್ಷಕ್ಕೆ ಐದು ಸಿಲಿಂಡರ್ ಉಚಿತವಾಗಿ ಕೊಡುತ್ತೇವೆ. 60 ವರ್ಷ ಮೀರಿದ ಹಿರಿಯರಿಗೆ ಮಾಸಿಕ ಐದು ಸಾವಿರ ರೂ., ವಿಧವೆಯರು, ವಿಕಲಚೇತನರಿಗೆ ಮಾಸಿಕ 2500 ರೂ. ನೀಡಲಾಗುವುದು. ನಿರುದ್ಯೋಗ ನೀಗಿಸಲು ಜಿಲ್ಲೆಗೆ ಒಂದು ಲಕ್ಷ ಯುವಕರಿಗೆ ಉದ್ಯೋಗ ಒದಗಿಸಿ ಕೊಡುತ್ತೇನೆ. ಪದವಿ ಕಾಲೇಜಿಗೆ ಹೋಗುವ ಹೆಣ್ಣು ಮಕ್ಕಳಿಗೆ ಎಲೆಕ್ಟ್ರಿಕ್ ಸ್ಕೂಟಿ ನೀಡುತ್ತೇನೆ ಎಂದು ತಿಳಿಸಿದರು.
ಜನರ ಆರೋಗ್ಯಕ್ಕಾಗಿ 50 ಲಕ್ಷದವರೆಗೆ ರಾಜ್ಯ ಸರ್ಕಾರ ಭರಿಸಲು ಕ್ರಮ ಕೈಗೊಳ್ಳುತ್ತೇನೆ. ರೈತರ ಸ್ವಾವಲಂಬನೆಗಾಗಿ ರೈತರ ಸಾಲ ಮನ್ನಾಕ್ಕೆ ಕ್ರಮ ಕೈಗೊಳ್ಳುವುದು ಅಲ್ಲದೆ ಕೇಂದ್ರದ ನೀತಿಯಿಂದ ಸಂಕಷ್ಟ ಕೊಳಗಾಗಿರುವ ರೈತರ ನೆರವಿಗಾಗಿ ಎಕರೆಗೆ ರೂ. 10,000 ದಂತೆ 10 ಎಕರೆವರೆಗೆ ರಸಗೊಬ್ಬರ ಬೀಜಕ್ಕಾಗಿ ನೀಡುವುದು. ಭೂಮಿ ಇಲ್ಲದ ಕೂಲಿ ಕಾರ್ಮಿಕರ ಕುಟುಂಬಗಳಿಗೆ 2000 ಕೊಡುವ ಯೋಜನೆ, ಸ್ತ್ರೀಶಕ್ತಿ, ಸ್ವಸಹಾಯ ಗುಂಪುಗಳ ಸಾಲ ಮನ್ನಾ ಮಾಡುವುದು ನಮ್ಮ ಕಾರ್ಯಕ್ರಮ ಎಂದು ಭರವಸೆ ನೀಡಿದರು.
ಪಕ್ಷದ ಅಭ್ಯರ್ಥಿ ಆರ್.ಉಗ್ರೇಶ್ ಮಾತನಾಡಿ, 35 ವರ್ಷಗಳಿಂದ ಸತತವಾಗಿ ಕಾರ್ಯಕರ್ತನಾಗಿ ಕೆಲಸ ಮಾಡಿರುವ ನನ್ನನ್ನು ಪಕ್ಷ ಗುರುತಿಸಿ ಟಿಕೆಟ್ ಘೋಷಿಸಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಲ್ಲಿ ಬಲಾಢ್ಯರು ಕಣದಲ್ಲಿದ್ದಾರೆ. ಶಿರಾ ಜನರು ಈ ಬಡ ರೈತನ ಮಗ, ಸಾಮಾನ್ಯರಲ್ಲಿ ಸಾಮಾನ್ಯನಾದ ನನ್ನನ್ನು ಕೈಹಿಡಿಯಬೇಕು. ನಿಮ್ಮ ಮತಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ರೇಷ್ಮೆ ನಿಗಮದ ಮಾಜಿ ಅಧ್ಯಕ್ಷ ಎಸ್.ಆರ್.ಗೌಡ ಮಾತನಾಡಿ ರಾಜ್ಯದಲ್ಲಿ 2023ರ ಚುನಾವಣೆ ರೈತರ ಚುನಾವಣೆ ಆಗಬೇಕು. ಜೆಡಿಎಸ್ ಪಕ್ಷ ಎಂದರೆ ಅದು ರೈತರ ಪಕ್ಷ, ರೈತರು, ಮಳೆಯರು, ಯುವಕರ ಏಳಿಗೆಗಾಗಿ ರಾಜ್ಯದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕು. ಆದ್ದರಿಂದ ಮತದಾರರು ಸಾಮಾನ್ಯರಲ್ಲಿ ಸಾಮಾನ್ಯರಾದ ಆರ್.ಉಗ್ರೇಶ್ ಅವರನ್ನು ಗೆಲ್ಲಿಸಿ ರಾಜ್ಯದಲ್ಲಿ ಹೆಚ್.ಡಿ.ಕುಮಾರ ಸ್ವಾಮಿ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಪಕ್ಷದ ತಾಲೂಕು ಅಧ್ಯಕ್ಷ ಸತ್ಯಪ್ರಕಾಶ್, ಕಲ್ಕೆರೆ ರವಿಕುಮಾರ್, ಎಸ್.ರಾಮಕೃಷ್ಣ, ನಗರಸಭೆ ಅಧ್ಯಕ್ಷ ಬಿ ಅಂಜಿನಪ್ಪ, ಮುದಿಮಡು ರಂಗಶಾಮಣ್ಣ, ಸೋಮಶೇಖರ್, ಆರ್.ರಾಮು, ರಹಮತ್ ಉಲ್ಲಾ ಖಾನ್ ಮತ್ತಿತರರು ಇದ್ದರು.
Comments are closed.