9121 ಮತದಾರರಿಂದ ಹೋಂ ಓಟಿಂಗ್

116

Get real time updates directly on you device, subscribe now.


ತುಮಕೂರು: ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಪೈಕಿ ಮೇ 6ರವರೆಗೆ 80 ವರ್ಷ ಮೇಲ್ಪಟ್ಟ 6333 ಹಾಗೂ 2788 ಸೇರಿ 9121 ಗೈರು ಮತದಾರರು ಮನೆಯಿಂದಲೇ ಅಂಚೆ ಮೂಲಕ ಮತದಾನ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಕೆಸ್ವಾನ್ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾ ಅಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಮಾತನಾಡಿ, ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ 55,822 ಹಾಗೂ 29,920 ವಿಕಲಚೇತನ ಮತದಾರರು ಸೇರಿ 85,742 ಗೈರು ಮತದಾರರಿದ್ದು, ಈ ಪೈಕಿ 9440 ಮತದಾರರು ಮಾತ್ರ ಹೋಂ ಓಟಿಂಗ್ ಮೂಲಕ ಮತದಾನ ಮಾಡಲು ಒಪ್ಪಿಗೆ ಸೂಚಿಸಿದ್ದರು. ಒಪ್ಪಿಗೆ ಸೂಚಿಸಿದ್ದ 9440 ಗೈರು ಮತದಾರರ ಪೈಕಿ 9121 ಮತದಾರರು ಮನೆಯಿಂದಲೇ ಮತ ಚಲಾಯಿಸಿದ್ದಾರೆ ಎಂದು ತಿಳಿಸಿದರು.

ಅಲ್ಲದೆ ರೈಲ್ವೆ, ಆಸ್ಪತ್ರೆ, ಮತ್ತಿತರ ಇಲಾಖೆಗಳಲ್ಲಿ ಅಗತ್ಯ ಸೇವೆಯಲ್ಲಿರುವ 482 ಅಧಿಕಾರಿ, ಸಿಬ್ಬಂದಿ ಪೈಕಿ ಮೇ 4ರ ವರೆಗೆ 406 ಮತದಾರರು ಅಂಚೆ ಮೂಲಕ ಮತದಾನ ಮಾಡಿದ್ದಾರೆ ಎಂದು ತಿಳಿಸಿದರು.
ಮತದಾನ ದಿನದಂದು ಮತಗಟ್ಟೆಗಳಲ್ಲಿ ಗದ್ದಲ, ಗಲಾಟೆ, ಸಮಸ್ಯೆ ಉಂಟಾದರೆ ಸಂಬಂಧಿಸಿದ ಸೆಕ್ಟರ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರಲ್ಲದೆ ಅಂಚೆ ಮತಪತ್ರಗಳನ್ನು ಸೀಲ್ ಮಾಡಿ ಮೇ 12 ರಂದು ಸಿಎಪಿಎಫ್ ಭದ್ರತೆಯೊಂದಿಗೆ ನಗರದಲ್ಲಿರುವ ಸ್ಟ್ರಾಂಗ್ ರೂಂನಲ್ಲಿಡಬೇಕು. ಈ ಕುರಿತು ಕಡ್ಡಾಯವಾಗಿ ಅಭ್ಯರ್ಥಿಗಳಿಗೆ ಮಾಹಿತಿ ನೀಡಬೇಕು ಎಂದು ನಿರ್ದೇಶನ ನೀಡಿದರು.

ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ವಿದ್ಯುತ್ ಸರಬರಾಜು ನಿರಂತರವಾಗಿರಬೇಕು. ಮತದಾನ ಮಾಡಲು ಅನುವಾಗುವಂತೆ ಮತದಾರರಿಗೆ ಮೂಲಭೂತ ಸೌಲಭ್ಯಗಳೊಂದಿಗೆ ನೆರಳಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚನೆ ನೀಡಿದರು.
ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿರುವ ಅಧಿಕಾರಿ, ಸಿಬ್ಬಂದಿ ಮಸ್ಟರಿಂಗ್ ಹಾಗೂ ಡಿಮಸ್ಟರಿಂಗ್ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಸಭೆಯಲ್ಲಿ ಪಾಲಿಕೆ ಆಯುಕ್ತ ಹಾಗೂ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಹೆಚ್.ವಿ.ದರ್ಶನ್, ಜಿಲ್ಲಾ ಪಂಚಾಯತ್ ಸಿಇಓ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷೆ ಡಾ.ಕೆ.ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಉಪ ವಿಭಾಗಾಧಿಕಾರಿ ಹೋಟೆಲ್ ಶಿವಪ್ಪ, ಭೂದಾಖಲೆಗಳ ಇಲಾಖೆ ಉಪನಿರ್ದೇಶಕ ಸುಜಯ್ ಮತ್ತಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!