ಪರೋಕ್ಷವಾಗಿ ಡಿಕೆಶಿ ವಿರುದ್ಧ ಹೆಚ್ ಡಿಕೆ ವಾಗ್ದಾಳಿ

ಕನಕಪುರದವರು ಸಿಎಂ ಆದ್ರೆ ಮತ್ತಷ್ಟು ಲುಲು ಮಾಲ್ ಸ್ಥಾಪನೆ ಆಗಲಿವೆ

111

Get real time updates directly on you device, subscribe now.


ಕುಣಿಗಲ್: ತುಮಕೂರು ಜಿಲ್ಲೆ ಜೆಡಿಎಸ್ ಭದ್ರಕೋಟೆಯಾಗಿದ್ದು ಈ ಹಿಂದೆ ದೇವೇಗೌಡರಿಗೆ ಶಕ್ತಿ ತುಂಬಿದ್ದ ಜಿಲ್ಲೆ. ಈ ಬಾರಿ ಕುಣಿಗಲ್ ಸೇರಿದಂತೆ ಜಿಲ್ಲೆಯಲ್ಲಿ ಹೆಚ್ಚಿನ ಸ್ಥಾನದಲ್ಲಿ ಜೆಡಿಎಸ್ ಗೆಲ್ಲಿಸುವ ಮೂಲಕ ದೇವೇಗೌಡರ ಹುಟ್ಟುಹಬಕ್ಕೆ ಕೊಡುಗೆ ನೀಡಬೇಕೆಂದು ಮಾಜಿ ಸಿಎಂ ಕುಮಾರಸ್ವಾಮಿ ಮನವಿ ಮಾಡಿದರು.

ಶುಕ್ರವಾರ ಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ಡಾ.ರವಿ ಪರ ಮತಯಾಚನೆ ಮಾಡಿ ಮಾತನಾಡಿ, ನಾನು ಎರಡು ಬಾರಿ ಸಿಎಂ ಆಗಿದ್ದೇನೆ. ಆದರೆ ಸಮ್ಮಿಶ್ರ ಸರ್ಕಾರದ ಪರಿಣಾಮ ಪಕ್ಷದ ಜನಪರ ಯೋಜನೆ ಜಾರಿ ಮಾಡಲು ಆಗಿಲ್ಲ. ಈ ಬಾರಿಯಾದರೂ ಬಹುಮತದ ಜೆಡಿಎಸ್ ಸರ್ಕಾರ ರಚನೆಗೆ ಜೆಡಿಎಸ್ ಬೆಂಬಲಿಸಿ, ಹಿಂದೆ ಜಿಲ್ಲೆಯ 11 ಸ್ಥಾನದ ಪೈಕಿ 10 ಸ್ಥಾನದಲ್ಲಿ ಜೆಡಿಎಸ್ ಗೆಲ್ಲಿಸಿ ಜಿಲ್ಲೆಯ ಜನ ಜೆಡಿಎಸ್ ಆಶೀರ್ವಾದ ಮಾಡಿದ್ದರು. ಈ ಬಾರಿ ಇತಿಹಾಸ ಮರು ಕಳಿಸಲು ಸಹಕರಿಸಿ, ರೈತರ ಸಾಲ ಮನ್ನಾ ಯೋಜನೆ, ಬಡ ಮಹಿಳೆಯರ ಸ್ತ್ರೀಶಕ್ತಿ ಸಾಲಮನ್ನಾ, ವರ್ಷಕ್ಕೆ ಐದು ಉಚಿತ ಸಿಲೆಂಡರ್, ತಾಲೂಕು ಹಾಗೂ ರಾಜ್ಯದ ಸಮಗ್ರ ನೀರಾವರಿ ಯೋಜನೆ ಅನುಷ್ಠಾನ, ಉಚಿತ ಶಿಕ್ಷಣ, ವೈದ್ಯಕೀಯ ವ್ಯವಸ್ಥೆ, ರೈತರು ಸಾಲ ಮಾಡಿ ಆತ್ಮಹತ್ಯೆ ತಪ್ಪಿಸಲು ಎಕರೆಯೊಂದಕ್ಕೆ ಹತ್ತು ಸಾವಿರದಂತೆ ಸಹಾಯಧನ, ಭೂ ರಹಿತರಿಗೆ ಮಾಸಾಶನ ಇತರೆ ಜನಪರ ಯೋಜನೆ ಅನುಷ್ಠಾನಕ್ಕೆ ಜೆಡಿಎಸ್ ಸರ್ಕಾರ ರಚನೆಯಾಗುವ ನಿಟ್ಟಿನಲ್ಲಿ ಮತದಾರರು ಆಶೀರ್ವಾದ ಮಾಡಬೇಕು ಎಂದರು.

