ಬಿಜೆಪಿಯಿಂದ ಮಾತ್ರ ರಾಜ್ಯದ ಅಭಿವೃದ್ಧಿ

ಕಾಂಗ್ರೆಸ್, ಜೆಡಿಎಸ್ ಜನರನ್ನು ಲೂಟಿ ಮಾಡಿವೆ: ಪ್ರಧಾನಿ ಮೋದಿ ವಾಗ್ದಾಳಿ

202

Get real time updates directly on you device, subscribe now.


ತುಮಕೂರು: ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಬೃಹತ್ ಸಂಖ್ಯೆಯಲ್ಲಿ ಸೇರಿದ ಜನರಿಗೆ ನಮಸ್ಕರಿಸಿ ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಿದ್ಧಗಂಗಾ ಮಠ, ಆದಿಚುಂಚನಗಿರಿ ಮಠದ ಶ್ರೀಗಳನ್ನು ಸ್ಮರಿಸಿದರು. ಸಾಧು ಸಂತರ ಹಾಗೂ ಜನರ ಆಶೀರ್ವಾದದಿಂದ ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ. ರೋಡ್ ಶೋ ಹಾಗೂ ಸಮಾವೇಶದಲ್ಲಿ ಸೇರಿದ ಜನಸಂಖ್ಯೆ ನೋಡಿದಾಗಲೇ ಬಿಜೆಪಿ ಸರ್ಕಾರ ಖಚಿತ ಎಂಬುದನ್ನು ತೋರಿಸುತ್ತದೆ ಎಂದರು.

ಗ್ರಾಮೀಣ ಜನರನ್ನು ಲೂಟಿ ಮಾಡಿದ ಹಿರಿಮೆ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಇದೆ, ಬಿಜೆಪಿ ಅಧಿಕಾರದಲ್ಲಿದ್ದಾಗ ಬಡವರು ಮತ್ತು ಗ್ರಾಮೀಣ ಪ್ರದೇಶಗಳೆರಡೂ ದಾಖಲೆ ಮಟ್ಟದಲ್ಲಿ ಅಭಿವೃದ್ಧಿಯಾಗುತ್ತಿವೆ. ರೈತರ ಬ್ಯಾಂಕ್ ಖಾತೆಗೆ ನೇರವಾಗಿ 2.5 ಲಕ್ಷ ಕೋಟಿ ಹಣ ವರ್ಗಾವಣೆ ಮಾಡಿದ್ದೇವೆ. ತುಮಕೂರಿನಲ್ಲಿ 3 ಲಕ್ಷ ರೈತರು ಸುಮಾರು 700 ಕೋಟಿ ರೂ. ಪಡೆದಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಕಾಂಗ್ರೆಸ್ ತುಷ್ಟೀಕರಣದ ಗುಲಾಮ ಆಗಿ ಪರಿವರ್ತನೆಗೊಂಡಿದೆ. ಕರ್ನಾಟಕವನ್ನು ಜೆಡಿಎಸ್, ಕಾಂಗ್ರೆಸ್ ಯಾವುದೇ ಅಭಿವೃದ್ಧಿ ಮಾಡಿಲ್ಲ. ಬಿಜೆಪಿಯಿಂದ ಮಾತ್ರ ಕರ್ನಾಟಕ ಜೊತೆ ದೇಶದ ಅಭಿವೃದ್ಧಿ ಸಾಧ್ಯ ಎಂದರು.

ಪವಿತ್ರ ಭೂಮಿ ಸಿದ್ಧಗಂಗಾ ಶ್ರೀಗಳ ಸಾನಿಧ್ಯಕ್ಕೆ ಬಂದಿದ್ದೇನೆ ಎಂದು ಹೇಳಿದ ಮೋದಿ ಬಿಜೆಪಿ ಅನ್ನ, ಅಕ್ಷರ, ಆದಾಯ ಇತ್ಯಾದಿ 7 ಅಭಿವೃದ್ಧಿಯ ಸಂಕಲ್ಪ ಹೊಂದಿದೆ. ತುಮಕೂರಿನಲ್ಲಿ ಅನೇಕ ಯೋಜನೆಗಳ ಶಿಲಾನ್ಯಾಸ, ಉದ್ಘಾಟನೆ, ಅಭಿವೃದ್ಧಿ ಯೋಜನೆ ಉದ್ಘಾಟಿಸುವ ಸೌಭಾಗ್ಯ ನನಗೆ ಸಿಕ್ಕಿದೆ. ಬಿಜೆಪಿ ಅಭಿವೃದ್ಧಿ ಕಾರ್ಯಗಳಿಗೆ ವೇಗದ ಗತಿ ನೀಡಿದೆ ಎಂದರು.
ದೇಶದಲ್ಲಿ ಬಡವರಿಗೆ ಮನೆಗಳನ್ನು ನಿರ್ಮಾಣ ಮಾಡಿಕೊಟ್ಟಿದ್ದೇವೆ. ಮಹಿಳೆಯರ ಕಲ್ಯಾಣಕ್ಕಾಗಿ ಬಿಜೆಪಿ ಸರ್ಕಾರ ಹಲವು ಯೋಜನೆ ತಂದಿದೆ. 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ವೇಗ ಹೆಚ್ಚಿದೆ ಎಂದು ಹೇಳಿದ ಮೋದಿ, 3 ಕೋಟಿಗೂ ಹೆಚ್ಚು ಮನೆಗಳು ಮಹಿಳೆಯರ ಹೆಸರಿನಲ್ಲಿವೆ. ದೇಶದ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದೇವೆ. ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆ ಮೂಲಕ ರಸ್ತೆ ಅಭಿವೃದ್ಧಿ ಮಾಡುತ್ತಿದ್ದೇವೆ. ತುಮಕೂರು ಜಿಲ್ಲೆಯ 1.5 ಲಕ್ಷ ಕುಟುಂಬಗಳಿಗೆ ನಲ್ಲಿ ನೀರು ಕಲ್ಪಿಸಿದ್ದೇವೆ ಎಂದರು.

