11 ಕ್ಷೇತ್ರದಲ್ಲಿ ಮತದಾನಕ್ಕೆ ಸಕಲ ಸಿದ್ಧತೆ: ಡೀಸಿ

ಮತಗಟ್ಟೆಗಳಲ್ಲಿ ಬಿಗಿ ಪೊಲೀಸ್ ಭದ್ರತೆ - ಮತಗಟ್ಟೆಗೆ ತೆರಳಲು ಸಿಬ್ಬಂದಿಗೆ ವಾಹನ ವ್ಯವಸ್ಥೆ

160

Get real time updates directly on you device, subscribe now.


ತುಮಕೂರು: ವಿಧಾನಸಭಾ ಚುನಾವಣೆ ಮತದಾನಕ್ಕೆ ಕೇವಲ 2 ದಿನ ಬಾಕಿ ಉಳಿದಿದ್ದು, ಶಾಂತಿಯುತ ಮತದಾನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಭ್ಯರ್ಥಿಗಳಿಗೆ ಕಡೆಯ 48 ಗಂಟೆಗಳಲ್ಲಿ ಮನೆ – ಮನೆ ಭೇಟಿ ನೀಡಿ ಮತ ಯಾಚಿಸಲು ಅವಕಾಶವಿರುತ್ತದೆ. ಅವರೊಂದಿಗೆ 4 ಜನ ತೆರಳಲು ಮಾತ್ರ ಮನೆ ಭೇಟಿಗೆ ಅವಕಾಶವಿರುತ್ತದೆ ಎಂದು ತಿಳಿಸಿದರು.
ಮೇ 8 ರ ಸಂಜೆ 6 ಗಂಟೆಯ ನಂತರ ಸಂಬಂಧಪಟ್ಟ ವಿಧಾನಸಭಾ ಕ್ಷೇತ್ರದ ಮತದಾರರಲ್ಲದ ರಾಜಕೀಯ ಕಾರ್ಯಕರ್ತರು ಹಾಗೂ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿರುವ ಮತದಾರರಲ್ಲದ ಹೊರಗಿನ ರಾಜಕೀಯ ಕಾರ್ಯಕರ್ತರು, ಮುಖಂಡರು ಬಹಿರಂಗ ಪ್ರಚಾರದ ಗಡುವು ಮುಕ್ತಾಯವಾದ ನಂತರ ವಿಧಾನಸಭಾ ಕ್ಷೇತ್ರಗಳಲ್ಲಿ ವಾಸ್ತವ್ಯ ಮಾಡುವಂತಿಲ್ಲ. ವಿಧಾನಸಭಾ ಕ್ಷೇತ್ರ ಬಿಟ್ಟು ತೆರಳತಕ್ಕದ್ದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ 22,47,932 ಮತದಾರರು
ಜಿಲ್ಲೆಯಲ್ಲಿ ಒಟ್ಟು 11,20,698 ಪುರುಷ ಮತದಾರರು, 11,27,126 ಮಹಿಳಾ ಮತದಾರರು, 108 ಇತರೆ ಸೇರಿದಂತೆ ಜಿಲ್ಲೆಯಲ್ಲಿ 22,47,932 ಮತದಾರರು ಹಾಗೂ 776 ಸೇವಾ ಮತದಾರರು ತಮ್ಮ ಮತ ಚಲಾಯಿಸಲಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 2683 ಮತಗಟ್ಟೆಗಳಿದ್ದು, 11,644 ಮತಗಟ್ಟೆ ಅಧಿಕಾರಿಗಳು, 2683 ಗ್ರೂಪ್ ಡಿ ನೌಕರರು, 345 ಮೈಕ್ರೋ ಅಬ್ಸರ್ವರ್ ಗಳನ್ನು ನೇಮಿಸಲಾಗಿದೆ ಎಂದರು.