ಜೈಲಿಗೆ ಹೋಗಿ ಬಂದಿದ್ದೆ ಸಾಧನೆ ಎಂದುಕೊಂಡಿರುವ ಕನಕಪುರದವರೊಬ್ಬರು ಈ ಬಾರಿ ಸಿಎಂ ಆಗುತ್ತೇನೆ. ಕಾಂಗ್ರೆಸ್ ಗೆ ಮತ ನೀಡಿ ಎನ್ನುತ್ತಿದ್ದಾರೆ. ಅವರು ಸಿಎಂ ಆದರೆ ಮತ್ತಷ್ಟು ಲುಲು ಮಾಲ್ ಸ್ಥಾಪನೆ ಅಷ್ಟೆ, ಅವರ ರಾಜಕೀಯ ಇತಿಹಾಸದಲ್ಲಿ ಎಂದಿಗೂ ಬಡಜನರ ಬಗ್ಗೆ ಚಿಂತನೆ ಮಾಡಿದ್ದೇ ಇಲ್ಲ. ಹೀಗಾಗಿ ಜನರು ಕಾಂಗ್ರೆಸ್ ಗೆ ಮತ ಹಾಕಿ ಭ್ರಷ್ಟರನ್ನು, ಕೆಟ್ಟವರನ್ನು ಅಧಿಕಾರದಲ್ಲಿ ಕೂರಿಸುವುದು ಅರ್ಥ ಇಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳು ಉತ್ತರ ಭಾರತದವರನ್ನು ಸ್ಟಾರ್ ಪ್ರಚಾರಕರೆಂದು ಕರೆತಂದು ಪ್ರಚಾರ ಮಾಡುತ್ತಿದ್ದಾರೆ. ಜೆಡಿಎಸ್ ಪ್ರಾದೇಶಿಕ ಪಕ್ಷ, ನಮಗೆ ರಾಜ್ಯದ ಮತದಾರರೆ ಸ್ಟಾರ್ ಪ್ರಚಾರಕರು, ಕಾಂಗ್ರೆಸ್ ನಮ್ಮ ಪಕ್ಷವನ್ನು ಬಿಜೆಪಿ ಬಿ ಟೀಂ ಎಂತಲೂ, ಬಿಜೆಪಿ ನಮ್ಮ ಪಕ್ಷವನ್ನು ಕಾಂಗ್ರೆಸ್ ಬಿ ಟೀಂ ಎಂತಲೂ ಹೇಳುತ್ತಾರೆ. ಆದರೆ ವಾಸ್ತವವಾಗಿ ಜೆಡಿಎಸ್ ಕರ್ನಾಟಕ ಮತದಾರರು ಹೇಳಿದಂತೆ ಕೇಳುವ ಟೀಂ ಆಗಿದೆ. ರಾಜ್ಯದ ಸ್ವಾಭಿಮಾನ ಕಾಪಾಡಲು, ಬಡ ರೈತರ, ಬಡ ಜನರ ಪರ ಚಿಂತನೆ ಮಾಡುವ ಪಕ್ಷ ಜೆಡಿಎಸ್ ತಾಲೂಕಿನ ಜನರು ಜೆಡಿಎಸ್ ಅಭ್ಯರ್ಥಿಗೆ ಆಶೀರ್ವಾದ ಮಾಡಿ ಮತ ನೀಡಬೇಕೆಂದರು.
ಜೆಡಿಎಸ್ ಅಭ್ಯರ್ಥಿ ಡಾ.ರವಿ ಮಾತನಾಡಿ, ತಾಲೂಕಿನಲ್ಲಿ ಕನಕಪುರದವರು ಬಂದು ತಾಲೂಕಿನ ಜನರ ಸ್ವಾಭಿಮಾನ ಪ್ರಶ್ನಿಸುತ್ತಿದ್ದಾರೆ. ಸಂಸದರು ತಾಲೂಕಿನಲ್ಲಿ ಗಂಡಸರು ಯಾರೂ ಇಲ್ಲ ಎನ್ನುತ್ತಿದ್ದಾರೆ. ಇದು ತಾಲೂಕಿನ ಜನರ, ಮತದಾರರ ಸ್ವಾಭಿಮಾನದ ಪ್ರಶ್ನೆ, ತಾಲೂಕಿನ ಗಂಡಸರು ಏನೆಂದು ಹತ್ತನೆ ತಾರೀಕು ನಡೆಯುವ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿಸಿ, ಕಾಂಗ್ರೆಸ್ ಗೆ ತಕ್ಕ ಉತ್ತರ ನೀಡಬೇಕೆಂದರು.

