ಮತ ಜಾಗೃತಿ ಅಭಿಯಾನದ ಅಂಗವಾಗಿ ಜನ ಪ್ರತಿಜ್ಞೆ

143

Get real time updates directly on you device, subscribe now.


ತುಮಕೂರು: ಕಳೆದ 2 ತಿಂಗಳಿನಿಂದ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ನಡೆದ ಸಂವಿಧಾನ ರಕ್ಷಿಸಿ ಬಹುತ್ವ ಕರ್ನಾಟಕ ಉಳಿಸಿ ನಮ್ಮ ಮತ ವಸತಿ ಹಕ್ಕಿಗಾಗಿ, ನಗರ ಉದ್ಯೋಗ ಖಾತ್ರಿ, ಬಡತನ ಮುಕ್ತಕ್ಕಾಗಿ ಮತ್ತು ಸ್ಲಂ ಜನರ ಸಮಗ್ರ ವಿಮೋಚನೆಗಾಗಿ ಮತ ಜಾಗೃತಿ ಅಭಿಯಾನ ಭಾಗದ ಅಂಗವಾಗಿ ಮತದಾರರ ಪ್ರಜಾ ಪ್ರತಿಜ್ಞಾ ದಿನವನ್ನು ಯುವಜನ ಸಂಪನ್ಮೂಲ ಕೇಂದ್ರದಲ್ಲಿ ಸ್ವೀಕರಿಸುವ ಮೂಲಕ ಸಮಾರೋಪ ಗೊಳಿಸಲಾಯಿತು.

ಜನ ಪ್ರತಿಜ್ಞೆ ಭೋದಿಸಿ ಮಾತನಾಡಿದ ಸ್ಲಂ ಜನಾಂದೋಲನ ಕರ್ನಾಟಕದ ಎ.ನರಸಿಂಹಮೂರ್ತಿ, 32 ಕೊಳಚೆ ಪ್ರದೇಶಗಳಲ್ಲಿ ನಡೆದ ಜಾಗೃತಿ ಕೊಳಗೇರಿ ಜನರಲ್ಲಿ ರಾಜಕೀಯ ಪ್ರಜ್ಞೆ ತಂದು ಕೊಟ್ಟಿದೆ. ಸಂವಿಧಾನದ ಸಮಪಾಲು ಸಮಬಾಳು ಆಶಯ ಘೋಷಿಸಿರುವ ಪಕ್ಷದ ಮೇಲೆ ಜನರ ಒಲವು ಕಂಡು ಬರುತ್ತಿದೆ. ಆದರೆ ಚುನವಾಣೆಯ 2 ದಿನಗಳ ಮುಂಚಿತವಾಗಿ ಕೊಳಗೇರಿಗಳು ಸೇರಿದಂತೆ ನಗರದ ಮಧ್ಯಮ ವರ್ಗದ ಪ್ರದೇಶ ಹಾಗೂ ಬಡಾವಣೆಗಳಲ್ಲಿ ಆಡಳಿತ ರೂಡ ಮತ್ತು ಇತರೆ ಪಕ್ಷಗಳು ಚುನಾವಣಾ ಆಯೋಗದ ಕಣ್ಣುತಪ್ಪಿಸಿ ಹಣದ ಆಮಿಷ ಮತ್ತು ಪ್ರಲೋಪನೆಗಳಿಂದ ಪ್ರಜಾತಂತ್ರವನ್ನು ದಿಕ್ಕು ತಪ್ಪಿಸುತ್ತಿರುವುದು ಸ್ಪಷ್ಟವಾಗಿದೆ. ಹಾಗಾಗಿ ಚುನಾವಣಾ ಆಯೋಗ ಇನ್ನೂ ಹೆಚ್ಚಿನ ಸುಧಾರಣೆಗಳ ಮೂಲಕ ಪ್ರಜಾತಂತ್ರ ಎತ್ತಿ ಹಿಡಿಯಬೇಕಿದೆ.
ನಮ್ಮ ಜಾಗೃತಿಯಿಂದ ಎಲ್ಲಾ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಸ್ಲಂ ಜನರ ಸಮಸ್ಯೆಗಳ ಮೇಲೆ ಮಾತನಾಡಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಜನಪ್ರತಿಜ್ಞೆ ಭೋದಿಸಿದರು. ಅದರಂತೆ ಸರ್ವ ಜನಾಂಗದ ಶಾಂತಿಯ ತೋಟವಾದ ನಮ್ಮ ಕರ್ನಾಟಕದ ಭವಿಷ್ಯ ನಿರ್ಧರಿಸಲಿರುವ ಈ ಚುನಾವಣೆ ಸಂದರ್ಭದಲ್ಲಿ ಆತ್ಮ ಗೌರವವುಳ್ಳ ಭಾರತದ ಪ್ರಜೆಯಾದ ನಾವು ಈ ಸಾರ್ವಜನಿಕ ಪ್ರತಿಜ್ಞೆ ಕೈಗೊಳ್ಳುತ್ತೇವೆ. ನಾವು ಹಣ, ಹೆಂಡ, ಜಾತಿ, ಧರ್ಮ, ಮೊದಲಾದ ಯಾವುದೇ ಆಮಿಷಗಳಿಗೆ ಬಲಿಯಾಗುವುದಿಲ್ಲ, ನನಗಾಗಿ ನನ್ನ ಜನರ ಹಿತಕ್ಕಾಗಿ ಕರ್ನಾಟಕದ ಭವಿಷ್ಯಕ್ಕಾಗಿ ಮತ ಚಲಾಯಿಸುತ್ತೇನೆ.