ಮತ ಎಣಿಕೆ ಸ್ಥಳ ನಿಗದಿ
128- ಚಿ.ನಾ.ಹಳ್ಳಿ, 129- ತಿಪಟೂರು, 130- ತುರುವೇಕೆರೆ ವಿಧಾನಸಭಾ ಕ್ಷೇತ್ರದ ಎಣಿಕೆಯನ್ನು ತುಮಕೂರು ವಿಶ್ವ ವಿದ್ಯಾಲಯದ ಕಲಾ ಕಾಲೇಜು, 131- ಕುಣಿಗಲ್, 132- ತುಮಕೂರು ನಗರ, 133- ತುಮಕೂರು ಗ್ರಾಮಾಂತರ, 135- ಗುಬ್ಬಿ ಕ್ಷೇತ್ರದ ಎಣಿಕೆ ತುಮಕೂರು ವಿವಿ ವಿಜ್ಞಾನ ಕಾಲೇಜು ಹಾಗೂ 134- ಕೊರಟಗೆರೆ, 136- ಶಿರಾ, 137- ಪಾವಗಡ, 138- ಮಧುಗಿರಿ ಕ್ಷೇತ್ರದ ಮತ ಎಣಿಕೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಇಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಮಾರ್ಚ್ 29 ರಿಂದ ಮೇ 7ರವರೆಗೆ 90,468.35 ಲೀ. ಒಟ್ಟು 2.94 ಕೋಟಿ ಮೊತ್ತದ ಮದ್ಯ ಮತ್ತು ದಾಖಲೆ ಇಲ್ಲದ 1,89,24,855 ನಗದು ವಶಪಡಿಸಿಕೊಳ್ಳಲಾಗಿದ್ದು, 69,73,624 ಮೊತ್ತದ ಉಚಿತ ಉಡುಗೊರೆಗಳು, 14 ಲಕ್ಷ ಮೌಲ್ಯದ 250 ಗ್ರಾಂ ಚಿನ್ನ ಮತ್ತು 42500 ರೂ. ಮೊತ್ತದ 1.09ಕೆ.ಜಿ. ಗಾಂಜಾ ಸೇರಿದಂತೆ ಒಟ್ಟು 5.67 ಕೋಟಿ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಂಸಿಸಿ ಉಲ್ಲಂಘನೆಗೆ ಸಂಬಂಧಿಸಿದಂತೆ ಒಟ್ಟು 66 ಪ್ರಕರಣಗಳಿಗೆ ಎಫ್ಐಆರ್ ದಾಖಲಿಸಲಾಗಿದೆ ಎಂದರು.
ಚುನಾವಣೆ ದಿನದಂದು ಮತಗಟ್ಟೆಯ 200 ಮೀಟರ್ ಒಳಗೆ ಯಾವುದೇ ಪ್ರಚಾರ ಮಾಡಲು ಅವಕಾಶವಿರುವುದಿಲ್ಲ. ಮತಗಟ್ಟೆಗಳಲ್ಲಿ ಪಿಆರ್ಓ ಮತ್ತು ಮೈಕ್ರೋ ಅಬ್ಸರ್ವರ್ ಹೊರತುಪಡಿಸಿ ಉಳಿದ ಜನರಿಗೆ ಮೊಬೈಲ್ ಬಳಸಲು ಅವಕಾಶವಿರುವುದಿಲ್ಲ. ಮೈಕ್ ಬಳಸಲು ಅವಕಾಶವಿರುವುದಿಲ್ಲ. ಆದರೆ 200 ಮೀಟರ್ ನಂತರ ಅಭ್ಯರ್ಥಿಗಳಿಗೆ ಒಂದು ಟೇಬಲ್, 2 ಕುರ್ಚಿ ಮತ್ತು 3*5 ಒಂದು ಬ್ಯಾನರ್ ಅಳವಡಿಸಲು ಅವಕಾಶವಿದೆ. ಆದರೆ ಯಾವುದೇ ಕರ ಪತ್ರ ನೀಡಲು ಅವಕಾಶವಿರುವುದಿಲ್ಲ. ಮತಗಟ್ಟೆಯೊಳಗೆ ಯಾವುದೇ ಆಯುಧ ತೆಗೆದುಕೊಂಡು ಹೋಗಲು ನಿರ್ಬಂಧವಿರುತ್ತದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್ ವಾಡ್ ಮಾತನಾಡಿ, ಜಿಲ್ಲೆಯಲ್ಲಿ 3000 ಪೊಲೀಸನ್ನು ಮತಗಟ್ಟೆ ಕರ್ತವ್ಯಕ್ಕೆ ನೇಮಿಸಲಾಗಿದೆ. 31 ಕಂಪನಿ ಸಿಆರ್ ಪಿಎಫ್, 21 ಬಿಎಸ್ ಎಫ್, 10 ಜಾರ್ಖಂಡ್ ಸೇನಾ ಪೊಲೀಸರು ಮತ್ತು 500 ತಮಿಳುನಾಡು ಪೊಲೀಸರು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ವಿವರಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷೆ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ಜಿಲ್ಲೆಯಲ್ಲಿ ಸ್ವೀಪ್ ಚಟುವಟಿಕೆ ವ್ಯಾಪಕವಾಗಿ ಹಮ್ಮಿಕೊಳ್ಳಲಾಗಿದೆ. ಮತದಾರರ ನಡೆ ಮತಗಟ್ಟೆ ಕಡೆ ಕಾರ್ಯಕ್ರಮ ಸಹ ಯಶಸ್ವಿಯಾಗಿ ಜಿಲ್ಲೆಯಾದ್ಯಂತ ಏರ್ಪಡಿಸಲಾಗಿದ್ದು, ಯುವ ಮತದಾರರು, ಸಖಿ ಹಾಗೂ ದಿವ್ಯಾಂಗ ಮತಗಟ್ಟೆ ಸ್ಥಾಪಿಸಲಿದ್ದು, 265 ಮತಗಟ್ಟೆಗಳು ಜಿಲ್ಲೆಯ ವಿಶೇಷತೆ ಬಿಂಬಿಸಲಿವೆ. ಸೋಮನ ಕುಣಿತ, ವೀರಗಾಸೆ ಥೀಮ್ ಬಳಸಿ ಮತಗಟ್ಟೆಗಳನ್ನು ಅಲಂಕರಿಸಲಾಗಿದೆ. ಜಿಲ್ಲೆಯಲ್ಲಿ 80+ ಮತ್ತು ದಿವ್ಯಾಂಗ ಮತದಾರರಿಗೆ ರ್ಯಾಂಪ್, ರೈಲಿಂಗ್, ಕುಡಿಯುವ ನೀರು, ವೀಲ್ ಚೇರ್, ಬೂತಗನ್ನಡಿ, ಬ್ರೈಲ್ ವ್ಯವಸ್ಥೆ, ಶೌಚಾಲಯ, ವಿಶ್ರಾಂತಿ ಕೊಠಡಿ ಮುಂತಾದ ವ್ಯವಸ್ಥೆ ಚುನಾವಣಾ ಆಯೋಗದ ನಿರ್ದೇಶನುಸಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಪಾಲಿಕೆ ಆಯುಕ್ತ ಹೆಚ್.ವಿ.ದರ್ಶನ್ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!