ರಾಜ್ಯಉಪಾಧ್ಯಕ್ಷ ಶಫಿ ಅಹಮದ್, ಮಾಜಿ ಸಚಿವ ಡಿ.ನಾಗರಾಜಯ್ಯ ಮಾತನಾಡಿದರು, ತಾಲೂಕು ಜೆಡಿಎಸ್ ಅಧ್ಯಕ್ಷ ಜಗದೀಶ್, ಮುಖಂಡರಾದ ಲೋಕೇಶ, ಹರೀಶ್, ಹರೀಶ ನಾಯಕ, ಜಿಯಾವುಲ್ಲಾ, ಅನ್ಸರ್ಪಾಶ, ಹೇಮರಾಜು, ಸುಬಾನ್ ಖುರೇಷಿ, ಲಿಯಾಖತ್, ಪ್ರಕಾಶ್, ಮಹಾದೇವ, ಶಿವಣ್ಣ, ಪ್ರಸನ್ನ, ನಿಖಿಲ್ಗೌಡ, ಮನೋಜ, ಮಾರುತಿ, ರಾಘು, ನಾಗರಾಜ, ಸುರೇಶ, ವಸಂತ, ಗಂಗಾಧರ, ರುದ್ರೇಶ ಇತರರು ಇದ್ದರು.

ಎಲೆಕ್ಟ್ರಾನಿಕ್ ಮಾಧ್ಯಮಗಳ ವಿರುದ್ಧ ಹೆಚ್ಡಿಕೆ ಕಿಡಿ
ಕುಣಿಗಲ್: ಜೆಡಿಎಸ್ ಅಬ್ಯರ್ಥಿ ಡಾ.ರವಿ ಪರ ಮತಯಾಚನೆಗೆ ಆಗಮಿಸಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಎಲೆಕ್ಟ್ರಾನಿಕ್ ಮಾಧ್ಯಮಗಳ ವಿರುದ್ಧ ಹರಿಹಾಯ್ದರು.
ಚುನಾವಣೆ ಆರಂಭದಲ್ಲಿ ಮಾಧ್ಯಮಗಳು ಕಾಂಗ್ರೆಸ್ 110 ರಿಂದ 120, ಬಿಜೆಪಿ 80 ರಿಂದ 90 ಜೆಡಿಎಸ್ 29 ರಿಂದ 30 ಎಂದು ಬಿಂಬಿಸಿದ್ದವು. ಆದರೆ ಪ್ರಧಾನಿ ಮೋದಿ, ಅಮಿತ್ ಶಾ ಭೇಟಿ ನಂತರ ಬಿಜೆಪಿ 110- 120, ಕಾಂಗ್ರೆಸ್ 90- 100 ಹಾಗೂ ಜೆಡಿಎಸ್ 20- 30 ಎಂದು ಬಿತ್ತರಿಸುತ್ತಿದ್ದಾರೆ. ಇವರಿಗೆ ನಾನು ಹತ್ತು ಕೋಟಿ ಖರ್ಚು ಮಾಡಿದರೆ ಜೆಡಿಎಸ್ ಸಹ ಅಧಿಕ ಸ್ಥಾನ ಎಂದು ಬಿಂಬಿಸುತ್ತಾರೆ. ಇಂತಹ ಮಾಧ್ಯಮಗಳು ಸಾಮಾಜಿಕ ಜವಾಬ್ದಾರಿ ಮರೆತಿವೆ. ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ 60ಕ್ಕೂ ಹೆಚ್ಚು ಸ್ಥಾನ ಪಡೆಯುತ್ತದೆ. ಮಾಧ್ಯಮಗಳ ಇಂತಹ ಹೊಣೆಗೇಡಿ ವರ್ತನೆ ಖಂಡನೀಯ ಎಂದರು.

Get real time updates directly on you device, subscribe now.

Comments are closed.

error: Content is protected !!