ಕಳೆದ 4 ವರ್ಷಗಳಿಂದ ರಾಜ್ಯವನ್ನು ದಿವಾಳಿಗೆ ತಳ್ಳಿರುವ ಜನ ವಿರೋಧಿ ಭ್ರಷ್ಟ ಪಕ್ಷದ ವಿರುದ್ಧ ಮತ ಚಲಾಯಿಸಿ ಫ್ಯಾಸಿಸ್ಟ್ ಶಕ್ತಿಗಳನ್ನು ಸೋಲಿಸಬಲ್ಲ ಅಭ್ಯರ್ಥಿಗಳಿಗೆ ಮಾತ್ರ ಮತ ಹಾಕುತ್ತೇವೆ. ಮುಂದೆ ಯಾವುದೇ ಪಕ್ಷ ಯಾವುದೆ ಅಭ್ಯರ್ಥಿ ಅಧಿಕಾರಕ್ಕೆ ಬಂದರು ಜನಹಿತಕ್ಕಾಗಿ ಸಮಾನ ಮನಸ್ಕರ ಜೊತೆಗೂಡಿ ಹೋರಾಟ ಮುಂದುವರೆಸುತ್ತೇವೆ ಮತ್ತು ಪ್ರಜಾ ಪ್ರಭುತ್ವವನ್ನು ಕಾಪಾಡಿಕೊಳ್ಳುತ್ತೇವೆ. ಸಂವಿಧಾನ ವಿರೋಧಿ ಪಕ್ಷಕ್ಕೆ ಸೋಲಾಗಲಿ, ಜನತೆಯ ಆಶಯಗಳಿಗೆ ಜಯವಾಗಲಿ ಎಂದು ಪ್ರತಿಜ್ಞೆ ಪದಾಧಿಕಾರಿಗಳಿಗೆ ಭೋದಿಸಿದರು.

ಈ ಸಂದರ್ಭದಲ್ಲಿ ಗೌರವಧ್ಯಕ್ಷೆ ದೀಪಿಕಾ, ಉಪಾಧ್ಯಕ್ಷ ಶಂಕ್ರಯ್ಯ, ಪದಾಧಿಕಾರಿಗಳಾದ ಅರುಣ್, ತಿರುಮಲಯ್ಯ, ಜಾಬೀರ್ ಖಾನ್, ರಂಗನಾಥ್, ಮಂಗಳಮ್ಮ, ಶಾರದಮ್ಮ, ಗಂಗಾ, ಕೃಷ್ಣಮೂರ್ತಿ, ಮೋಹನ್ ಮುಂತಾದವರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!