ಬಿಜೆಪಿ ಸ್ವಶಕ್ತಿ ಮೇಲೆ ಅಧಿಕಾರಕ್ಕೆ ಬರುತ್ತೆ

87

Get real time updates directly on you device, subscribe now.


ಶಿರಾ: ರಾಜ್ಯದ ಹಲವು ಸಮೀಕ್ಷೆ ಹಾಗೂ ಪಕ್ಷದ ಆಂತರಿಕ ಸಮೀಕ್ಷೆಯಲ್ಲೂ ಬಿಜೆಪಿ ಸ್ವಶಕ್ತಿ ಆಧಾರದ ಮೇಲೆ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು, ಜನರು ನಮ್ಮ ಮೇಲೆ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ ಗೌಡ ನುಡಿದರು.

ಇಲ್ಲಿನ ಪಕ್ಷದ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ಶಿರಾಕ್ಕೆ ವಿಶೇಷ ಸ್ಥಾನಮಾನ ಕಳುಹಿಸಿಕೊಟ್ಟಿದ್ದು, ಉಪ ಚುನಾವಣೆಯಲ್ಲಿ ಮದಲೂರು ಕೆರೆಗೆ ನೀರು ಹರಿಸುವುದೂ ಸೇರಿದಂತೆ ನೀಡಿದ ಎಲ್ಲಾ ವಾಗ್ದಾನ ಪೂರೈಸಿದ್ದೇವೆ. ನನ್ನನ್ನು ಒಳಗೊಂಡಂತೆ ಕ್ಷೇತ್ರದಿಂದ ಇಬ್ಬರು ಶಾಸಕರು, ಇಬ್ಬರು ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ಮಾಡಿದ್ದು, ಹಾಲಿ ಯಾದವ ಸಮುದಾಯದ ಚಂಗಾವರ ಮಾರಣ್ಣರವರು ಕಾಡುಗೊಲ್ಲ ನಿಗಮದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಲು ನಿರ್ದಿಷ್ಟ ಕಾರ್ಯಕ್ರಮ ರೂಪಿಸಿ ಪಕ್ಷ 77 ಹೊಸ ಅಭ್ಯರ್ಥಿಗಳಿಗೆ ಅವಕಾಶ ಕೊಟ್ಟಿದ್ದು, ಇದು ಕರ್ನಾಟಕದ್ದೇ ವಿಶೇಷ ಮಾದರಿ, ರಾಜಕಾರಣ ಶುದ್ಧೀಕರಿಸಲು ನಮ್ಮ ಪಕ್ಷ ಶ್ರಮಿಸುತ್ತಿದೆ. ಜನ ಬದಲಾಗಬೇಕು, ಯುವಕರು ಒಳ್ಳೆಯ ಅಭಿಪ್ರಾಯ ಇಟ್ಟುಕೊಂಡು ರಾಜಕೀಯಕ್ಕೆ ಬರಬೇಕು ಎಂದರು.

ನಮ್ಮ ವಿರೋಧ ಪಕ್ಷದವರು ಇದು ನನ್ನ ಕೊನೆಯ ಚುನಾವಣೆ ಎಂದು ಜನರ ಅನುಕಂಪ ಪಡೆಯಲು ಯತ್ನಿಸುತ್ತಿದ್ದಾರೆ. ಕೇವಲ ಅನುಕಂಪವೇ ರಾಜಕೀಯ ಆಯ್ಕೆಗೆ ಮಾನದಂಡವಾಗಬಾರದು. ಅವರು ರಾಜಕೀಯಕ್ಕೆ ಬಂದಾಗ ನಾವು ಹುಟ್ಟಿರಲಿಲ್ಲ. ಕಳೆದ 22 ವರ್ಷಗಳಲ್ಲಿ ನಮ್ಮ ಶಿಕ್ಷಣ ಸಂಸ್ಥೆಯ ಮೂಲಕ ವಿದ್ಯಾಭ್ಯಾಸ ನಡೆಸಿದ ವಿದ್ಯಾರ್ಥಿಗಳ ಮೂಲಕ ಹಲವಾರು ಕುಟುಂಬಗಳು ಬಡತನ ರೇಖೆಯಿಂದ ಮೇಲಕ್ಕೆ ಬಂದಿದೆ. ನಮ್ಮ ಶಿಕ್ಷಣ ಸಂಸ್ಥೆಯನ್ನು ನಾವು ಕಾನೂನು ಚೌಕಟ್ಟಿನಲ್ಲಿ ನಡೆಸುತ್ತಿದ್ದೇವೆ. ಅಭಿವೃದ್ಧಿಯ ವಿಚಾರದಲ್ಲಿ ನಾವು ಸರ್ಕಾರದ ಜೊತೆ ಕೈಜೋಡಿಸುತ್ತೇವೆ. ಇದೇ ಸಮಯದಲ್ಲಿ ನಿಮ್ಮ ಸಂಪಾದನೆ ಮಾರ್ಗ ಏನು? ಯಾವುದಾದರೂ ವೇದಿಕೆಯಲ್ಲಿ ಚರ್ಚಿಸಲು ಸಿದ್ಧ ಎಂದು ಮಾಜಿ ಸಚಿವ ಜಯಚಂದ್ರ ಅವರ ಹೆಸರು ಉಲ್ಲೇಖಿಸದೆ ಟಾಂಗ್ ನೀಡಿದರು.

ಶಾಸಕ ರಾಜೇಶ್ ಗೌಡ ಯುವಕರಾಗಿದ್ದು, ಬಹುತೇಕ ನಾವಿಬ್ಬರು ಒಟ್ಟಿಗೆ ಶಾಸಕರಾಗಿ ಆಯ್ಕೆಗೊಂಡಿದ್ದೇವೆ. ಶಿರಾ ಕ್ಷೇತ್ರದಲ್ಲಿ ಗೆದ್ದು ನಮಗೆ ಕೇವಲ ಎರಡುವರೆ ವರ್ಷ ಅಷ್ಟೇ, ಅದರಲ್ಲಿ ಆರು ತಿಂಗಳು ಚುನಾವಣೆಗಾಗಿ ಸಮಯ ತೆಗೆದುಕೊಂಡರೆ, ನಮಗೆ ಸಿಕ್ಕಿದ್ದು ಕೇವಲ ಎರಡು ವರ್ಷ ಅವಧಿ ಮಾತ್ರ, ಸಿಕ್ಕ ಅವಧಿಯಲ್ಲಿ ಸಾಕಷ್ಟು ಕೆಲಸ ಮಾಡಿರುವ ಬಗ್ಗೆ ನಮಗೆ ತೃಪ್ತಿ ಇದೆ. ತಾಲೂಕಿನ ಅಭಿವೃದ್ಧಿ ಬಿಟ್ಟರೆ ನಮಗೆ ಬೇರೆ ಗುರಿಯಿಲ್ಲ. ನಾವು ಸಮರ್ಥರಿದ್ದು ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಲಿದ್ದೇವೆ. ಅಭಿವೃದ್ಧಿಗಾಗಿ ಮತದಾರರು ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದರು.

ಪಕ್ಷದ ತಾಲೂಕು ಅಧ್ಯಕ್ಷ ರಂಗಸ್ವಾಮಿ, ನಗರಾಧ್ಯಕ್ಷ ವಿಜಯರಾಜ್, ಹನುಮಂತ ಗೌಡ, ಓಂಕಾರ್, ಕುಮಾರ್, ರವಿ, ಸಿದ್ದಲಿಂಗಪ್ಪ, ನೇರಳಗುಡ್ಡ ಶಿವಕುಮಾರ್ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!