ಬಡವರ ಮಕ್ಕಳ ಏಳಿಗೆ ಸಹಿಸದ ಕಾಂಗ್ರೆಸ್
ಬಡವರ ಮಕ್ಕಳು ಏಳಿಗೆಯಾಗಬೇಕು ಎಂಬುವುದು ನಮ್ಮ ಉದ್ದೇಶವಾಗಿದೆ. ಆದರೆ ಕಾಂಗ್ರೆಸ್ನವರು ಬಡವರ ಮಕ್ಕಳ ಉದ್ಧಾರ ಸಹಿಸುವುದಿಲ್ಲ, ಕಾಂಗ್ರೆಸ್, ಜೆಡಿಎಸ್ ಕರ್ನಾಟಕದ ಯುವಕರ ಭವಿಷ್ಯಕ್ಕೆ ತಡೆಯೊಡ್ಡುತ್ತಿವೆ. ಕರ್ನಾಟಕದ ಯುವಕರ ಭವಿಷ್ಯದ ಬಗ್ಗೆ ಅವರಿಗೆ ದೂರದೃಷ್ಟಿ ಇಲ್ಲ. ಕಾಂಗ್ರೆಸ್ 85% ಕಮಿಷನ್ ಪಡೆದು ದೇಶವನ್ನು ಹಾಳು ಮಾಡಿದೆ ಎಂದು ಟೀಕಿಸಿದರು.

ವೇದಿಕೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಸಭಾ ಸದಸ್ಯ ಜಗ್ಗೇಶ್, ಸಚಿವರಾದ ಜೆ.ಸಿ.ಮಾಧುಸ್ವಾಮಿ, ಬಿ.ಸಿ.ನಾಗೇಶ್, ಸಂಸದ ಜಿ.ಎಸ್.ಬಸವರಾಜು, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಮಸಾಲೆ ಜಯರಾಮ್, ಮಾಜಿ ಶಾಸಕ ಸುರೇಶ್ ಗೌಡ, ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ, ಪಾವಗಡ ಬಿಜೆಪಿ ಅಭ್ಯರ್ಥಿ ಕೃಷ್ಣನಾಯ್ಕ ಇತರರು ಇದ್ದರು.

ರೋಡ್ ಶೋನಲ್ಲಿ ಜನಸಾಗರ
ಸಮಾವೇಶಕ್ಕೂ ಮುನ್ನ ತುಮಕೂರು ವಿವಿ ಹೆಲಿಪ್ಯಾಡ್ ನಿಂದ ಸಮಾವೇಶದ ಸ್ಥಳದವರೆಗೆ ಮೋದಿ ರೋಡ್ ಶೋ ನಡೆಸಿದರು, ಕಾರು ಏರಿ ನಿಂತ ಮೋದಿ ಜನರತ್ತ ಕೈ ಬೀಸಿದರು, ಮೋದಿಯನ್ನು ಕಂಡ ಜನರು ಹರ್ಷೋದ್ಘಾರ ಮೊಳಗಿಸಿ ಜಯಕಾರ ಕೂಗಿದರು, ರಸ್ತೆಯುತ್ತಕ್ಕೂ ಸಾವಿರಾರು ಜನ ಜಮಾಯಿಸಿ ಮೋದಿ ಕಂಡು ಸಂತಸಪಟ್ಟರು.

ಜೈ ಬಜರಂಗ ಬಲಿ
ರಾಷ್ಟ್ರಕವಿ ಕುವೆಂಪು ಅವರನ್ನು ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ ರಾಷ್ಟ್ರಕವಿ ಕುವೆಂಪು ಅವರು ಓ ಲಂಕಾ ಭಯಂಕರ ಸಮೀರಕುಮಾರ ಹೇ ಆಂಜನೇಯ ಎಂದು ತಮ್ಮ ಕವನವೊಂದರಲ್ಲಿ ಆಂಜನೇಯನನ್ನು ಕುರಿತ ಹಾಡಿ ಹೊಗಳಿದ್ದಾರೆ. ಈ ನಾಡು ಆಂಜನೇಯನ ಜನ್ಮನಾಡು, ಅದೇ ನಾಡಿನಲ್ಲಿ ಕಾಂಗ್ರೆಸ್ ಗೆ ಜೈ ಬಜರಂಗ ಬಲಿ ಎಂದು ಹೇಳಿದರೆ ಸಂಕಟವಾಗುತ್ತದೆ ಎಂದರು.

Get real time updates directly on you device, subscribe now.

Comments are closed.

error: Content is protected !!